ವಿದ್ಯಾರ್ಥಿಗಳು ಹೊಸ ಆವಿಷ್ಕಾರದತ್ತ ಗಮನಹರಿಸಬೇಕು: ಪ್ರೊ.ದೀಪಂಕರ್ ಶರ್ಮ

Update: 2018-09-26 14:57 GMT

ಬೆಂಗಳೂರು, ಸೆ. 26: ಇಂಜಿನಿಯರಿಂಗ್ ಮತ್ತು ವಿಜ್ಞಾನ ಬೇರೆಯಲ್ಲ. ಇವು ಪರಸ್ಪರ ಬೆಸೆದುಕೊಂಡಿದ್ದು, ಇದರ ಸಹಾಯದಿಂದ ಹೊಸ ಆವಿಷ್ಕಾರಗಳು ಹೊರಬರಬೇಕು ಎಂದು ಭಾರತೀಯ ವಿಜ್ಞಾನ ಮಂದಿರ(ಐಐಎಸ್ಸಿ) ಪ್ರೊ. ದೀಪಂಕರ್ ದಾಸ್ ಶರ್ಮ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ಇಲ್ಲಿನ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಇಂಜಿನಿಯರಿಂಗ್-ವಿಜ್ಞಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು’ ಎಂಬ ವಿಷಯ ಕುರಿತ 3ನೆ ಅಂತರ್‌ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.

ಬಹುತೇಕ ಜನರು ಇಂಜಿನಿಯರಿಂಗ್ ಮತ್ತು ವಿಜ್ಞಾನ ಎಂದರೆ ಬೇರೆ ಎಂದು ಭಾವಿಸುತ್ತಾರೆ. ಆದರೆ, ಇದು ತಪ್ಪು. ಇವರೆಡರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ವಿಜ್ಞಾನವಿಲ್ಲದೆ ಇಂಜಿನಿಯರಿಂಗ್ ಊಹಿಸಿಕೊಳ್ಳುವುದಕ್ಕೂ ಕಷ್ಟ. ವಿಜ್ಞಾನ ವಿದ್ಯಾರ್ಥಿಗಳ ಕಲಿಕೆಯ ಭಾಗವಾಗಿರಲಿದೆ ಎಂದು ಅವರು ಸಲಹೆ ಮಾಡಿದರು.

ಇಂಜಿನಿಯರಿಂಗ್ ಮತ್ತು ವಿಜ್ಞಾನ ಸಂಮಿಶ್ರಣದಿಂದ ವಿದ್ಯಾರ್ಥಿಗಳು ಹೊಸ ಪ್ರಯೋಗಗಳನ್ನು ಮಾಡಬೇಕು. ಆವಿಷ್ಕಾರಗಳ ಕಡೆಗೆ ಹೆಚ್ಚಿನ ಒತ್ತು ನೀಡಬೇಕು. ಉದ್ಯೋಗಿಗಳಾಗುವ ಬದಲು ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳುವ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು ಎಂದು ಅವರು ಸೂಚಿಸಿದರು.

ಗೋಕುಲ ಎಜುಕೇಷನ್ ಫೌಂಡೆಷನ್ ಅಧ್ಯಕ್ಷ ಡಾ.ಎಂ.ಆರ್ ಜಯರಾಮ್ ಮಾತನಾಡಿ, ಇಂಜಿನಿಯರಿಂಗ್ ವಿಜ್ಞಾನದಲ್ಲಿ ಇತ್ತೀಚಿನ ದಿನಗಳಲ್ಲಿ ಬೆಳವಣಿಗೆ ಕುರಿತು ನಮ್ಮ ಕಾಲೇಜಿನಲ್ಲಿ ಆಯೋಜಿಸಿರುವ ಈ ಸಮ್ಮೇಳನ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಸಿಬ್ಬಂದಿಗಳಿಗೂ ಅನುಕೂಲವಾಗಲಿದೆ ಎಂದರು.

ನಮ್ಮಲ್ಲಿ ಬಹುತೇಕ ಎಲ್ಲ ಇಂಜಿನಿಯರಿಂಗ್ ವಿಭಾಗಗಳಿವೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮೇರೆಗೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನಮ್ಮಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತೇವೆ. ದೇಶ ಅಭಿವೃದ್ಧಿಗೆ ವಿಜ್ಞಾನ-ತಂತ್ರಜ್ಞಾನ ಆವಿಷ್ಕಾರ ಪ್ರಮುಖ ಅಸ್ತ್ರ ಎಂಬುದನ್ನು ವಿದ್ಯಾರ್ಥಿಗಳು ಮನವರಿಕೆ ಮಾಡಿಕೊಳ್ಳಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News