ನಕಲಿ ಮಾರ್ಕ್ಸ್‌ಕಾರ್ಡ್ ಮಾರಾಟಗಾರನ ಬಂಧನ: ಕುವೆಂಪು, ಮಂಗಳೂರು ವಿವಿಯ ನಕಲಿ ಅಂಕಪಟ್ಟಿ ಹಂಚಿಕೆ

Update: 2018-09-27 13:17 GMT

ಬೆಂಗಳೂರು, ಸೆ.27: ನಕಲಿ ಅಂಕಪಟ್ಟಿಗಳನ್ನು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ ಎಂಬಿಎ ಪದವೀಧರನನ್ನು ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್ ಮೂಲದ ಅರ್ಜುನ್(30) ಬಂಧಿತ ಆರೋಪಿಯಾಗಿದ್ದಾನೆ. ಈತ ಸಿವಿ ರಾಮನ್, ಪೆರಿಯಾರ್, ಕುವೆಂಪು ಮತ್ತು ಮಂಗಳೂರು ವಿವಿಯ ನಕಲಿ ಮಾರ್ಕ್ಸ್ ಕಾರ್ಡ್‌ಗಳನ್ನು ಅಕ್ರಮವಾಗಿ ಮುದ್ರಿಸಿ, ಹಂಚಿರುವುದು ಬೆಳಕಿಗೆ ಬಂದಿದೆ. ಈವರೆಗೆ ಸುಮಾರು 400 ಜನರಿಗೆ ನಕಲಿ ಮಾರ್ಕ್ಸ್ ಕಾರ್ಡ್ ನೀಡಿರುವ ಅರ್ಜುನ್ 1.20 ಕೋಟಿ ರೂ. ಹಣ ಸಂಪಾದನೆ ಮಾಡಿದ್ದಾನೆ ಎಂದು ಕೋರಮಂಗಲ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ್ ತಿಳಿಸಿದರು.

2015ರಲ್ಲಿ ಬೆಂಗಳೂರಿಗೆ ಬಂದಿದ್ದ ಆರೋಪಿ, ಕೋರಮಂಗಲದ ಜೋರ್ಕಾ ಸ್ಟಡಿ ಸೆಂಟರ್‌ನಲ್ಲಿ ಬ್ಯುಸಿನೆಸ್ ಡೆವಲಪರ್ ಆಗಿ ಕೆಲಸಕ್ಕೆ ಸೇರಿದ್ದ. ಇಲ್ಲಿ ಕೆಲಸ ಮಾಡುತ್ತಲೆ ನಕಲಿ ಮಾರ್ಕ್ಸ್ ಕಾರ್ಡ್ ನೀಡಿ ಹಣ ಸಂಪಾದನೆ ಮಾಡಬಹುದು ಎಂಬ ಚಿಂತನೆ ನಡೆಸಿದ್ದ. ನಂತರ ಅಲ್ಲಿ ಕೆಲಸವನ್ನು ತೊರೆದು ಗುಡ್ ಗೈಡ್ ಅಕಾಡೆಮಿ ಎಂಬ ಸ್ವಂತ ಸಂಸ್ಥೆಯನ್ನು ತೆರೆದಿದ್ದಾನೆ. ಟೆಲಿಕಾಲರ್ ಮೂಲಕ ಪಿಯುಸಿ ಪಾಸ್ ಆಗಿದ್ದು, ಡಿಗ್ರಿ ಆಗದವರನ್ನು ಸಂಪರ್ಕ ಮಾಡಿ ಒಬ್ಬೊಬ್ಬರಿಂದ 45,000 ರೂ. ಹಣ ಪಡೆದು ಬಿಎ, ಬಿಕಾಂ, ಬಿಎಸ್ಸಿ ಮೂರು ವರ್ಷದ ಡಿಗ್ರಿ ಮಾರ್ಕ್ಸ್ ಕಾರ್ಡ್ ನೀಡುತ್ತಿದ್ದ ಎನ್ನಲಾಗಿದೆ. ಕೋರಮಂಗಲ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News