ಪಾಕ್‌ಗೆ ಶಾಕ್ ನೀಡಿದ ಬಾಂಗ್ಲಾ; ಪ್ರಶಸ್ತಿ ಸುತ್ತಿಗೆ ಲಗ್ಗೆ

Update: 2018-09-27 18:50 GMT

ಅಬುಧಾಬಿ,ಸೆ.27: ಸರ್ವಾಂಗೀಣ ಪ್ರದರ್ಶನ ನೀಡಿದ ಬಾಂಗ್ಲಾದೇಶ ತಂಡ ಏಶ್ಯಕಪ್‌ನ ಕೊನೆಯ ಸೂಪರ್-4 ಪಂದ್ಯದಲ್ಲಿ ಪಾಕಿಸ್ತಾನವನ್ನು 37 ರನ್‌ಗಳಿಂದ ಮಣಿಸಿ ಶಾಕ್ ನೀಡಿತು. ಈ ಗೆಲುವಿನೊಂದಿಗೆ ಶುಕ್ರವಾರ ನಡೆಯುವ ಫೈನಲ್‌ಗೆ ತೇರ್ಗಡೆಯಾಯಿತು. ಏಶ್ಯಕಪ್ ಇತಿಹಾಸದಲ್ಲಿ ಮೂರನೇ ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ.

ಇಲ್ಲಿ ಬುಧವಾರ ಸೆಮಿ ಫೈನಲ್ ಮಹತ್ವ ಪಡೆದಿದ್ದ ಪಂದ್ಯದಲ್ಲಿ ಟಾಸ್ ಜಯಿಸಿದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮುಶ್ಫಿಕುರ್ರಹೀಂ (99)ದಾಖಲಿಸಿದ 30ನೇ ಅರ್ಧಶತಕ ಹಾಗೂ ಮುಹಮ್ಮದ್ ಮಿಥುನ್ ಗಳಿಸಿದ 60 ರನ್ ನೆರವಿನಿಂದ ಬಾಂಗ್ಲಾದೇಶ ತಂಡ ನಿಗದಿತ 50 ಓವರ್‌ಗಳಲ್ಲಿ 239 ರನ್ ಗಳಿಸಿ ಆಲೌಟಾಯಿತು. ಮುಶ್ಫಿಕುರ್ರಹೀಂ ಕೇವಲ 1 ರನ್‌ನಿಂದ ಏಳನೇ ಶತಕ ವಂಚಿತರಾದರು. ಮಿಥುನ್‌ರೊಂದಿಗೆ ನಾಲ್ಕನೇ ವಿಕೆಟ್‌ಗೆ 144 ರನ್ ಜೊತೆಯಾಟ ನಡೆಸಿದ್ದ ರಹೀಮ್ 5 ಓವರ್‌ನೊಳಗೆ 12 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ತಂಡಕ್ಕೆ ಆಸರೆಯಾಗಿದ್ದರು.

  ಗೆಲ್ಲಲು 240 ರನ್ ಸವಾಲು ಪಡೆದ ಪಾಕಿಸ್ತಾನದ ಆರಂಭ ಕೂಡ ಕಳಪೆಯಾಗಿತ್ತು. ಪಾಕ್ 3.3 ಓವರ್‌ಗಳಲ್ಲಿ 18 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಫಕಾರ್ ಝಮಾನ್, ಬಾಬರ್ ಆಝಂ ಹಾಗೂ ನಾಯಕ ಸರ್ಫರಾಝ್ ಅಹ್ಮದ್ ಬೇಗನೆ ವಿಕೆಟ್ ಕೈಚೆಲ್ಲಿದರು. ಆರಂಭಿಕ ಆಟಗಾರ ಇಮಾಮ್‌ವುಲ್ ಹಕ್ ಏಕಾಂಗಿ ಹೋರಾಟ(83 ರನ್,105 ಎಸೆತ, 2 ಬೌಂಡರಿ,1 ಸಿಕ್ಸರ್) ನೀಡಿದರೂ ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ ಬಾಂಗ್ಲಾದೇಶ ತಂಡ ಪಾಕ್‌ನ್ನು 50 ಓವರ್‌ಗಳಲ್ಲಿ 9 ವಿಕೆಟ್‌ಗೆ 202 ರನ್‌ಗೆ ನಿಯಂತ್ರಿಸಲು ಯಶಸ್ವಿಯಾಯಿತು.

ಇಮಾಮ್ ಅವರು ಶುಐಬ್ ಮಲಿಕ್(30) ಹಾಗೂ ಆಸಿಫ್ ಅಲಿ(31) ಅವರೊಂದಿಗೆ ಎರಡು ಜೊತೆಯಾಟ ನಡೆಸಿ ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು. ಮಲಿಕ್‌ರೊಂದಿಗೆ 4ನೇ ವಿಕೆಟ್‌ಗ 67 ರನ್ ಜೊತೆಯಾಟ ನಡೆಸಿದ್ದ ಹಕ್ ಅವರು ಅಲಿ ಅವರೊಂದಿಗೆ 6ನೇ ವಿಕೆಟ್‌ಗೆ ನಿರ್ಣಾಯಕ 71 ರನ್ ಸೇರಿಸಿದರು. ಆದರೆ, ಛಲಬಿಡದೆ ಹೋರಾಡಿದ ಬಾಂಗ್ಲಾದೇಶ ಗೆಲುವು ತನ್ನದಾಗಿಸಿಕೊಂಡಿತು. ಎಡಗೈ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್(43ಕ್ಕೆ4) ಹಾಗೂ ಆಫ್-ಸ್ಪಿನ್ನರ್ ಮೆಹಿದಿ ಹಸನ್(28ಕ್ಕೆ2)ತಂಡಕ್ಕೆ ರೋಚಕ ಗೆಲುವು ತಂದರು.

ಪಾಕ್ ಇನಿಂಗ್ಸ್‌ನ 21ನೇ ಓವರ್‌ನಲ್ಲಿ ರುಬೆಲ್ ಹುಸೈನ್ ಎಸೆತದಲ್ಲಿ ಮಿಡ್‌ವಿಕೆಟ್‌ನಲ್ಲಿ ಮಲಿಕ್ ನೀಡಿದ ಅದ್ಭುತ ಕ್ಯಾಚ್ ಪಡೆದ ಬಾಂಗ್ಲಾ ನಾಯಕ ಮಶ್ರಾಫೆ ಮೊರ್ತಾಝಾ ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು. ಆಗ ಪಾಕ್ ಸ್ಕೋರ್ 85ಕ್ಕೆ 4.

ಮೇಲಕ್ಕೆ ಜಿಗಿದು ಒಂದೇ ಕೈಯಲ್ಲಿ ಕ್ಯಾಚ್ ಪಡೆದ ಮೊರ್ತಾಝಾ ಪಂದ್ಯ ಬಾಂಗ್ಲಾದತ್ತ ವಾಲುವಂತೆ ಮಾಡಿದರು. ಇಮಾಮ್ ಹಾಗೂ ಅಲಿ 71 ರನ್ ಜೊತೆಯಾಟದಿಂದ ಗೆಲುವಿನ ವಿಶ್ವಾಸ ಮೂಡಿಸಿದ್ದರು. ಆದರೆ, ಈ ಇಬ್ಬರು ಆಟಗಾರರು ಬೆನ್ನುಬೆನ್ನಿಗೆ ಔಟಾದಾಗ ಪಾಕ್ ಗೆಲುವಿನ ಕನಸು ಭಗ್ನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News