ಬೆಂಗಳೂರನ್ನು ಪಂಜಾಬ್ ಮಾಡಲು ಬಿಡುವುದಿಲ್ಲ: ಶಾಸಕ ಅರವಿಂದ ಲಿಂಬಾವಳಿ

Update: 2018-09-27 17:12 GMT

ಬೆಂಗಳೂರು, ಸೆ.27: ಪಂಜಾಬ್‌ನಲ್ಲಿ ಯುವಕರು ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಹಾವಳಿಗೆ ಒಳಗಾಗಿದ್ದಾರೆ. ಅದಕ್ಕೆ ಪಾಕಿಸ್ತಾನದ ಕೈವಾಡವೂ ಇದೆ. ಬೆಂಗಳೂರನ್ನು ಪಂಜಾಬ್ ಮಾಡಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲವೆಂದು ಅಂತರ್‌ರಾಷ್ಟ್ರೀಯ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರಿಂದ ಪ್ರತಿಜ್ಞೆ ತೆಗೆದುಕೊಂಡಿದ್ದೇವೆ ಎಂದು ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.

ಗುರುವಾರ ಮಹದೇವಪುರದ ಫಿನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಬೆಂಗಳೂರು ನಗರ ಪೊಲೀಸರು ಆಯೋಜಿಸಿದ್ದ ಮಾದಕ ದ್ರವ್ಯ ವಸನದ ವಿರುದ್ಧ ಬೃಹತ್ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬೆಂಗಳೂರು ಪೊಲೀಸರು ಅದರಲ್ಲೂ ವಿಶೇಷವಾಗಿ ನಮ್ಮ ಪೊಲೀಸ್ ಆಯುಕ್ತರು ಹಾಗೂ ಅವರ ಅಧಿಕಾರಿಗಳು, ಡ್ರಗ್ಸ್ ಹಾವಳಿಯ ವಿರುದ್ಧ ಬೆಂಗಳೂರಿನಲ್ಲಿ ವಿಶೇಷ ಪ್ರಯತ್ನ ಮಾಡಿದ್ದಾರೆ. ಪೊಲೀಸರೆಂದರೆ ನಮಗೆ ಭಯವಿಲ್ಲ, ಅವರು ನಮ್ಮ ಸ್ನೇಹಿತರು. ನಮಗೆ ಒಳ್ಳೆಯದನ್ನು ಮಾಡಲು ದಾರಿಯನ್ನು ತೋರಿಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಾವು ಕೂಡ ಈ ಡ್ರಗ್ಸ್ ಹಾವಳಿಗೆ ಒಳಗಾಗುವುದು ಬೇಡ. ನಮ್ಮ ಕ್ಷೇತ್ರದಲ್ಲಿಯೂ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ನಮ್ಮ ದೇಶದ ಅನೇಕರು ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದಾರೆ. ಅವರನ್ನು ಗುರುತಿಸಿ ಬೆಂಗಳೂರು ಪೊಲೀಸರಿಗೆ ತಿಳಿಸಿದರೆ ನಿಶ್ಚಿತವಾಗಿ ಅವರು ಕ್ರಮ ಜರಗಿಸುತ್ತಾರೆ. ಈ ಸಾಮಾಜಿಕ ಪಿಡುಗನ್ನು ಹೋರಾಟ, ಆಂದೋಲನ ರೂಪಿಸುವ ಮೂಲಕ ನಾವು ಬೆಂಗಳೂರು ಪೊಲೀಸರ ಕೈ ಜೋಡಿಸೋಣ ಎಂದು ಅರವಿಂದ ಲಿಂಬಾವಳಿ ಕರೆ ನೀಡಿದರು.

ಸಂಸದ ಪಿ.ಸಿ.ಮೋಹನ್ ಮಾತನಾಡಿ, ಇವತ್ತಿನ ಬಹಳಷ್ಟು ಯುವಕ ಮತ್ತು ಯುವತಿಯರು ಡ್ರಗ್ಸ್‌ನ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಜಾಗೃತಿ ಅಭಿಯಾನ ಆರಂಭಿಸಿರುವುದು ತುಂಬಾ ಒಳ್ಳೆಯದು. ಡ್ರಗ್ಸ್‌ನ ಚಟಕ್ಕೆ ದಾಸರಾಗಿರುವವರನ್ನು ಅದರಿಂದ ಹೊರಗೆ ತರಲು ಪ್ರತಿಯೊಬ್ಬರೂ ನೆರವು ನೀಡಬೇಕು ಎಂದು ಮನವಿ ಮಾಡಿದರು.

ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಮಾತನಾಡಿ, ಸಮಾಜದಲ್ಲಿ ಒಬ್ಬ ಉತ್ತಮ ನಾಗರಿಕರಾಗುತ್ತೇವೆ ಎಂಬ ಒಂದು ಸಣ್ಣ ಭರವಸೆಯನ್ನು ನಿಮ್ಮಿಂದ ಪಡೆಯಲು ಬಯಸುತ್ತೇನೆ. ಎಷ್ಟೇ ಸಂಚಾರ ದಟ್ಟಣೆ ಇದ್ದರೂ ಸಾರ್ವಜನಿಕರು ನಡೆದಾಡಲು ನಿರ್ಮಿಸಿರುವ ಪಾದಚಾರಿ ಮಾರ್ಗದಲ್ಲಿ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನವನ್ನು ಓಡಿಸಬೇಡಿ ಎಂದರು.

ಟ್ರಾಫಿಕ್ ಸಿಗ್ನಲ್‌ನಲ್ಲಿರುವ ಕೆಂಪು ದೀಪಕ್ಕೆ ಗೌರವ ನೀಡುವ ಮೂಲಕ ನಿಮ್ಮ ಜೀವವನ್ನು ನೀವು ರಕ್ಷಿಸಿಕೊಳ್ಳಿ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಒಳ್ಳೆಯವರಾಗಿರಬೇಕೆಂದು ಬಯಸುತ್ತಾರೆ. ಆ ಮಗು ಇಂತಹ ದುಶ್ಚಟಗಳಿಗೆ ದಾಸರಾದರೆ ಅವರ ಪಾಡೇನು. ನೀವು ನಿಮ್ಮ ಸುತ್ತಲಿನ ಜನ, ಪೋಷಕರು ಸುಖವಾಗಿರುವಂತೆ ನೋಡಿಕೊಳ್ಳಿ ಎಂದು ಅವರು ಮನವಿ ಮಾಡಿದರು.

ಜಾಗೃತಿ ಅಭಿಯಾನದ ಅಂಗವಾಗಿ ಆಕರ್ಷಕ ದೇಹದಾರ್ಢ್ಯ ಪ್ರದರ್ಶನ, ಸಂಗೀತ ರಸಮಂಜರಿ, ಕೇರಳದ ಕಳರಿಪಯಟ್ಟು ಸಮರಕಲೆ ಹಾಗು ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಬೆಂಗಳೂರು ಪೊಲೀಸರು ನಿರ್ಮಿಸಿರುವ ಕಿರು ವಿಡಿಯೋವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮವನ್ನು ವಿಜೆ ರಶ್ಮಿ ನಿರೂಪಿಸಿದರು.

ಹೆಚ್ಚುವರಿ ನಗರ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್, ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಸೇರಿದಂತೆ ಇನ್ನಿತರ ಅಧಿಕಾರಿಗಳು, ಬಿಬಿಎಂಪಿ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ದುಶ್ಚಟಗಳಿಂದ ನಾನು ದೂರವಿದ್ದು, ಸಮಾಜದಿಂದಲೂ ಈ ಪಿಡುಗನ್ನು ನಿಮೂರ್ಲನೆ ಮಾಡುವ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗುತ್ತೇನೆಂದು ದೇವರ ಹೆಸರಿನಲ್ಲಿ ಪ್ರತಿಜ್ಞೆ ಮಾಡುತ್ತೇನೆ ಎಂದು ಅಂತರ್‌ರಾಷ್ಟ್ರೀಯ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಸಾವಿರಾರು ಮಂದಿ ಸ್ವಯಂಸೇವಕರು, ಸಾರ್ವಜನಿಕರಿಗೆ ಪ್ರತಿಜ್ಞೆ ಬೋಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News