ಔಷಧಾಲಯಗಳು ಮುಚ್ಚದೇ ಪ್ರತಿಭಟನೆ ನಡೆಸಲು ಮನವಿ

Update: 2018-09-26 14:51 GMT

ಬೆಂಗಳೂರು, ಸೆ.26: ಕೇಂದ್ರ ಸರಕಾರ ಆನ್‌ಲೈನ್‌ನಲ್ಲಿ ಔಷಧಿ ಮಾರಾಟಕ್ಕೆ ಅನುಮತಿ ನೀಡುತ್ತಿರುವುದನ್ನು ವಿರೋಧಿಸಿ ಔಷಧಾಲಯಗಳನ್ನು ಮುಚ್ಚದೆ ಶಾಂತಿಯುತವಾಗಿ ಸೆ.28ರಂದು ಪ್ರತಿಭಟನೆ ನಡೆಸುವಂತೆ ಬೃಹತ್ ಬೆಂಗಳೂರು ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ ಸಂಘ ಮನವಿ ಮಾಡಿದೆ.

ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಕೆ.ಮಾಯಣ್ಣ, ಕೇಂದ್ರ ಸರಕಾರ ಇ-ಫಾರ್ಮಸಿ ಮೂಲಕ ಆನ್‌ಲೈನ್‌ನಲ್ಲಿ ಔಷಧಿಗಳ ಮಾರಾಟಕ್ಕೆ ಅನುಮತಿ ನೀಡುತ್ತಿರುವ ಜಿಎಸ್‌ಆರ್ 817 (ಇ) ನಿಯಮಾವಳಿಗಳನ್ನು ಜಾರಿಗೊಳಿಸಲು ಅಧಿಸೂಚನೆ ಹೊರಡಿಸಲಾಗಿದೆ. ಇದನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಒತ್ತಾಯಿಸಿ ಸೆ.28ರಂದು ಟೌನ್‌ಹಾಲ್ ಮುಂಭಾಗದಲ್ಲಿ ಬೆಳಗ್ಗೆ 10ಕ್ಕೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ರೋಗಿಗಳಿಗೆ ತೊಂದರೆಯಾಗದಂತೆ ಔಷಧಾಲಯಗಳನ್ನು ತೆರೆದು ಕಪ್ಪುಪಟ್ಟಿ ಧರಿಸಿ ನಮ್ಮ ಸಂಘದ ಸದಸ್ಯರು ಪ್ರತಿಭಟನೆ ನಡೆಸುತ್ತಾರೆ. ಅದೇ ರೀತಿ ಉಳಿದ ಸಂಘಟನೆಯ ಸದಸ್ಯರು ಔಷಧಾಲಯಗಳನ್ನು ತೆರೆದು ಪ್ರತಿಭಟನೆ ನಡೆಸಬೇಕು. ಔಷಧಾಲಯಗಳನ್ನು ಮುಚ್ಚುವುದರಿಂದ ಸಾವಿರಾರು ರೋಗಿಗಳಿಗೆ ತೊಂದರೆಯಾಗಲಿದೆ. ರೋಗಿಗಳಿಗೆ ತೊಂದರೆಯನ್ನುಂಟು ಮಾಡಿ ಪ್ರತಿಭಟನೆ ನಡೆಸಬಾರದು ಎಂದು ಮನವಿ ಮಾಡಿದರು.

ಈ ಹಿಂದೆ ಆನ್‌ಲೈನ್ ಔಷಧಿಗಳ ಸರಬರಾಜಿಗೆ ಅನುಮತಿ ನೀಡಿದರೆ ಶೆಡ್ಯೂಲ್ ಎಚ್1 ಮತ್ತು ಮತ್ತುಭರಿಸುವ ಔಷಧಿಗಳ ದುರ್ಬಳಕೆಯಾಗುವ ಸಾಧ್ಯತೆ ಇರಲಿದೆ. ಯುವ ಸಮುದಾಯ ನಿಷೇಧಿತ ಔಷಧಿಗಳ ದಾಸರಾಗುವ ಸಾಧ್ಯತೆ ಇರುತ್ತದೆ. ವೈದ್ಯರ ಸಲಹೆ ಇಲ್ಲದೆ ರೋಗನಿರೋಧಕ ಔಷಧಿಗಳನ್ನು ಮಾರಾಟ ಮಾಡುವ ಅಪಾಯವಿದೆ. ರೋಗನಿರೋಧಕ ಔಷಧಿಗಳನ್ನು ಮಾರಾಟದ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ವೈದ್ಯರ ಸಲಹೆ ಇಲ್ಲದೆ ಅವುಗಳನ್ನು ನೀಡುವಂತಿಲ್ಲ. ಔಷಧ ನಿಯಂತ್ರಣವಿರುವುದಿಲ್ಲ. 1940ರ ಔಷಧಿ ಮತ್ತು ಕಾಂತಿವರ್ಧಕ ಕಾಯ್ದೆಯ ವಿರುದ್ಧವಾಗಿ ಜಿಎಸ್‌ಆರ್ 817 (ಇ) ಅಧಿಸೂಚನೆ ಇದೆ. ಹೀಗಾಗಿ ಕೇಂದ್ರ ಸರಕಾರ ಈ ಕಾಯ್ದೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News