ಶಾಕಿಬ್ ಅಲ್ ಹಸನ್‌ಗೆ ಗಾಯ: ಸ್ವದೇಶಕ್ಕೆ ವಾಪಸ್

Update: 2018-09-27 07:16 GMT

ದುಬೈ, ಸೆ.27: ಬಾಂಗ್ಲಾದೇಶದ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್‌ಗೆ ಬೆರಳುನೋವು ಮತ್ತೆ ಕಾಣಿಸಿಕೊಂಡ ಕಾರಣ ಗುರುವಾರ ಸ್ವದೇಶಕ್ಕೆ ವಾಪಸಾಗಿದ್ದಾರೆ. ಹೀಗಾಗಿ ಎಡಗೈ ಬ್ಯಾಟ್ಸ್‌ಮನ್ ಹಸನ್ ಬುಧವಾರ ನಡೆದಿದ್ದ ಪಾಕಿಸ್ತಾನ ವಿರುದ್ಧ ಸೂಪರ್-4 ಪಂದ್ಯದಲ್ಲಿ ಆಡಿರಲಿಲ್ಲ. ಅದೇ ದಿನ ರಾತ್ರಿ ಅವರು ಢಾಕಾ ವಿಮಾನವೇರಿದ್ದಾರೆ.

ಹಸನ್ ಸ್ವದೇಶಕ್ಕೆ ವಾಪಸಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಲಿರುವ ಭಾರತ ವಿರುದ್ಧ ಏಶ್ಯಕಪ್‌ ಫೈನಲ್‌ನಲ್ಲಿ  ಆಡುವುದಿಲ್ಲ. ಬುಧವಾರ ರಾತ್ರ ಪಾಕಿಸ್ತಾನವನ್ನು 37 ರನ್‌ಗಳಿಂದ ಮಣಿಸಿದ್ದ ಮೊರ್ತಾಝಾ ನೇತೃತ್ವದ ಬಾಂಗ್ಲಾದೇಶ ಫೈನಲ್‌ಗೆ ಲಗ್ಗೆ ಇಟ್ಟಿದೆ.

‘‘ಹಸನ್ ನಾಲ್ಕರಿಂದ ಆರು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರಿಗೆ ಕೈ ಬೆರಳಿನ ನೋವು ಉಲ್ಬಣಿಸಿದೆ. ಫಿಸಿಯೋ(ಥಿಹಾನ್ ಚಂದ್ರಮೋಹನ್) ಅವರನ್ನು ಟೂರ್ನಿಯಲ್ಲಿ ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ನಡೆಸಿದ್ದರು. ಆದರೆ, ಅವರಿಗೆ ನೋವು ಜಾಸ್ತಿಯಾಗಿದೆ. ಬೆರಳಿನ ನೋವಿನಲ್ಲೂ ಟೂರ್ನಿಯ ಮೊದಲ 4 ಪಂದ್ಯಗಳಲ್ಲಿ ಆಡಿರುವ ಶಾಕಿಬ್‌ಗೆ ಕೃತಜ್ಞತೆ ಸಲ್ಲಿಸುವೆ’’ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧಿಕಾರಿ ಅಕ್ರಂ ಖಾನ್ ಹೇಳಿದ್ದಾರೆ.

ಹಸನ್ ಚೇತರಿಸಿಕೊಳ್ಳಲು ದೀರ್ಘ ಸಮಯ ಬೇಕಾಗಿರುವ ಕಾರಣ ಅವರು ಸ್ವದೇಶದಲ್ಲಿ ನಡೆಯುವ ಝಿಂಬಾಬ್ವೆ ವಿರುದ್ಧ ಸರಣಿಯಿಂದ ವಂಚಿತರಾಗಲಿದ್ದಾರೆ. ಈ ಸರಣಿಯು ಸೆ.30 ರಿಂದ ಅ.14ರ ತನಕ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News