×
Ad

"ಜನಪ್ರತಿನಿಧಿಗಳ ಸ್ವ-ಜಾತಿ ಪ್ರೇಮವೇ ಮರ್ಯಾದಾ ಹತ್ಯೆಗೆ ಕಾರಣ"

Update: 2018-09-27 21:42 IST

ಬೆಂಗಳೂರು, ಸೆ.27: ಅಂತರ್ಜಾತಿ, ಅಂತರ್‌ಧರ್ಮೀಯ ದಂಪತಿಗಳ ಹತ್ಯೆಯನ್ನು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇವರ ಸ್ವ-ಜಾತಿ ಪ್ರೇಮ, ರಾಜಕೀಯ ಸ್ವಾರ್ಥದಿಂದಾಗಿ ಅಂತರ್ಜಾತಿ ಮದುವೆಯಾದ ದಂಪತಿಗಳ ಹತ್ಯೆಗಳು ನಿರಂತರವಾಗಿ ಮುಂದುವರೆಯುತ್ತಿವೆ ಎಂದು ಜನವಾದಿ ಮಹಿಳಾ ಸಂಘಟನೆಯ ಕಾರ್ಯದರ್ಶಿ ಗೌರಮ್ಮ ಆರೋಪಿಸಿದ್ದಾರೆ.

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬಸಾಪುರದಲ್ಲಿ ಅಂತರ್‌ಧರ್ಮೀಯ ವಿವಾಹವಾಗಿ ಸುಖಜೀವನ ನಡೆಸುತ್ತಿದ್ದ ಅಶ್ರಫ್ ಆಲಿ(45) ಮತ್ತು ಸೋಮವ್ವ(38) ದಂಪತಿಯನ್ನು ಅಮಾನವೀಯವಾಗಿ ಹತ್ಯೆ ಮಾಡಲಾಗಿದೆ. ಈ ಹಿಂದೆಯೇ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಹತ್ಯೆಯ ಆರೋಪಿಗಳಿಗೆ ಕಠಿಣ ಶಿಕ್ಷೆ, ಅಂತರ್ಜಾತಿ ವಿವಾಹಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ದಂಪತಿಗಳನ್ನು ಸೋಮವ್ವನ ಸಹೋದರ ದೇವಪ್ಪಹೊಟ್ಟಿ ಮರ್ಯಾದಾ ಹೆಸರಿನಲ್ಲಿ ಕೊಲೆಮಾಡಿರುವುದು ಹೇಯ ಕೃತ್ಯ. ಈ ಹಿಂದೆಯೂ ರಾಜ್ಯದ ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಮರ್ಯಾದೆಯ ಹೆಸರಿನಲ್ಲಿ ನಡೆದ ಹತ್ಯೆಗಳ ಸಂದರ್ಭಗಳಲ್ಲಿ ರಾಜ್ಯದ ಪ್ರಮುಖ ಮೂರೂ ಪಕ್ಷಗಳ ನಾಯಕರು ಮೌನವಾಗಿದ್ದರು. ಇವರ ಈ ಸ್ವಜಾತಿ ಪ್ರೇಮದಿಂದಾಗಿ ಇಂತಹ ಪ್ರಕರಣಗಳು ಮತ್ತೆ ಮತ್ತೆ ನಡೆಯಲು ಕಾರಣವಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮರ್ಯಾದೆ ಹೆಸರಿನ ಹತ್ಯೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದು ನಾಗರಿಕ ಸಮಾಜಕ್ಕೆ ತಕ್ಕುದಾದ ನಡೆಯಲ್ಲ. ಇಂದಿಗೂ ಇರುವ ಅಸಮಾನ ವ್ಯವಸ್ಥೆ, ಹುಸಿ ಪ್ರತಿಷ್ಠೆಗಳಿಗೆ ಇಡೀ ಸಮಾಜ ನಾಚಿ ತಲೆ ತಗ್ಗಿಸಬೇಕಾಗಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಜಾಗೃತಿ ವಹಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಹರ್ಯಾಣ, ಮಹಾರಾಷ್ಟ್ರ ರಾಜ್ಯಗಳಿಂದ ಇಂತಹ ಘಟನೆಗಳು ವರದಿಯಾಗುವಾಗಲೇ, ಯುವ ಜನರ ಆಯ್ಕೆ ಹಕ್ಕುಗಳನ್ನು ಗೌರವಿಸುವ ನಿಟ್ಟಿನಲ್ಲಿ ಮರ್ಯಾದೆಗೇಡು ಹತ್ಯೆ ವಿರುದ್ಧ ಕಾನೂನು ತರಬೇಕಾಗಿತ್ತು. ಈಗಲಾದರು ಅಂತಹ ಕಾನೂನು ತರುವ ಮೂಲಕ ಮರ್ಯಾದೆ ಗೇಡು ಹತ್ಯೆ ಪ್ರಕರಣಗಳನ್ನು ತಡೆಯಲು ಮುಂದಾಗಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಕೇಂದ್ರ ಸರಕಾರಕ್ಕೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News