ರೊಹಿಂಗ್ಯರನ್ನು ವಾಪಸ್ ಕರೆಸಿಕೊಳ್ಳಲು ಮ್ಯಾನ್ಮಾರ್‌ನಿಂದ ವಿಳಂಬ ತಂತ್ರ: ಶೇಖ್ ಹಸೀನಾ ಆರೋಪ

Update: 2018-09-27 05:47 GMT

ನ್ಯೂಯಾರ್ಕ್, ಸೆ. 27: ಕಳೆದ ವರ್ಷ ಮ್ಯಾನ್ಮಾರ್ ಸೇನೆ ನಡೆಸಿದ ದಮನ ಕಾರ್ಯಾಚರಣೆಗೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈದ 7 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರನ್ನು ವಾಪಸ್ ಕರೆಸಿಕೊಳ್ಳಲು ಮ್ಯಾನ್ಮಾರ್ ವಿಳಂಬ ತಂತ್ರವನ್ನು ಅನುಸರಿಸುತ್ತಿದೆ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಆರೋಪಿಸಿದ್ದಾರೆ.

ನಿರಾಶ್ರಿತರನ್ನು ವಾಪಸ್ ಕರೆಸಿಕೊಳ್ಳುವುದನ್ನು ಮುಂದೂಡಲು ಮ್ಯಾನ್ಮಾರ್ ಹೊಸ ಹೊಸ ನೆವಗಳನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.

ಈಗಾಗಲೇ ಜನನಿಬಿಡವಾಗಿರುವ ನಮ್ಮ ದೇಶದಲ್ಲಿ ಯಾವುದೇ ಸನ್ನಿವೇಶದಲ್ಲಿ ನಿರಾಶ್ರಿತರು ಖಾಯಂ ಆಗಿ ವಾಸಿಸಲು ಸಾಧ್ಯವಿಲ್ಲ ಎಂದು ಮಂಗಳವಾರ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

ನಿರಾಶ್ರಿತರನ್ನು ಶಾಶ್ವತವಾಗಿ ದೇಶದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬ ನಿಲುವಿನಿಂದ ಬಾಂಗ್ಲಾದೇಶ ಹಿಂದೆ ಸರಿಯುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಹಸೀನಾ, ‘‘ನನ್ನ ದೇಶದಲ್ಲಿ ಈಗಾಗಲೇ 16 ಕೋಟಿ ಜನರಿದ್ದಾರೆ’’ ಎಂದರು.

‘‘ಇನ್ನಷ್ಟು ಹೆಚ್ಚಿನ ಹೊರೆಯನ್ನು ತೆಗೆದುಕೊಳ್ಳಲು ನನಗೆ ಸಾಧ್ಯವಿಲ್ಲ. ನನ್ನ ದೇಶ ಅದನ್ನು ತಡೆಯಲು ಸಾಧ್ಯವಿಲ್ಲ’’ ಎಂದು ಅವರು ನುಡಿದರು.

ನ್ಯೂಯಾರ್ಕ್‌ನಲ್ಲಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹಸೀನಾ ಈ ಮಾತುಗಳನ್ನು ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಭಾಗವಹಿಸುವುದಕ್ಕಾಗಿ ಅವರು ನ್ಯೂಯಾರ್ಕ್‌ನಲ್ಲಿದ್ದಾರೆ.

ಒಳಗೆ ಬಾಕ್ಸ್

ಮ್ಯಾನ್ಮಾರ್‌ನಲ್ಲಿ ಸೇನೆಯೇ ಪ್ರಭಾವಿ

ನಿರಾಶ್ರಿತರ ವಿಷಯದಲ್ಲಿ ನಾನು ಮ್ಯಾನ್ಮಾರ್‌ನೊಂದಿಗೆ ಜಗಳ ಮಾಡಲು ಬಯಸುವುದಿಲ್ಲ ಎಂದು ಬಾಂಗ್ಲಾದೇಶದ ಪ್ರಧಾನಿ ಹೇಳಿದರು.

ಆದರೆ, ಮ್ಯಾನ್ಮಾರ್ ನಾಯಕಿ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಆಂಗ್ ಸಾನ್ ಸೂ ಕಿ ಮತ್ತು ಅವರ ಸೇನೆಯ ಜೊತೆಗಿನ ಸಹನೆ ಮೀರುತ್ತಿದೆ ಎಂದು ಅವರು ಹೇಳಿದರು. ಮ್ಯಾನ್ಮಾರ್‌ನಲ್ಲಿ ಸೇನೆಯೇ ‘ನೈಜ ಅಧಿಕಾರ’ ಚಲಾಯಿಸುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News