×
Ad

ಕೆ.ಸಿ.ವ್ಯಾಲಿ ಯೋಜನೆ ವಿಚಾರ: ನೀರಿನ ಗುಣಮಟ್ಟದ ಪರೀಕ್ಷಾ ವರದಿ ಹೈಕೋರ್ಟ್‌ಗೆ ಸಲ್ಲಿಕೆ

Update: 2018-09-27 21:40 IST

ಬೆಂಗಳೂರು, ಸೆ.27: ಕೋರಮಂಗಲ-ಚಲ್ಲಘಟ್ಟ, ಹೆಬ್ಬಾಳ-ನಾಗವಾರ ವ್ಯಾಲಿ ಯೋಜನೆಯ ಸಂಸ್ಕರಿತ ತ್ಯಾಜ್ಯ ನೀರಿನ ಗುಣಮಟ್ಟದ ಪರೀಕ್ಷಾ ವರದಿಯನ್ನು ಗುರುವಾರ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಹೈಕೋರ್ಟ್‌ಗೆ ಸಲ್ಲಿಸಿದರು.

ಕೋಲಾರದ ಆರ್.ಆಂಜನೇಯರೆಡ್ಡಿ ಸಲ್ಲಿಸಿರುವ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ವರದಿಯಲ್ಲಿ ಅಂತರ್ಜಲದ ಪರೀಕ್ಷಾ ಅಂಶಗಳಿಲ್ಲ. ಕೇವಲ ಮೇಲ್ಮೈ ನೀರಿನ ಪರೀಕ್ಷಾ ವರದಿ ಇದಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಸರಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು, ಕೆ.ಸಿ ವ್ಯಾಲಿಗೆ ಹರಿದು ಹೋಗುತ್ತಿರುವ ನೀರನ್ನು ಕ್ಲೋರಿನೇಷನ್ ಮುಖಾಂತರ ಶುದ್ಧೀಕರಿಸಿ ಹರಿಬಿಡಲಾಗುತ್ತಿದೆ. ಎಸ್.ಟಿ.ಪಿ ಘಟಕಗಳಲ್ಲಿ ನೀರಿನ ಶುದ್ಧತೆಯ ಬಗ್ಗೆ ನಡೆಯುವ ಎಲ್ಲ ಹಂತದ ಪ್ರಕ್ರಿಯೆಗಳನ್ನು ಅಲ್ಲಿನ ಎಲೆಕ್ಟ್ರಾನಿಕ್ ಪರದೆಯ ಮೇಲೆ ವೀಕ್ಷಿಸಬಹುದಾಗಿದೆ ಎಂದು ಬಲವಾಗಿ ಸರ್ಮಥಿಸಿಕೊಂಡರು.

ಅಲ್ಲದೆ, ಎಸ್‌ಟಿಪಿ ಘಟಕಗಳ ನೀರಿನ ಶುದ್ಧೀಕರಣ ಪ್ರಕ್ರಿಯೆ ಹಾಗೂ ನೀರಿನ ಗುಣಮಟ್ಟದ ರಾಸಾಯನಿಕ ಪರೀಕ್ಷೆಯ 39 ಮಾನದಂಡಗಳ ಸಂಪೂರ್ಣ ವರದಿಯನ್ನು ಶುಕ್ರವಾರವೇ ಪೀಠಕ್ಕೆ ಒದಗಿಸಲು ಸಿದ್ಧ ಎಂದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ. ಕೆರೆಗಳಿಗೆ ನೀರು ಹರಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News