×
Ad

ಉರ್ದು ಅಕಾಡೆಮಿಯ ಪುಸ್ತಕಗಳ ಡಿಜಿಟಲೀಕರಣ: ಅಧ್ಯಕ್ಷ ಮುಬೀನ್ ಮುನವ್ವರ್

Update: 2018-09-27 20:23 IST

ಬೆಂಗಳೂರು, ಸೆ.27: ರಾಜ್ಯ ಉರ್ದು ಅಕಾಡೆಮಿ ವತಿಯಿಂದ ಪ್ರಕಟಿಸಲಾಗಿರುವ ಎಲ್ಲ ಪುಸ್ತಕಗಳನ್ನು ಡಿಜಿಟಲೀಕರಣ ಮಾಡಲು ನಿರ್ಧರಿಸಿದ್ದು, ಆದಷ್ಟು ಶೀಘ್ರದಲ್ಲಿ ತಜ್ಞರನ್ನು ನೇಮಕ ಮಾಡಿ ಕೆಲಸ ಆರಂಭಿಸಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷ ಮುಬೀನ್ ಮುನವ್ವರ್ ತಿಳಿಸಿದರು.

ಗುರುವಾರ ನಗರದ ರಿಚ್ಮಂಡ್ ರಸ್ತೆಯಲ್ಲಿರುವ ಉರ್ದು ಅಕಾಡೆಮಿ ಕಚೇರಿಯಲ್ಲಿ ಮಾತನಾಡಿದ ಅವರು, ಪುಸ್ತಕಗಳ ಡಿಜಿಟಲೀಕರಣದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಓದುಗರಿಗೆ ಪುಸ್ತಕಗಳನ್ನು ತಲುಪಿಸಬಹುದಾಗಿದೆ ಎಂದರು.

ಉರ್ದು ಅಕಾಡೆಮಿಯ ಗ್ರಂಥಾಲಯದಲ್ಲಿ ಉರ್ದು ಕಲಿಕಾ ಕೋರ್ಸುಗಳನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಉರ್ದು ಕಲಿಸುವ ಶಿಕ್ಷಕರಿಗೆ ವೇತನ ಹಾಗೂ ಕಲಿಯುವ ಆಸಕ್ತರಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುವುದು. ಉರ್ದು ಅಕಾಡೆಮಿಯ ಕಾರ್ಯನಿರ್ವಹಣೆಗೆ ಸಹಕಾರಿಯಾಗುವಂತೆ ನಿಯಮಾವಳಿಗಳನ್ನು ರಚಿಸಿ ಸರಕಾರದ ಒಪ್ಪಿಗೆಗೆ ಕಳುಹಿಸಲಾಗಿದೆ ಎಂದು ಮುಬೀನ್ ಮುನವ್ವರ್ ಹೇಳಿದರು.

ಬೆಂಗಳೂರಿನಲ್ಲಿ ಮುಂಬರುವ ಡಿಸೆಂಬರ್ ತಿಂಗಳಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದ ಉರ್ದು ಸಮಾವೇಶವನ್ನು ಆಯೋಜಿಸಲಾಗುತ್ತಿದ್ದು, ಇದರಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಲೇಖಕರು, ಕವಿಗಳು, ದೇಶದ 22 ರಾಜ್ಯಗಳ ಉರ್ದು ಅಕಾಡೆಮಿಯ ಅಧ್ಯಕ್ಷರು, ಸದಸ್ಯರು, ಪತ್ರಕರ್ತರನ್ನು ಆಹ್ವಾನಿಸಲಾಗುವುದು ಎಂದು ಅವರು ತಿಳಿಸಿದರು.

ಕನ್ನಡ ಸಾಹಿತ್ಯ ತರ್ಜುಮೆ: ಕನ್ನಡ ಭಾಷೆಯ ಸಾಹಿತ್ಯವನ್ನು ಉರ್ದು ಭಾಷೆಗೆ ತರ್ಜುಮೆ ಮಾಡುವ ಸಂಬಂಧ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ, ಪ್ರೊ.ಕೆ.ಎಸ್.ನಿಸಾರ್‌ ಅಹಮದ್, ಮಾಹೆರ್ ಮನ್ಸೂರ್, ಖಲೀಲ್ ಮಾಮೂನ್ ಜೊತೆ ಚರ್ಚೆ ಮಾಡಲಾಗಿದೆ ಎಂದು ಮುಬೀನ್ ಮುನವ್ವರ್ ಹೇಳಿದರು.

ಉರ್ದು ಭಾಷೆಯ ಪತ್ರಕರ್ತರು, ಕವಿಗಳು, ಲೇಖಕರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಯುವಕರು, ಮಹಿಳೆಯರು, ಮಕ್ಕಳಲ್ಲಿ ಉರ್ದು ಭಾಷೆಯ ಬಗ್ಗೆ ಆಸಕ್ತಿ ಹೆಚ್ಚಿಸಲು ಜಿಲ್ಲಾಮಟ್ಟದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ಅವರನ್ನು ಹುರಿದುಂಬಿಸಲಾಗುವುದು ಎಂದು ಅವರು ತಿಳಿಸಿದರು.

ಸಂಕಷ್ಟದಲ್ಲಿರುವ ಉರ್ದು ಲೇಖಕರು, ಕವಿಗಳಿಗೆ ಮಾಸಿಕ ಪಿಂಚಣಿ ನೀಡುವ ಕುರಿತು ಚರ್ಚಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾನ್ವೆಂಟ್ ಶಾಲೆಗಳಲ್ಲಿ ಉರ್ದು ಭಾಷೆಯನ್ನು ಕಲಿಸಲು ಕಲಿಕಾ ಕೇಂದ್ರಗಳನ್ನು ಆರಂಭಿಸುವ ಸಂಬಂಧ ಶಾಲೆಯ ಆಡಳಿತ ಮಂಡಳಿಗಳ ಜೊತೆ ಚರ್ಚೆ ಮಾಡಲಾಗಿದೆ ಎಂದು ಅವರು ಹೇಳಿದರು.

ಉರ್ದು ಗ್ರಂಥಾಲಯಗಳನ್ನು ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಆರಂಭಿಸುವ ಪ್ರಸ್ತಾವನೆಯಿದೆ. ಅಲ್ಲದೆ, ಜಿಲ್ಲಾ ಮಟ್ಟದಲ್ಲಿ ಕವಿಗೋಷ್ಠಿ, ವಿಚಾರಸಂಕಿರಣ, ಕವ್ವಾಲಿ, ಗಝಲ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಮುಬೀನ್ ಮುನವ್ವರ್ ತಿಳಿಸಿದರು.

ಉರ್ದು ಅಕಾಡೆಮಿಯ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಪೂರ್ಣಗೊಂಡಿದೆ. ಆದರೆ, ಈವರೆಗೆ ರಿಜಿಸ್ಟ್ರಾರ್ ನೇಮಕವಾಗಿಲ್ಲ. ಈಗಾಗಲೆ ಸರಕಾರಕ್ಕೆ ಕೆಲವು ಹೆಸರುಗಳನ್ನು ಶಿಫಾರಸ್ಸು ಮಾಡಿದ್ದು, ಒಂದು ವಾರದಲ್ಲಿ ಹೊಸ ರಿಜಿಸ್ಟ್ರಾರ್ ನೇಮಕವಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News