ನ್ಯಾಯವಾದಿಗಳು ಜನರಲ್ಲಿ ಕಡಿಮೆ ಶುಲ್ಕ ಪಡೆಯಲಿ: ನ್ಯಾ.ಆರ್.ಬಿ.ಬೂದಿಹಾಳ್

Update: 2018-09-28 17:15 GMT

ಬೆಂಗಳೂರು, ಸೆ.28: ತಮ್ಮ ಸಮಸ್ಯೆಗಳನ್ನು ಬಗೆ ಹರಿಸಿಕೊಡಿ ಎಂದು ಕೋರ್ಟ್‌ಗಳಿಗೆ ಬರುವ ಜನರಲ್ಲಿ ನ್ಯಾಯವಾದಿಗಳು ಆದಷ್ಟು ಕಡಿಮೆ ಫೀಜ್‌ಅನ್ನು ತೆಗೆದುಕೊಂಡು ನ್ಯಾಯ ಒದಗಿಸಿಕೊಡಲು ಪ್ರಯತ್ನಿಸಬೇಕೆಂದು ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಸಲಹೆ ನೀಡಿದ್ದಾರೆ.

ಶುಕ್ರವಾರ ಹೈಕೋರ್ಟ್‌ನ ಸಭಾಂಗಣದಲ್ಲಿ ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೀಳ್ಕೋಡುಗೆಯನ್ನು ಸ್ವೀಕರಿಸಿ ಮಾತನಾಡಿದ ಆರ್.ಬಿ.ಬೂದಿಹಾಳ್ ಅವರು, ನ್ಯಾಯವಾದಿಗಳು ಕಡಿಮೆ ಫೀಜ್‌ಅನ್ನು ತೆಗೆದುಕೊಂಡು ಜನರಿಗೆ ನ್ಯಾಯವನ್ನು ಒದಗಿಸಿಕೊಟ್ಟರೆ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಆದರೆ, ವೃತ್ತಿಯ ಪಾವಿತ್ರತೆ ಹಾಳಾಗುತ್ತಿದ್ದು, ನ್ಯಾಯವಾದಿಗಳು ಸಮಸ್ಯೆಯನ್ನು ಹೇಳಿಕೊಂಡು ಬರುವ ಜನರಲ್ಲಿ ಕಡಿಮೆ ಫೀಜ್‌ಅನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

1939ರಲ್ಲಿ ಬೆಳಗಾವಿಯಲ್ಲಿ ಒಂದೇ ಕಾನೂನು ಕಾಲೇಜು ಇತ್ತು. ಅಲ್ಲಿಯೆ ಕಷ್ಟಪಟ್ಟು ಓದಿ ನ್ಯಾಯಾಧೀಶನಾಗಿ, ನ್ಯಾಯಮೂರ್ತಿಯಾದೆ. ಇಂತಹ ಹುದ್ದೆಯು ತಮಗೆ ಲಭಿಸಿರುವುದು ನನ್ನ ಪುಣ್ಯ ಎಂದು ನುಡಿದರು.

ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮಾತನಾಡಿ, ನ್ಯಾಯಮೂರ್ತಿ ಬೂದಿಹಾಳ್ ಅವರು ವೈಯಕ್ತಿಕ ವಿಚಾರವಾಗಿ ಏನನ್ನೂ ಕೇಳಿಕೊಂಡು ಬರಲಿಲ್ಲ. ಅಲ್ಲದೆ, ನಕಾರಾತ್ಮಕವಾಗಿ ದೂರವಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಮಾತನಾಡಿ, ಬೂದಿಹಾಳ್ ಅವರು ಹೈಕೋರ್ಟ್‌ನಲ್ಲಿ ಕಳೆದ ಐದು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದು, ಕೋರ್ಟ್‌ನಲ್ಲೂ ಹೆಚ್ಚು ದಿನಗಳ ಕಾಲ ರಿಜಿಸ್ಟ್ರಾರ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇಂತಹ ದಕ್ಷ ಹಾಗೂ ಪ್ರಾಮಾಣಿಕ ನ್ಯಾಯಮೂರ್ತಿಯನ್ನು ನಾನು ಕಂಡಿಲ್ಲ ಎಂದು ಹೇಳಿದರು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಮಾತನಾಡಿ, ಬೂದಿಹಾಳ್ ಅವರು ನ್ಯಾಯಮೂರ್ತಿ ಆಗಿ ಹುದ್ದೆಗೆ ನ್ಯಾಯ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಆಗುವ ಮುನ್ನ ನ್ಯಾಯಾಧೀಶರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಕ್ರಿಮಿನಲ್ ಪ್ರಕರಣಗಳಲ್ಲಿ ಅವರಿಗೆ ಹೆಚ್ಚಿನ ಜ್ಞಾನ ಇದೆ ಎಂದು ಹೇಳಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News