ಕಲ್ಕೆರೆ ಕೆರೆಗೆ ಕಲುಷಿತ ನೀರು: ಮೀನುಗಳ ಮಾರಣಹೋಮ
Update: 2018-09-28 21:08 IST
ಬೆಂಗಳೂರು, ಸೆ.28: ನಗರದ ಕಳೆದ ನಾಲ್ಕೈದು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಕೆ.ಆರ್.ಪುರದ ಕಲ್ಕೆರೆ ಕೆರೆಗೆ ಕಲುಷಿತ ನೀರು ನುಗ್ಗಿದ ಪರಿಣಾಮ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ. ಕೆರೆಯ ಸುತ್ತಮುತ್ತ ದುರ್ವಾಸನೆ ಹರಡುತ್ತಿದೆ ಎನ್ನಲಾಗಿದೆ.
ಮಳೆನೀರಿನೊಂದಿಗೆ ಎಸ್‌ಟಿಪಿ ನೀರು, ಚರಂಡಿ ಮತ್ತು ರಾಸಾಯನಿಕ ನೀರು ಕೆರೆಗೆ ಸೇರಿದ್ದರಿಂದ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಇದರಿಂದ ಟೆಂಡರ್ ಪಡೆದು ಮೀನುಗಾರಿಕೆ ನಡೆಸುತ್ತಿದ್ದ ಗುತ್ತಿಗೆದಾರರಿಗೆ ನಷ್ಟ ಉಂಟಾಗಿದೆ. ಕೆರೆಯ ಸುತ್ತಮುತ್ತ ಸಾರ್ವಜನಿಕರು ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಕೆರೆಯಲ್ಲಿ ಸಾವನ್ನಪ್ಪಿರುವ ಮೀನುಗಳನ್ನು ತೆರವುಗೊಳಿಸಿ, ಕೆರೆಯನ್ನು ಶುದ್ಧೀಕರಿಸಬೇಕು. ಕೊಳಚೆ ನೀರು ಕೆರೆಗೆ ಸೇರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.