ಜನಪ್ರತಿನಿಧಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ: ಪೊಲೀಸ್ ಅಧಿಕಾರಿಗಳಿಗೆ ಡಿಜಿಪಿ ನೀಲಮಣಿ ರಾಜು ಸುತ್ತೋಲೆ
ಬೆಂಗಳೂರು, ಸೆ. 27: ಶಾಸಕರು, ಸಂಸದರು ಸೇರಿದಂತೆ ಸಾರ್ವಜನಿಕರಿಂದ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಅತ್ಯಂತ ಸೌಜನ್ಯದಿಂದ ವರ್ತಿಸಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು, ಸುತ್ತೋಲೆ ಹೊರಡಿಸಿದ್ದಾರೆ.
ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರ ಕಾರ್ಯ ನಿರ್ವಹಿಸಲು ಸಾಂವಿಧಾನಿಕ ಅಧಿಕಾರವನ್ನು ಹೊಂದಿದ್ದಾರೆ. ಅವರೊಂದಿಗೆ ಪೊಲೀಸ್ ಅಧಿಕಾರಿಗಳು ನಡೆದು ಕೊಳ್ಳಬೇಕಾದ ಶಿಷ್ಟಾಚಾರದ ಬಗ್ಗೆ ಪೊಲೀಸ್ ಮ್ಯಾನ್ಯುಯಲ್‌ನಲ್ಲಿಯೂ ವಿವರಿಸಲಾಗಿದೆ. ಅದರಂತೆಯೇ ಜನಪ್ರತಿನಿಧಿಗಳ ಜೊತೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಹೀಗಾಗಿ ಅವರ ದೂರವಾಣಿ ಕರೆಗಳನ್ನು ಆದ್ಯತೆಯ ಮೇರೆಗೆ ಸ್ವೀಕರಿಸಬೇಕು. ಅಲ್ಲದೆ, ಅವರ ಸಲಹೆ, ಸೂಚನೆ ಹಾಗೂ ಸಾರ್ವಜನಿಕ ಕುಂದು-ಕೊರತೆಗಳನ್ನು ಪರಿಹರಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ.
ಒಂದು ವೇಳೆ ಅದು ಸಾಧ್ಯವಾಗದಿದ್ದಾಗ ಅದಕ್ಕೆ ಕಾರಣಗಳನ್ನು ಸೌಜನ್ಯಯುತವಾಗಿ ಅವರಿಗೆ ತಿಳಿಸಬೇಕು. ಅವರ ಸಲಹೆ, ಸೂಚನೆ ಮತ್ತು ಕುಂದು-ಕೊರತೆಗಳನ್ನು ಪರಿಹಸರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.