ದೇವಾಲಯಗಳು ಸ್ವ ಇಚ್ಛೆಯಿಂದ ಹಣ ಕೊಟ್ಟಿರದಿದ್ದರೆ ನ್ಯಾಯಾಲಯದ ಗಮನಕ್ಕೆ ತರಲಿ: ಹೈಕೋರ್ಟ್

Update: 2018-09-28 17:02 GMT

ಬೆಂಗಳೂರು, ಸೆ.28: ಕೊಡಗು ನೆರೆ ಪರಿಹಾರಕ್ಕೆ ಮುಜರಾಯಿ ಇಲಾಖೆಯ 81 ದೇವಸ್ಥಾನಗಳ ಹುಂಡಿ ಹಣ ಬಳಕೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಒಂದು ವೇಳೆ ದೇವಾಲಯಗಳು ಸ್ವಇಚ್ಛೆಯಿಂದ ಹಣವನ್ನು ಕೊಟ್ಟಿರದಿದ್ದರೆ ನ್ಯಾಯಾಲಯದ ಗಮನಕ್ಕೆ ತರಲಿ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಅರ್ಜಿಯನ್ನು ಇತ್ಯರ್ಥಪಡಿಸಿದೆ. ಈ ಸಂಬಂಧ ನಗರದ ಹಿರಿಯ ನಾಗರಿಕರಾದ ಹೇಮಾ ನಾಯ್ಡು ಮತ್ತು ವಿ.ಆರ್.ಸಂಪತ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಪವನ್‌ಚಂದ್ರಶೆಟ್ಟಿ ಅವರು, ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳ ಹುಂಡಿಯ ಹಣವನ್ನು ದೇವಸ್ಥಾನಗಳ ಅಭಿವೃದ್ಧಿಗೆ ಬಳಸಬೇಕೆಂದು ಕರ್ನಾಟಕ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಕಾಯ್ದೆ-1997ರಲ್ಲಿ ಇದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಹಾಗಾದರೆ ಕೊಡಗಿನ ಸಂತ್ರಸ್ತರಿಗೆ ಹಣವನ್ನು ನೀಡುವುದು ಬೇಡವೇ ಎಂದು ಪ್ರಶ್ನಿಸಿತು. ಅರ್ಜಿದಾರರ ಪರ ವಕೀಲರಿಗೆ ಹಾಗಾದರೆ ಕೊಡಗು ನೆರೆ ಸಂತ್ರಸ್ತರಿಗೆ ಏನು ಸಹಾಯ ಮಾಡಿದ್ದೀರಿ ಎಂದಿತು. ಇದಕ್ಕೆ ಅರ್ಜಿದಾರರ ಪರ ವಕೀಲರು ಶ್ರಮದಾನ ಹಾಗೂ ಇನ್ನಿತರ ಆಹಾರ ಸಾಮಗ್ರಿಗಳನ್ನು ನೀಡಿದ್ದೇವೆ ಎಂದು ತಿಳಿಸಿದರು.

ಅರ್ಜಿದಾರರ ಮನವಿಯೇನು: ಇತ್ತೀಚೆಗೆ ಸಂಭವಿಸಿದ ನೆರೆ ಹಾನಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿ ಕ್ರೋಡೀಕರಣಕ್ಕೆ ರಾಜ್ಯ ಸರಕಾರ ಆ.21ರಂದು ಹೊರಡಿಸಿರುವ ಆದೇಶ ರದ್ದುಗೊಳಿಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು.

ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ 81 ಅಧಿಸೂಚಿತ ದೇವಾಲಯಗಳು ಇಂತಿಷ್ಟು ಮೊತ್ತದ ಹಣವನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕೆಂದು ನಿರ್ದೇಶಿಸಲಾಗಿದೆ. ಇದು ಕರ್ನಾಟಕ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಕಾಯ್ದೆ-1997ರ ಉಲ್ಲಂಘನೆ ಎಂಬುದು ಅರ್ಜಿದಾರರ ಆರೋಪ.

ಮುಜರಾಯಿ ಕಾಯ್ದೆಯ ಅನುಸಾರ ಎಲ್ಲ ಧಾರ್ಮಿಕ ದತ್ತಿ ಸಂಸ್ಥೆಗಳೂ ಸಮಾನ. ಇದರಲ್ಲಿ ತಾರತಮ್ಯ ಎಸಗುವುದು ಸಲ್ಲದು. ಮುಜರಾಯಿ ಇಲಾಖೆಯ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸುವುದು ಕಾನೂನು ಬಾಹಿರ ಎಂದು ಆಕ್ಷೇಪಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News