ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಾಸ್ಟೆಲ್ ಸೌಲಭ್ಯಕ್ಕೆ ಆಗ್ರಹಿಸಿ ಧರಣಿ
ಬೆಂಗಳೂರು, ಸೆ.27: ಹಾಸ್ಟೆಲ್ ಬಯಸಿ ಅರ್ಜಿ ಸಲ್ಲಿಸುವ ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಸಿಗಬೇಕು ಹಾಗೂ ದಲಿತ ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಸುತ್ತೋಲೆಯನ್ನು ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಮೌರ್ಯ ವೃತ್ತದ ಬಳಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಮಂಗ್ಳೂರು ವಿಜಯ, ಶಿಕ್ಷಣವೇ ವಿಮೋಚನೆಯ ಹೆಬ್ಬಾಗಿಲು. ಗುಣಾತ್ಮಕ ಶಿಕ್ಷಣ ನೀಡುವುದು, ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸುವುದು ಸರಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಸರಕಾರ ಅಗತ್ಯವಾದ ರೀತಿಯಲ್ಲಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ವಸತಿ ನಿಲಯಗಳನ್ನು ಸ್ಥಾಪಿಸಬೇಕು ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಿದೆ ಎಂದರು.
ಆದರೆ, ರಾಜ್ಯ ಸರಕಾರ ಇದೀಗ ಸುತ್ತೋಲೆ ಹೊರಡಿಸಿ ಹಾಸ್ಟೆಲ್‌ಗೆ ಆಯ್ಕೆ ಬಯಸಿ ಬರುವವರಿಗೆ ಅವಕಾಶ ನೀಡದೆ ವಂಚಿಸಲು ಮುಂದಾಗಿದೆ. ಸರಕಾರ ಸುತ್ತೋಲೆಯಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಬಾರದು ಎಂದು ಸೂಚಿಸಿದೆ. ಈ ಆದೇಶ ವಿದ್ಯಾರ್ಥಿಗಳಿಗೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನಿಷ್ಠ ಜ್ಞಾನವಿರುವ ಪ್ರತಿಯೊಬ್ಬರಿಗೂ ಹಾಸ್ಟೆಲ್‌ಗಳಿಗೆ ಬರುವವರು ಎಲ್ಲರೂ ಬಡ ಮಕ್ಕಳು ಎಂಬುದು ಅರ್ಥವಾಗುತ್ತದೆ. ಆದರೆ, ದಲಿತ ಕುಟುಂಬದಿಂದ ಬಂದಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಇಂತಹ ಆದೇಶಗಳಿಗೆ ಕುಮ್ಮಕ್ಕು ನೀಡುತ್ತಿರುವುದು ದುರದೃಷ್ಟಕರ. ದಲಿತನಾಗಿ ದಲಿತ ಮಕ್ಕಳ ಹಿತ ಕಾಪಾಡುವ ಬದಲಿಗೆ, ಮಾರಕವಾದ ಸುತ್ತೋಲೆ ಹೊರಡಿಸಿರುವುದು ಖೇದಕರ ಎಂದು ವಿಷಾದಿಸಿದರು.
ಡಿಎಸ್‌ಎಸ್ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ಮಾತನಾಡಿ, ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳು ಪ್ರತಿದಿನ ಪ್ರಯಾಣ ಮಾಡಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಅದರಲ್ಲಿಯೂ ದಲಿತ ಕುಟುಂಬದಿಂದ ಬರುವ ಮಕ್ಕಳು ಹಣಕಾಸಿನ ಮುಗ್ಗಟ್ಟಿನಿಂದ ಶಿಕ್ಷಣವನ್ನೇ ತ್ಯಜಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವರವಾಗಬೇಕಿದ್ದ ಇಲಾಖೆ ದಲಿತರಿಗೆ ಶಾಪವಾಗಿದೆ ಎಂದು ಆರೋಪಿಸಿದರು.
ಶಿಕ್ಷಣ ಪಡೆಯುವ ಸಲುವಾಗಿ ಇದ್ದ ಹಾಸ್ಟೆಲ್ ಸೌಲಭ್ಯವನ್ನು ಬಯಸುವ ಎಲ್ಲ ಅರ್ಹ, ದುರ್ಬಲ ವರ್ಗದ ಮಕ್ಕಳಿಗೆ ಅವಕಾಶವನ್ನು ನೀಡಬೇಕಾಗಿದೆ. ಆದರೆ, ಇಲಾಖೆಯ ಆದೇಶ ಇದಕ್ಕೆ ವ್ಯತಿರಿಕ್ತವಾಗಿದೆ. ಇದು ದುರ್ಬಲ ವರ್ಗದವರನ್ನು ಶಿಕ್ಷಣದಿಂದ ದೂರವಿಡುವ ಪ್ರಯತ್ನವಾಗಿದೆ ಎಂದು ಅವರು ದೂರಿದರು.
ಪ್ರತಿಭಟನೆಯಲ್ಲಿ ಪ್ರಗತಿಪರ ಹೋರಾಟಗಾರ ರುದ್ರಪ್ಪ ಹನಗವಾಡಿ, ಜೀವನಹಳ್ಳಿ ಆರ್.ವೆಂಕಟೇಶ್, ಆನೇಕಲ್ ವೆಂಕಟೇಶಮೂರ್ತಿ, ದಾಸರಹಳ್ಳಿ ರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಎಸ್ಸಿ-ಎಸ್ಟಿ ಭಡ್ತಿ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ದಲಿತ ಸಮುದಾಯಕ್ಕೆ ಮಾರಕವಾಗಿದೆ. ಇದೇ ವೇಳೆ ಭಡ್ತಿ ಮೀಸಲಾತಿ ಸಂಬಂಧ ರಾಜ್ಯ ಸರಕಾರಗಳ ವಿವೇಚನೆ ಬಿಟ್ಟಿದ್ದು ಎಂಬ ಅಂಶವನ್ನು ಸೇರಿಸಿದೆ. ಹೀಗಾಗಿ, ಹಿಂದಿನ ಸರಕಾರ ಎಸ್ಸಿ-ಎಸ್ಟಿ ನೌಕರರ ಹಿತ ಕಾಪಾಡುವ ನಿಟ್ಟಿನಲ್ಲಿ ತಂದಿರುವ ಕಾಯ್ದೆಯನ್ನು ಇಂದಿನ ಸಮ್ಮಿಶ್ರ ಸರಕಾರ ಜಾರಿ ಮಾಡಬೇಕು. ಈ ಮೂಲಕ ಕೋರ್ಟ್‌ನ ಆದೇಶ ಪಾಲಿಸಿದಂತಾಗುತ್ತದೆ, ಸಾಮಾಜಿಕ ನ್ಯಾಯ ನೀಡಿದಂತಾಗುತ್ತದೆ.
-ಲಕ್ಷ್ಮಿನಾರಾಯಣ ನಾಗವಾರ ಡಿಎಸ್‌ಎಸ್ ರಾಜ್ಯ ಸಂಚಾಲಕ