ಜಾನಪದ ಕಲೆ ನಮ್ಮ ಮಣ್ಣಿನ ಗುಣವನ್ನು ಹಿಡಿದಿಟ್ಟುಕೊಂಡಿದೆ: ಆರ್.ಚೌಡಾರೆಡ್ಡಿ
ಬೆಂಗಳೂರು, ಸೆ.27: ಜಾನಪದ ಕಲೆ, ಸಾಹಿತ್ಯವು ನಮ್ಮ ಮಣ್ಣಿನ ಗುಣ ಮತ್ತು ಸಂಸ್ಕೃತಿಯ ಬೇರುಗಳನ್ನು ಹಿಡಿದಿಟ್ಟುಕೊಂಡಿದೆ ಎಂದು ವಿಧಾನಪರಿಷತ್ತಿನ ಸದಸ್ಯ ಆರ್.ಚೌಡಾರೆಡ್ಡಿ ಅಭಿಪ್ರಾಯಿಸಿದ್ದಾರೆ.
ಗುರುವಾರ ನಗರದ ಎಡಿಎ ರಂಗಮಂದಿರಲ್ಲಿ ವಿಶ್ವಮಾನವ ಯುವ ವೇದಿಕೆ ಹಾಗೂ ಕ್ವೀನ್ಸ್ ಗ್ಲೋಬಲ್ ಮ್ಯಾನೇಜ್‌ಮೆಂಟ್ ಸೆಲ್ಯೂಷನ್ಸ್ ವತಿಯಿಂದ ಆಯೋಜಿಸಿದ್ದ ಜಾಗತಿಕ ಜಾನಪದ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ಜನರಿಂದ ಆರಂಭಗೊಂಡಿರುವ ಜಾನಪದ ಸಾಹಿತ್ಯ, ಕಲೆ, ಸಂಸ್ಕೃತಿಯು ಅಪಾರವಾದ ಶ್ರೀಮಂತಿಕೆಯಿಂದ ಕೂಡಿದ್ದು, ನಮ್ಮ ಸಂಸ್ಕೃತಿಯ ಬೇರುಗಳನ್ನು ಹಿಡಿದಿಟ್ಟುಕೊಂಡಿದೆ ಎಂದರು.
ದೇಶದ ಪ್ರತಿಯೊಂದು ಭಾಗದಲ್ಲಿಯೂ ಒಂದೊಂದು ಪ್ರಕಾರದ ಜಾನಪದ ಸಂಸ್ಕೃತಿ ಇರುವುದನ್ನು ನಾವು ಕಾಣುತ್ತಿದ್ದೇವೆ. ಜಾನಪದ ಗೀತೆಗಳು, ನೃತ್ಯಗಳು ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಪ್ರಸ್ತುತವಾಗಿದೆ. ಹಬ್ಬ-ಹರಿದಿನ ಸೇರಿದಂತೆ ಮತ್ತಿತರ ಉತ್ಸವಗಳಲ್ಲಿ ಜಾನಪದ ಕಲೆ ಸಾಕಷ್ಟು ಮೆರಗು ತಂದು ಕೊಡುತ್ತದೆ ಎಂದು ಅವರು ತಿಳಿಸಿದರು.
ಇತ್ತೀಚೆಗೆ ನಗರ ಪ್ರದೇಶ ಜಾಗತೀಕರಣ ಮತ್ತು ಪಾಶ್ಚಿಮಾತ್ಯೀಕರಣದ ಹೊಡೆತಗಳಿಗೆ ಸಿಲುಕಿ ತನ್ನ ಚಾಪನ್ನು ಕಳೆದುಕೊಳ್ಳುತ್ತಿದೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಇಂದಿನ ಯುವ ಸಮುದಾಯ ಮಾರು ಹೋಗುತ್ತಿದೆ. ಹೀಗಾಗಿ, ನಶಿಸಿ ಹೋಗುತ್ತಿರುವ ಗ್ರಾಮೀಣ ಕಲೆಯಾದ ಜಾನಪದ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವ ಸಮುದಾಯದ ಪಾತ್ರ ಅಪಾರವಾದುದಾಗಿದೆ ಎಂದು ನುಡಿದರು.
ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ಮಾತನಾಡಿ, ನಮ್ಮ ಮೂಲ ಕಲೆಗಳು ಉಳಿಯಬೇಕಾದರೆ ಹಿಂದಿನ ಕಲಾಪ್ರಕಾರಗಳ ಕುರಿತ ತರಬೇತಿ ಅತ್ಯಗತ್ಯವಾಗಿದೆ. ಅಲ್ಲದೆ, ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಉಳಿಸಲು ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅದಕ್ಕೆ ಸಂಘ-ಸಂಸ್ಥೆಗಳು, ಬೇರೆ ಬೇರೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ಬೆಂಬಲ ನೀಡಬೇಕು. ಕಲೆಗಳನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್, ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಡಾ.ಮಧುರಾಣಿ ಗೌಡ, ಪ್ರಧಾನ ಕಾರ್ಯದರ್ಶಿ ಜಿ.ಕೆ.ಮಹೇಶ್, ಖಜಾಂಚಿ ಸುನೀಲ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಜಾನಪದ ಕಲೆಗಳು ಪಠ್ಯವಾಗಬೇಕು
ಇತ್ತೀಚಿನ ತಲೆಮಾರಿನ ಯುವ ಸಮುದಾಯ ಕಲೆ, ಸಂಸ್ಕೃತಿ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ನಾಡಿನ ಜಾನಪದ ಕಲೆ, ಸಂಸ್ಕೃತಿಗೆ ಸಂಬಂಧಿಸಿದಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪಠ್ಯಪುಸ್ತಕಗಳಲ್ಲಿ ಅಗತ್ಯವಾದ ಪಠ್ಯವನ್ನು ಸೇರಿಸಬೇಕು. ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆ.
-ಟಿ.ತಿಮ್ಮೇಗೌಡ, ನಿವೃತ್ತ ಐಎಎಸ್ ಅಧಿಕಾರಿ