×
Ad

ಕಿವುಡರ ಕ್ಷೇಮಾಭಿವೃದ್ಧಿಗಾಗಿ ನಿಗಮ ಸ್ಥಾಪಿಸಲು ಒತ್ತಾಯ

Update: 2018-09-28 21:13 IST

ಬೆಂಗಳೂರು ಸೆ.28: ವಿಕಲಚೇತನರ ಸಮುದಾಯದಲ್ಲಿ ಕಿವುಡರ ಸಮಸ್ಯೆ ಭಿನ್ನವಾಗಿದ್ದು, ಕಿವುಡರ ಸರ್ವತೋಮುಖ ಕ್ಷೇಮಾಭಿವೃದ್ಧಿಗಾಗಿ ರಾಜ್ಯ ಸರಕಾರವು ಅಭಿವೃದ್ಧಿ ನಿಗಮವೊಂದನ್ನು ಸ್ಥಾಪಿಸಬೇಕು ಎಂದು ಕಿವುಡರ ಸಂಘದ ಅಧ್ಯಕ್ಷ ಕೆ.ಎಚ್.ಶಂಕರ್ ಒತ್ತಾಯಿಸಿದರು.

ಶುಕ್ರವಾರ ರವೀಂದ್ರ ಕಲಾಕ್ಷೇತ್ರದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ, ವಿಶ್ವ ಕಿವುಡರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಿವುಡರ ಸಮಸ್ಯೆ ಬಾಹ್ಯವಾಗಿ ಗೋಚರವಾಗುವುದಿಲ್ಲ. ಇದರಿಂದಾಗಿ ಅವರು ಸಮಸ್ಯೆಗಳನ್ನು ಸುಲಭವಾಗಿ ಅರಿಯಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯ ಸರಕಾರ ಕಿವುಡರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ, ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕೆಂದು ತಿಳಿಸಿದರು.

ಎಸೆಸೆಲ್ಸಿ, ಪದವಿ ಸೇರಿದಂತೆ ಉನ್ನತ ಶಿಕ್ಷಣ ಪಡೆದುಕೊಂಡಿರುವ ನೂರಾರು ಶ್ರವಣ ದೋಷವುಳ್ಳವರು ನಿರುದ್ಯೋಗಿಗಳಾಗಿ ಜೀವನ ನಡೆಸುತ್ತಿದ್ದಾರೆ. ಇವರಿಗೆ ಸರಕಾರಿ ಕಚೇರಿಗಳು ಮಾತ್ರವಲ್ಲದೆ ಖಾಸಗಿ ಉದ್ದಿಮೆಗಳಲ್ಲೂ ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಮೀಸಲಿಡುವಂತೆ ಚರ್ಚಿಸಿ, ಆದೇಶಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಅವರು ಒತ್ತಾಯಿಸಿದರು.

ಅಂಗವಿಕಲ ದಂಪತಿಗಳಿಗೆ ನೀಡುತ್ತಿರುವ ವಿವಾಹ ಪ್ರೋತ್ಸಾಹ ಧನವನ್ನು ಶ್ರವಣ ದೋಷ ದಂಪತಿಗೂ ವಿಸ್ತರಿಸಬೇಕು ಹಾಗೂ ಅವಿವಾಹಿತ ಶ್ರವಣ ಮಾಂದ್ಯರಿಗೂ ಇಂತಹ ಸೌಲಭ್ಯ ನೀಡಬೇಕು. ಅವರಿಗೆ ನೀಡುವ ಪಿಂಚಣಿ ಹಣವನ್ನು ಬ್ಯಾಂಕ್‌ನ ಖಾತೆಗೆ ನೇರವಾಗಿ ಜಮಾ ಮಾಡುವ ಸೌಲಭ್ಯ ಕಲ್ಪಿಸಬೇಕೆಂದು ಅವರು ಹೇಳಿದರು.

ಅಂಗವಿಕಲ ಮೀಸಲಾತಿ ಅನುಪಾತ ಶೇ.3ರಷ್ಟಿದ್ದು, ಈ ಮೀಸಲಾತಿಯಿಂದ ಯಾವುದೇ ಪ್ರಯೋಜನವಿಲ್ಲ. ಮೀಸಲಾತಿಯಲ್ಲಿ ಸಾಕಷ್ಟು ಅನ್ಯಾಯ ಆಗುತ್ತಿದ್ದು, ಅದನ್ನು ತಡೆಗಟ್ಟಬೇಕು ಹಾಗೂ ಮೀಸಲಾತಿಯನ್ನು ಶೇ.20ಕ್ಕೆ ಹೆಚ್ಚಿಸಬೇಕು. ವಯೋಮಿತಿಯನ್ನು 45 ವರ್ಷಕ್ಕೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.

ಶ್ರವಣದೋಷವುಳ್ಳ ಮ್ಕಕಳಿಗೆ ಶಾಲಾ ಕಾಲೇಜುಗಳಲ್ಲಿ ಸನ್ನೆಯಿಂದ ಪಾಠ ಮಾಡಬೇಕು. ಆದರೆ, ಆ ರೀತಿ ಕೆಲಸ ಮಾಡುವ ಶಿಕ್ಷಕರ ಸಂಖ್ಯೆ ಕಡಿಮೆ ಇದ್ದು, ಶೀಘ್ರವೆ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕೆಂದು ಅವರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ, ಸಂಘದ ಮುಖಂಡರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News