×
Ad

‘ನರೇಗಾ’ದಡಿ ತೋಟಗಾರಿಕಾ ಬೆಳೆಗಳಿಗೆ ಆರ್ಥಿಕ ನೆರವು: ಸಚಿವ ಕೃಷ್ಣ ಭೈರೇಗೌಡ

Update: 2018-09-27 22:15 IST

ಬೆಂಗಳೂರು, ಸೆ. 27: ನರೇಗಾ ಯೋಜನೆಯಡಿ ತೋಟಗಾರಿಕಾ ಬೆಳೆಗಳಿಗೆ ಆರ್ಥಿಕ ಸೌಲಭ್ಯ ನೀಡಲು ಅವಕಾಶ ಕಲ್ಪಿಸಲಾಗಿದೆ. ಅದನ್ನು ರೈತರು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣ ಭೈರೇಗೌಡ ಸಲಹೆ ಮಾಡಿದ್ದಾರೆ.

ಗುರುವಾರ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಡಿಯಲ್ಲಿ ತೋಟಗಾರಿಕಾ ಬೆಳೆಗಳಾದ ರೇಶ್ಮೆ, ಮಾವು, ಸೀಬೆ, ದ್ರಾಕ್ಷಿ ಹಾಗೂ ಬಾಳೆ ಸೇರಿದಂತೆ 22 ಬೆಳೆಗಳಿಗೆ ಆರ್ಥಿಕ ಸೌಲಭ್ಯ ಒದಗಿಸಲು ಅವಕಾಶವಿದೆ. ಪ್ರತಿ ಎಕರೆಗೆ 30 ಸಾವಿರ ರೂ.ನಿಂದ 90 ಸಾವಿರ ರೂ.ವರೆಗೆ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದು. ಆದರೆ ಈ ಬಗ್ಗೆ ರೈತರಿಗೆ ಸರಿಯಾಗಿ ಮಾಹಿತಿ ಇಲ್ಲ. ಹೀಗಾಗಿ ಎಲ್ಲ ಜಿಲ್ಲೆಗಳಲ್ಲಿಯೂ ಈ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಮಾಹಿತಿ ಅಭಿಯಾನ ನಡೆಸಬೇಕು ಎಂದು ಅವರು ಸಲಹೆ ಮಾಡಿದರು.

8.5 ಕೋಟಿ ಮಾನವ ದಿನ ಸೃಜನೆ: ನರೇಗಾ ಯೋಜನೆಯಡಿ ಈವರೆಗೆ ಶೇ.47ರಷ್ಟು ಪ್ರಗತಿ ಸಾಧಿಸಿದ್ದು, ಈ ವರ್ಷ 3,700 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈಗಾಗಲೇ 1,776ಕೋಟಿ ರೂ.ಗುರಿ ತಲುಪಿದೆ. ಪ್ರಸಕ್ತ ವರ್ಷದಲ್ಲಿ 8.5 ಕೋಟಿ ಮಾನವ ದಿನಗಳ ಸೃಜನೆಗೆ ನಿರ್ಧರಿಸಿದ್ದು ಈಗಾಗಲೇ 3.36 ಕೋಟಿ ರೂ.ಗಳ ಗುರಿ ತಲುಪಲಾಗಿದೆ ಎಂದು ವಿವರಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ಸೃಜನೆಗೆ ಒತ್ತು ನೀಡಬೇಕು. ಚೆಕ್ ಡ್ಯಾಮ್, ಶಾಲಾ ಕಾಂಪೌಂಡ್, ಆಟದ ಮೈದಾನ, ಶೌಚಾಲಯ ನಿರ್ಮಾಣ, ಮಳೆ ನೀರು ಸಂರಕ್ಷಣೆಗೆ ಅಗತ್ಯವಾದ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಜತೆಗೆ ವಿಶೇಷವಾಗಿ ಪಶು ಸಾಕಾಣಿಕೆಯಲ್ಲಿ ದನದ ಕೊಟ್ಟಿಗೆ, ಕುರಿ ದೊಡ್ಡಿಗಳ ನಿರ್ಮಾಣಕ್ಕೆ ಗಮನಹರಿಸಬೇಕು. ಈ ಬಗ್ಗೆ ರೈತರಿಗೆ ಮಾಹಿತಿ ನೀಡಿ ಕೊಟ್ಟಿಗೆಗಳ ನಿರ್ಮಾಣಕ್ಕೆ ದೊಡ್ಡ ಪ್ರಮಾಣದಲ್ಲಿ ಮುಂದಾಗಬೇಕು ಎಂದು ಕೃಷ್ಣಭೈರೇಗೌಡ ಸೂಚಿಸಿದರು.

ಚೆಕ್ ಡ್ಯಾಮ್‌ಗಳ ನಿರ್ಮಾಣದ ಸಮಯದಲ್ಲಿ ಉಪಗ್ರಹ ಆಧಾರಿತ ಚಿತ್ರಗಳ ಮಾಹಿತಿ ಪಡೆದು ನೀರು ಹರಿವಿನ ಪ್ರದೇಶಗಳನ್ನು ಗುರುತಿಸಿ ಜಿಪಿಎಸ್ ಮೂಲಕ ನಿರ್ದಿಷ್ಟ ಪಡಿಸಿದ ಸ್ಥಳಗಳಲ್ಲಿಯೇ ಚೆಕ್ ಡ್ಯಾಮ್ ನಿರ್ಮಿಸಬೇಕೆಂದು ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಘಟಕಗಳ ದುರಸ್ಥಿ: ರಾಜ್ಯದಲ್ಲಿ 13,600ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದು, ಆ ಪೈಕಿ 2,498 ಘಟಕಗಳು ವಿವಿಧ ಕಾರಣಗಳಿಗಾಗಿ ಕೆಟ್ಟು ಹೋಗಿವೆ. ಅದರಲ್ಲಿ 650ಘಟಕಗಳನ್ನು ಹೊರತುಪಡಿಸಿ ಉಳಿದ ಎಲ್ಲ ಘಟಕಗಳನ್ನು ದುರಸ್ತಿ ಮಾಡಲಾಗಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.

ಬಡವರಿಗೆ ನೆರವು: ಬಿಪಿಎಲ್ ಪಡಿತರದಾರರಿಗೆ ವಸತಿ ಯೋಜನೆಯಡಿ ಫಲಾನುಭವಿಗಳ ಮನೆ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಆದ್ಯತೆಯ ಮೇರೆಗೆ ಪ್ರತಿ ಫಲಾನುಭವಿಗೆ 22 ಸಾವಿರ ರೂ.ಆರ್ಥಿಕ ಸೌಲಭ್ಯ ಒದಗಿಸಲು ಅವಕಾಶವಿದೆ. ಈ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಲು ಎಲ್ಲ ಸಿಇಓಗಳಿಗೆ ಸೂಚಿಸಲಾಗಿದೆ ಎಂದರು.

ಎಲ್ಲ ಜಿಲ್ಲೆಗಳ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮಗೆ ನಿಗದಿಪಡಿಸಿರುವ ಗುರಿ ತಲುಪಲು ಬದ್ಧತೆಯಿಂದ ಕೆಲಸ ಮಾಡಲು ಪ್ರತಿಯೊಂದು ಯೋಜನೆಗಳ ಅನುಷ್ಠಾನದ ಸಾಧ್ಯತೆಗಳ ಬಗ್ಗೆ ಗಮನಹರಿಸಿ ಕಾಲಮಿತಿಯೊಳಗೆ ಕೆಲಸ ಮಾಡಬೇಕು. ವೈಫಲ್ಯಗಳ ಬಗ್ಗೆ ಯಾವುದೇ ರೀತಿಯ ಕಾರಣ ಹೇಳುವಂತಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಸರಕಾರದ ಕಾರ್ಯದರ್ಶಿ ಎಂ.ವಿ. ಸಾವಿತ್ರಿ, ಆಯುಕ್ತರಾದ ಕನಗವಲ್ಲಿ ಹಾಗೂ ಡಾ.ವಿಶಾಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಇನ್ನೂ 7 ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತ

‘ಸ್ವಚ್ಚ ಭಾರತ್ ಅಭಿಯಾನದಡಿ 3 ವರ್ಷದಲ್ಲಿ ರಾಜ್ಯದ 20 ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಿಸಿದ್ದು, ಇದೀಗ ತುಮಕೂರು, ಚಿತ್ರದುರ್ಗ, ಬಳ್ಳಾರಿ, ಕಲಬುರ್ಗಿ, ಬೆಳಗಾವಿ, ಬಾಗಲಕೋಟೆ, ಯಾದಗಿರಿ ಸೇರಿ 7 ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ನವೆಂಬರ್ 1ರಂದು ಘೋಷಿಸಲಾಗುವುದು. ಅಲ್ಲದೆ, ರಾಯಚೂರು, ವಿಜಯಪುರ, ಬೀದರ್ ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಕ್ರಮ ವಹಿಸಲಾಗಿದೆ’

-ಕೃಷ್ಣಭೈರೇಗೌಡ ಗ್ರಾಮೀಣಾಭಿವೃದ್ಧಿ ಸಚಿವ

ಆಯ್ದ ಹಳ್ಳಿಗಳಲ್ಲಿ ಕಸ ಸಂಗ್ರಹ

‘ಗ್ರಾಮೀಣ ಪ್ರದೇಶದಲ್ಲಿ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಆಯ್ದ ಹಳ್ಳಿಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಕಾರ್ಯ ಯೋಜನೆ ರೂಪಿಸಲಾಗಿದ್ದು, ಅದನ್ನು ಅನುಷ್ಠಾನಗೊಳಿಸಲಾಗುವುದು. ಪ್ರತಿ ತಾಲೂಕಿನ ಒಂದೆರಡು ಗ್ರಾ.ಪಂ.ಗಳಲ್ಲಿ ಪ್ರತ್ಯೇಕ ಪ್ಲಾಸ್ಟಿಕ್ ಸಂಗ್ರಹಣೆ ಹಾಗೂ ಒಣ ಮತ್ತು ಹಸಿ ತ್ಯಾಜ್ಯ ನಿರ್ವಹಣೆಗೆ ಯೋಜನೆ ರೂಪಿಸಲಾಗಿದೆ’

-ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News