ರಫೇಲ್ ಹಗರಣದಲ್ಲಿ ಬಹುಕೋಟಿ ಭ್ರಷ್ಟಾಚಾರ: ಡಿವೈಎಫ್‌ಐ ರಾಷ್ಟ್ರಾಧ್ಯಕ್ಷ ಮುಹಮ್ಮದ್ ರಿಯಾಝ್

Update: 2018-09-27 15:02 GMT

ಬೆಂಗಳೂರು, ಸೆ.27: ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ರಫೇಲ್ ಯುದ್ಧವಿಮಾನ ತಯಾರಿಸುವ ಗುತ್ತಿಗೆ ಒಪ್ಪಂದ ಪ್ರಕರಣದಲ್ಲಿ ದೊಡ್ದ ಪ್ರಮಾಣದ ಭ್ರಷ್ಟಾಚಾರ ನಡೆಸಿದೆ. ಹೀಗಾಗಿ ಈ ಪ್ರಕರಣವನ್ನು ಜಂಟಿ ಸದನ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಡಿವೈಎಫ್‌ಐ ರಾಷ್ಟ್ರಾಧ್ಯಕ್ಷ ಮುಹಮ್ಮದ್ ರಿಯಾಝ್ ಒತ್ತಾಯಿಸಿದಾರೆ.

ಗುರುವಾರ ಡಿವೈಎಫ್‌ಐ ರಾಜ್ಯ ಮತ್ತು ಜಿಲ್ಲಾ ಸಮಿತಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ರಫೇಲ್ ಹಗರಣ ಸದನ ಸಮಿತಿಯ ತನಿಖೆಗೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಏಳೂವರೆ ದಶಕಗಳ ಇತಿಹಾಸವಿರುವ ಹಾಗೂ ದೇಶ-ವಿದೇಶಗಳ ವೈಮಾನಿಕ ಯೋಜನೆ ಸಿದ್ಧಪಡಿಸಿ ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ಇರುವ ಸರಕಾರಿ ಸ್ವಾಮ್ಯದ ಎಚ್‌ಎಎಲ್ಗೆ ರಫೇಲ್ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯವಿಲ್ಲವೆಂಬ ನೆಪವೊಡ್ಡಿ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್‌ಗೆ ಒಂದು ಲಕ್ಷ ಕೋಟಿ ರೂ. ಬೃಹತ್ ಮೌಲ್ಯದ ಗುತ್ತಿಗೆ ಒಪ್ಪಂದ ಮಾಡಿಕೊಂಡಿರುವುದರ ಹಿಂದೆ ಅತಿದೊಡ್ಡ ಭ್ರಷ್ಟಾಚಾರ ಹಗರಣ ನಡೆದಿದೆ ಎಂದು ಅವರು ಆರೋಪಿಸಿದರು.

ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ರಫೇಲ್ ಹಗರಣ ಕುರಿತು ಪ್ರತಿಪಕ್ಷಗಳು ಸೇರಿದಂತೆ ಜನತೆ ಪ್ರತಿರೋಧ ತೋರುತ್ತಿದ್ದರೂ ಕೇಂದ್ರ ಸರಕಾರವು ರಫೇಲ್ ಯುದ್ಧ ವಿಮಾನದ್ದು ಅನಗತ್ಯ ವಿವಾದವೆಂದು ಜನತೆಗೆ ವಂಚಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಪ್ರಜೆಗಳಿಗೆ ಉತ್ತರದಾಯಿಯಾಗಿರಬೇಕಾದ ಕೇಂದ್ರ ಸರಕಾರವು ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಬಲಹೀನಗೊಳಿಸಿ, ಸ್ವ ಲಾಭಕ್ಕಾಗಿ ಖಾಸಗಿ ಕಾರ್ಪೋರೇಟ್ ಕಂಪೆನಿಗಳ ಬಾಲಂಗೋಚಿಯಾಗಿದೆ ಎಂದು ಕಿಡಿಕಾರಿದರು.

ಡಿವೈಎಫ್‌ವೈ ಜಿಲ್ಲಾಧ್ಯಕ್ಷ ಎಂ.ನಂಜೇಗೌಡ ಮಾತನಾಡಿ, ಕೇಂದ್ರ ಸರಕಾರ ಮಹಾನ್ ಭ್ರಷ್ಟಾಚಾರದಿಂದ ಕೂಡಿರುವ ರಫೇಲ್ ಒಪ್ಪಂದದ ಸಮಗ್ರ ತನಿಖೆಗಾಗಿ ಕೂಡಲೇ ಸಂಸತ್ತಿನ ಜಂಟಿ ಸದನ ಸಮಿತಿಯನ್ನು ರಚಿಸಬೇಕು. ಹಾಗೂ ವಿವಾದಾತ್ಮಕ ರಫೇಲ್ ಯುದ್ಧವಿಮಾನ ಒಪ್ಪಂದವನ್ನು ರದ್ದುಪಡಿಸಬೇಕು. ಈ ಒಪ್ಪಂದದಲ್ಲಿ ಖಾಸಗಿ ಕಂಪೆನಿಗಳಿಗೆ ಅವಕಾಶ ನೀಡದೆ, ಸರಕಾರಿ ಸ್ವಾಮ್ಯದ ಎಚ್‌ಎಎಲ್ ಮೂಲಕವೆ ರಫೇಲ್ ಯುದ್ಧವಿಮಾನ ತಯಾರಿಕೆಯ ಮರು ಒಪ್ಪಂದಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ರಾಜ್ಯ ಖಜಾಂಚಿ ನಿಧಿನ್ ಪಿಕೆ, ರಾಜ್ಯ ಸಮಿತಿ ಸದಸ್ಯೆ ರೇಣುಕಾ ಕಹಾರ, ಬೆಂಗಳೂರು ದಕ್ಷಿಣ ಜಿಲ್ಲಾ ಸಂಚಾಲಕ ಕೆ. ರವಿಕುಮಾರ್, ರಿಯಾಝುದ್ದೀನ್ ಕೆಪಿಎಂ, ಮುನಿಕೃಷ್ಣ ವಹಿಸಿದ್ದರು. ಎಸ್‌ಎಫ್‌ಐ ಮುಖಂಡರಾದ ವೆಂಕಟೇಶ್ ಕೆ, ಸಾಗರ ಕೂಡಗಿ, ಜೆಎಂಎಸ್ ಮುಖಂಡರಾದ ಗೀತಾ ರವಿ, ದಲಿತ ಮಹಾಸಭಾ ರಾಜ್ಯ ಮುಖಂಡರಾದ ಅರುಣ ಸಾಗರ, ಜೈಭೀಮ್ ಸೇನೆ ರಾಜ್ಯ ಸಂಚಾಲಕರಾದ ನಂಜೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News