ಬೆಂಗಳೂರು: ಹೃದಯಘಾತ ಚಿಕಿತ್ಸೆಯ ತರಬೇತಿ ಪಡೆದ ಪೊಲೀಸರು

Update: 2018-09-26 14:52 GMT

ಬೆಂಗಳೂರು, ಸೆ.26: ಸಾರ್ವಜನಿಕರು ಹೃದಯಾಘಾತ ಅಥವಾ ಹೃದಯ ಸ್ತಂಭನದಿಂದ ಕುಸಿದು ಬಿದ್ದರೆ ಅವರಿಗೆ ಪ್ರಥಮ ಚಿಕಿತ್ಸೆ ನೀಡುವ ಕುರಿತು ನಗರದ ಸಂಚಾರ ಪೊಲೀಸರು ತರಬೇತಿ ಪಡೆದುಕೊಂಡರು.

ಬುಧವಾರ ನಗರದ ವಿಕ್ರಮ್ ಆಸ್ಪತ್ರೆಯಲ್ಲಿ ವಿವಿಧ ಸಂಚಾರ ಪೊಲೀಸ್ ಠಾಣೆಗಳ 20ಕ್ಕೂ ಹೆಚ್ಚು ಸಿಬ್ಬಂದಿ ವಿಶ್ವ ಹೃದಯ ದಿನದ ಅಂಗವಾಗಿ ಆಯೋಜಿಸಿದ್ದ, ಸಿಪಿಆರ್ ತರಬೇತಿಯಲ್ಲಿ ಪಾಲ್ಗೊಂಡು, ತುರ್ತು ಸಂದರ್ಭದಲ್ಲಿ ನೀಡುವ ಪ್ರಥಮ ಚಿಕಿತ್ಸೆ ಕುರಿತು ಪೊಲೀಸರಿಗೆ ಬೊಂಬೆಗಳನ್ನು ಬಳಸಿ ಪ್ರಥಮ ಚಿಕಿತ್ಸೆ ಮಾಡುವುದನ್ನು ಕಲಿಸಿದರು.

ಈ ಕುರಿತು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಮಾತನಾಡಿ, ಸಂಚಾರ ಪೊಲೀಸರು ಪ್ರತಿ ದಿನ ವಾಹನ ದಟ್ಟಣೆಯಲ್ಲಿ ಕೆಲಸ ಮಾಡುತ್ತಾರೆ. ಒತ್ತಡದಿಂದಾಗಿ ಅವರು ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವುದು ಹೆಚ್ಚು. ಇಂತಹ ಸಂದರ್ಭಗಳಲ್ಲಿ ಒಬ್ಬರನ್ನೊಬ್ಬರು ಉಪಚರಿಸುವುದನ್ನು ಕಲಿತು ಕೊಂಡಿರಬೇಕು. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದಲೂ ಇದು ಒಳ್ಳೆಯದು ಎಂದು ನುಡಿದರು.

ಹೃದಯ ರೋಗ ತಜ್ಞ ಡಾ.ಪಿ.ರಂಗನಾಥ್ ನಾಯಕ್ ಮಾತನಾಡಿ, ಬಡ ಕುಟುಂಬದ ರೋಗಿಗಳು ಹಣ ಹೊಂದಿಸುವುದು, ಆಸ್ಪತ್ರೆ ಅಲೆಯುವುದರಲ್ಲೇ ಹೈರಾಣಾಗುತ್ತಾರೆ. ಅದರ ಬದಲು ಧೂಮಪಾನ ಬಿಟ್ಟು, ವ್ಯಾಯಾಮ ಹಾಗೂ ಕಟ್ಟುನಿಟ್ಟಿನ ಜೀವನ ಶೈಲಿ ಅನುಸರಿಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

ತುರ್ತುಚಿಕಿತ್ಸೆ ವಿಭಾಗದ ಡಾ. ಹರ್ಷಿತಾ ಶ್ರೀಧರ್, ಸಂಚಾರ ಪೊಲೀಸರಿಗೆ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ವಿಕ್ರಂ ಆಸ್ಪತ್ರೆ ಸಿಟಿಎಸ್ ಸರ್ಜನ್, ಡಾ.ಗೋಪಾಲಕೃಷ್ಣನ್ ಟಿ.ಅಯ್ಯರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News