ಅಹಿಂಸಾತ್ಮಕ ವಿಷಯಗಳು ಪಠ್ಯದಲ್ಲಿ ಅಳವಡಿಸಲು ಚಿಂತನೆ: ಬೆಂಗಳೂರು ಕೇಂದ್ರ ವಿ.ವಿ ಉಪಕುಲಪತಿ ಪ್ರೊ.ಜಾಫೆಟ್
ಬೆಂಗಳೂರು, ಸೆ.28: ಅಹಿಂಸಾತ್ಮಕ ನಡವಳಿಕೆ, ಜೀವನ ಪದ್ಧತಿ ಕುರಿತ ವಿಷಯಗಳನ್ನು ಪಠ್ಯಗಳಲ್ಲಿ ಅಳವಡಿಸಲು ಚಿಂತನೆ ನಡೆಸಲಾಗುವುದು ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಜಾಫೆಟ್ ತಿಳಿಸಿದರು.
ಶುಕ್ರವಾರ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಹಾಗೂ ಗ್ರಾಮ ಸೇವಾ ಸಂಘ ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿಯ 150ನೆ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ‘ಅಹಿಂಸಾ ಸಂವಹನ’ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಕೇವಲ ಪಠ್ಯ ವಿಷಯಗಳನ್ನಷ್ಟೆ ಕಲಿತು ಹೋಗುವುದಲ್ಲ. ತನ್ನ ಸಹಪಾಠಿಗಳು, ಶಿಕ್ಷಕರೊಂದಿಗೆ ಮುಕ್ತವಾಗಿ ಬೆರೆಯಬೇಕು. ಇದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಕುಟುಂಬ ಹಾಗೂ ಊರಿನ ಹಿನ್ನೆಲೆಯನ್ನು ತಿಳಿಯಲು ಸಾಧ್ಯವಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಉತ್ತಮ ಮಾತುಗಾರಿಕೆ ಕೌಶಲ್ಯವನ್ನು ರೂಢಿಸಿಕೊಳ್ಳುವ, ಅಹಿಂಸಾತ್ಮಕ ನಡವಳಿಕೆಯನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ನಡುವೆ ತಾರತಮ್ಯ ಹೆಚ್ಚಾಗಿದೆ. ಇದರಿಂದಾಗಿ ಭಿನ್ನಾಭಿಪ್ರಾಯಗಳು ಉಂಟಾಗಿ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಇವೆಲ್ಲ ಅಂತಹ ಗಂಭೀರವಾದ ವಿಷಯಗಳಲ್ಲ. ಎಲ್ಲವನ್ನು ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳಬಹುದು. ಇದಕ್ಕೆ ಶಿಕ್ಷಕ ವರ್ಗ ಮುಂದಾಗಬೇಕು ಎಂದು ಅವರು ಆಶಿಸಿದರು.
ಸಂಸ್ಕೃತಿ ಚಿಂತಕ ಚಿರಂಜೀವಿ ಸಿಂಗ್ ಮಾತನಾಡಿ, ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಮಾತುಕತೆಯ ಮೂಲಕವೆ ಬಗೆ ಹರಿಸಿಕೊಳ್ಳಬಹುದು. ಆದರೆ, ಪ್ರತಿಷ್ಠೆಗಳ ಕಾರಣದಿಂದಾಗಿ ಮಾತುಕತೆಗೆ ಯಾರು ಮುಂದಾಗುವುದಿಲ್ಲವೆಂದು ವಿಷಾದಿಸಿದರು.
ನಾನು ಐಎಎಸ್ ಹುದ್ದೆಗೆ ನೇಮಕವಾಗಿ ನೇರವಾಗಿ ಕರ್ನಾಟಕಕ್ಕೆ ಬಂದೆ. ಇಲ್ಲಿ ನನಗೆ ಎಲ್ಲವು ಹೊಸದಾಗಿಯೆ ಕಂಡಿತು. ಮೊದಲ ಒಂದು ತಿಂಗಳು ಗ್ರಾಮಗಳ ಅಧ್ಯಯನಕ್ಕೆ ಬಳ್ಳಾರಿ ಜಿಲ್ಲೆಯ ಗ್ರಾಮವೊಂದರಲ್ಲಿ ವಾಸ್ತವ್ಯ ಹೂಡಿದ್ದೆ. ಈ ಸಂದರ್ಭದಲ್ಲಿ ಹಳ್ಳಿಯ ಜನರಿಂದ ನನ್ನ ಹುದ್ದೆಗೆ ಅಗತ್ಯವಾದ ಪ್ರಾಥಮಿಕ ಅನುಭವಗಳನ್ನು ಕಲಿತು ಕೊಂಡೆ. ಮುಕ್ತವಾದ ಮಾತುಕತೆಯ ಮೂಲಕ ಎಲ್ಲವನ್ನು ಸಾಧಿಸಬಹುದು ಎಂಬುದಕ್ಕೆ ನನ್ನ ಅನುಭವಗಳೆ ಉದಾಹರಣೆಯೆಂದು ಅವರು ಹೇಳಿದರು.
ಸಾಮಾಜ ಶಾಸ್ತ್ರದ ಪ್ರಾಧ್ಯಾಪಕ ಪ್ರೊ.ಜಿಎಸ್‌ಆರ್ ಕೃಷ್ಣನ್ ಮಾತನಾಡಿ, ಯಾವುದೆ ವಿಷಯ ಇಲ್ಲವೆ ಘಟನೆಯನ್ನು ಪೂರ್ವಗ್ರಹ ಪೀಡಿತರಾಗಿ ನೋಡದೆ, ಸಮಚಿತ್ತ ಭಾವದಿಂದ ನೋಡಿದರೆ ಹಲವು ಸಮಸ್ಯೆಗಳಿಗೆ ಪರಿಹಾರ ಸರಳ ರೂಪದಲ್ಲಿಯೆ ಸಿಗಲಿದೆ. ಇಂತಹ ವೌಲ್ಯಯುತ ಗುಣವನ್ನು ಸಮಾಜದಲ್ಲಿ ಬಿತ್ತುವಂತಹ ಕೆಲಸವನ್ನು ಎಲ್ಲರೂ ಮಾಡಬೇಕಿದೆ ಎಂದು ಆಶಿಸಿದರು. ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ, ನಮ್ಮ ಮಾತುಕತೆಗಳು ಅಹಿಂಸಾತ್ಮಕವಾಗಿದ್ದರೆ ಹಲವು ಸಮಸ್ಯೆಗಳು ಸುಲಭವಾಗಿ ಬಗೆಹರಿಯಲಿವೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ಅಹಿಂಸಾತ್ಮಕ ವಿಷಯಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.