ಬೆಂಗಳೂರು: 40ಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ದಾಳಿ

Update: 2018-09-27 13:14 GMT

ಬೆಂಗಳೂರು, ಸೆ.27: ನಗರದಲ್ಲಿ 40ಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿ, 2 ಲಕ್ಷ ರೂ. ಮೌಲ್ಯದ ನಿಷೇಧಿತ ನೋಟುಗಳು, ಪಿಸ್ತೂಲು, 3 ಕಾರು, ಎರಡು ನೋಟು ಎಣಿಕಾ ಯಂತ್ರವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲು ರೌಡಿಗಳಾದ ಜೆಸಿಬಿ ನಾರಾಯಣ, ತನ್ವೀರ್, ದೂದ್‌ರವಿ, ರಾಬ್ರಿಗಿರಿ, ಕುಮ್ಮಿ ಸೇರಿ 40ಕ್ಕೂ ಹೆಚ್ಚು ರೌಡಿಗಳನ್ನು ಸಿಸಿಬಿ ಪೊಲೀಸರು ಕಚೇರಿಗೆ ಕರೆತಂದು ವಿಚಾರಣೆ ನಡೆಸಿ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.

ರೌಡಿ ದಡಿಯಾ ಮಹೇಶ್ ಮನೆಯಲ್ಲಿ 6 ಕೋಬ್ರಾ ಸ್ಪ್ರೇಟಿನ್ ಹಾಗೂ ನಕಲಿ ಪಿಸ್ತೂಲ್ ಪತ್ತೆಯಾಗಿದ್ದು, ಇತ್ತೀಚೆಗೆ ಶ್ರೀರಾಮ ಸಂಘಟನೆಗೆ ಸೇರಿರುವ ಆತನ ಪತ್ನಿ ರೌಡಿ ಯಶಸ್ವಿನಿಗೂ ಎಚ್ಚರಿಕೆ ನೀಡಲಾಗಿದೆ ಎಂದು ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಟಿ ನಡೆಸಿದ ಅವರು, ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಹತ್ತಿಕ್ಕಲು ರಚಿಸಲಾಗಿದ್ದ ಸಿಸಿಬಿ ಅಧಿಕಾರಿಗಳ 11 ವಿಶೇಷ ತಂಡಗಳು ಇಂದು ಮುಂಜಾನೆಯಿಂದ ಏಕಕಾಲಕ್ಕೆ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ರೌಡಿಗಳ ಅಪರಾಧ ಕೃತ್ಯಗಳು, ರಿಯಲ್ ಎಸ್ಟೇಟ್ ದಂಧೆ, ಅಕ್ರಮ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.

ಸಿಸಿಬಿಯ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ರೌಡಿಗಳ ಮನೆ ಅಲ್ಲದೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಕ್ಲಬ್‌ಗಳು, ರಿಕ್ರಿಯೇಷನ್ ಕ್ಲಬ್‌ಗಳು, ಜೂಜಾಟದ ಅಡ್ಡೆಗಳು, ಕ್ರಿಕೆಟ್ ಬೆಟ್ಟಿಂಗ್ ದಂಧೆ ಮೇಲೆಯೂ ದಾಳಿ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News