ಆರ್.ಅಶೋಕ್ ವಿರುದ್ಧದ ಬಗರ್ ಹುಕುಂ ಅಕ್ರಮ ಮಂಜೂರಾತಿ ಪ್ರಕರಣ: ಎಸಿಬಿ ದಾಖಲಿಸಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

Update: 2018-09-26 15:04 GMT

ಬೆಂಗಳೂರು, ಸೆ.26: ಬಗರ್ ಹುಕುಂ ಜಮೀನು ಅಕ್ರಮ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ವಿರುದ್ಧ ಎಸಿಬಿ ದಾಖಲಿಸಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ಐದು ವಾರಗಳ ಕಾಲ ತಡೆಯಾಜ್ಞೆ ನೀಡಿದೆ. ಎಸಿಬಿ ದಾಖಲಿಸಿರುವ ಎಫ್‌ಐಆರ್‌ಗೆ ತಡೆ ಕೋರಿ ಆರ್.ಅಶೋಕ್ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.

ಅರ್ಜಿದಾರರ ಪರ ವಾದಿಸಿದ ವಕೀಲರು, ಆರ್.ಅಶೋಕ್ ವಿರುದ್ಧದ ಬಗರ್ ಹುಕುಂ ಜಮೀನು ಅಕ್ರಮ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್ ಎಸಿಬಿಗೆ ತನಿಖೆ ಮುಂದುವರಿಸಲು ಆದೇಶಿಸಿದೆ. ಆದರೆ, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಆರು ವಾರಗಳ ಕಾಲಾವಕಾಶ ನೀಡಬೇಕು. ಅಲ್ಲಿಯವರೆಗೆ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಎಸಿಬಿ ದಾಖಲಿಸಿದ್ದ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿ ಆದೇಶಿಸಿತು.

ಏನಿದು ಪ್ರಕರಣ: ಆರ್.ಅಶೋಕ್ 1998 ರಿಂದ 2006ರ ಅವಧಿಯವರೆಗೆ ಬೆಂಗಳೂರು ದಕ್ಷಿಣ ತಾಲೂಕು ಬಗರ್ ಹುಕುಂ ಭೂ-ಸಕ್ರಮೀಕರಣ ಸಮಿತಿಯ ಅಧ್ಯಕ್ಷರಾಗಿದ್ದಾಗ ಕಾನೂನು ಬಾಹಿರವಾಗಿ ಅನರ್ಹ ಫಲಾನುಭವಿಗಳಿಗೆ ಭೂ-ಮಂಜೂರಾತಿ ಮಾಡಿದ್ದಾರೆ ಎಂದು ಆರೋಪಿಸಿ ಎ.ಆನಂದ ಎಂಬುವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಈ ದೂರು ಆಧರಿಸಿ ಎಸಿಬಿ ಪೊಲೀಸರು ಅಶೋಕ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಈ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿರುವ ಅಶೋಕ್, ತಾವು ಯಾವುದೇ ಅಕ್ರಮ ನಡೆಸಿಲ್ಲ. ಕೇವಲ ರಾಜಕೀಯ ದುರುದ್ದೇಶದಿಂದ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ, ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿದ್ದರು.

ಜೊತೆಗೆ ಅರ್ಜಿ ಇತ್ಯರ್ಥವಾಗುವವರೆಗೆ ಎಪ್ಐಆರ್ ಆಧರಿಸಿ ತಮ್ಮ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದಂತೆ ಎಸಿಬಿಗೆ ನಿರ್ದೇಶಿಸುವಂತೆ ಮಧ್ಯಂತರ ಮನವಿ ಮಾಡಿದ್ದರು. ಆದರೆ, ಮಂಗಳವಾರ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ನ್ಯಾಯಪೀಠವೇ ಆರ್.ಅಶೋಕ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಎಸಿಬಿಗೆ ತನಿಖೆ ಮುಂದುವರೆಸಲು ಆದೇಶಿಸಿತ್ತು. ಆದರೆ, ಬುಧವಾರ ಆರ್. ಅಶೋಕ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿ, ಎಫ್‌ಐಆರ್‌ಗೆ ತಡೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News