ದಿಲ್ಲಿಯಲ್ಲಿ ಅಪಾಯದ ಮಟ್ಟ ಮೀರಿದ ವಾಯುಮಾಲಿನ್ಯ

Update: 2018-09-29 04:05 GMT

ಹೊಸದಿಲ್ಲಿ, ಸೆ.29: ಮುಂಗಾರು ಮಳೆ ಮುಗಿದ ಬೆನ್ನಲ್ಲೇ ರಾಷ್ಟ್ರರಾಜಧಾನಿಯಲ್ಲಿ ವಾಯುಮಾಲಿನ್ಯ ಅಪಾಯದ ಮಟ್ಟ ಮೀರಿದ್ದು, ಮುಂದಿನ ದಿನಗಳಲ್ಲಿ ನವರಾತ್ರಿ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾಲಿನ್ಯ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಎದುರಾಗಿದೆ.

ಶುಕ್ರವಾರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸುರಕ್ಷತೆಯ ಮಟ್ಟದಿಂದ ಕೆಳಕ್ಕೆ ಕುಸಿದಿದ್ದು, ವಾತಾವರಣದಲ್ಲಿ ಮಾಲಿನ್ಯಕಾರಕ ಕಣಗಳ ಸಂಖ್ಯೆ ಅಧಿಕವಾಗಿದೆ. ಮನುಷ್ಯರ ಕೂದಲಿನ ವ್ಯಾಸದ ಐದನೇ ಒಂದರಷ್ಟು ಸೂಕ್ಷ್ಮವಾದ ಪಿಎಂ 10 ಧೂಳಿನ ಕಣಗಳು ವ್ಯಾಪಕವಾಗಿ ಕಂಡುಬಂದಿದ್ದು, ಗುರುವಾರ ಮಧ್ಯಾಹ್ನದ ವೇಳೆಗೆ ಗಾಳಿಯಲ್ಲಿದ್ದ ಪಿಎಂ10 ಕಣ ಪ್ರಮಾಣ ಘನ ಮೀಟರ್‌ಗೆ 35 ಯುಜಿ ದಾಖಲಾಗಿತ್ತು. ಶುಕ್ರವಾರ ರಾತ್ರಿ 8ರ ಸುಮಾರಿಗೆ ಇದು 222 ಯುಜಿಗೆ ಹೆಚ್ಚಿದ್ದು, ಸುರಕ್ಷತೆ ಮಟ್ಟ ಘನ ಮೀಟರ್‌ಗೆ 100 ಯುಜಿ.

ದಿಲ್ಲಿಯಲ್ಲಿ ಸಾಮಾನ್ಯವಾಗಿ ಮಳೆಗಾಲದಲ್ಲಿ ವಾಯು ಗುಣಮಟ್ಟ ಅತ್ಯುತ್ತಮವಾಗಿರುತ್ತದೆ. ಮಳೆಯಿಂದಾಗಿ ಧೂಳಿನ ಕಣಗಳು ಗಾಳಿಯಲ್ಲಿ ಸೇರುವುದು ಕಡಿಮೆಯಾಗುತ್ತದೆ ಹಾಗೂ ಪ್ರಬಲ ಗಾಳಿ, ಧೂಳಿನ ಕಣ ಶೇಖರಣೆಗೊಳ್ಳುವುದನ್ನು ತಡೆಯುತ್ತದೆ. ಕಳೆದ 48 ಗಂಟೆಗಳಲ್ಲಿ ಗಾಳಿಯ ವೇಗ ಬದಲಾಗಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

"ಮಳೆಗಾಲದಿಂದ ಚಳಿಗಾಲಕ್ಕೆ ಹವಾಮಾನ ಬದಲಾವಣೆಯಾಗುವ ಸಂದರ್ಭದಲ್ಲಿ ಪ್ರತೀ ವರ್ಷ ಇದು ಸಂಭವಿಸುತ್ತದೆ. ಗಾಳಿ ಮಂದವಾಗಿ, ತೇವಾಂಶ ಕಡಿಮೆಯಾಗುತ್ತದೆ. ಮೇಲ್ಮಟ್ಟದ ಸಡಿಲ ಮಣ್ಣು ಗಾಳಿಯಲ್ಲಿ ಸೇರುತ್ತದೆ. ಇದರ ಪರಿಣಾಮ ಮಾಲಿನ್ಯ ಹೆಚ್ಚುತ್ತದೆ" ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ ಪ್ರಯೋಗಾಲಯದ ಮಾಜಿ ಮುಖ್ಯಸ್ಥ ಡಿ.ಸಹಾ ಹೇಳಿದ್ದಾರೆ.

ಶುಕ್ರವಾರ ಸಂಜೆ ವೇಳೆಗೆ ದಿಲ್ಲಿಯಲ್ಲಿ ಗಾಳಿಯ ವೇಗ ಪ್ರತೀ ಗಂಟೆಗೆ ಬಹುತೇಕ ಶೂನ್ಯ ಕಿಲೋಮೀಟರ್‌ಗೆ ಕುಸಿದಿದ್ದು, ಈ ಮಂದ ಗಾಳಿಯಿಂದಾಗಿ ಸಮಸ್ಯೆ ಸೃಷ್ಟಿಯಾಗಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಕನಿಷ್ಠ ಸಾಪೇಕ್ಷ ತೇವಾಂಶ ಶೇಕಡ 53ಕ್ಕೆ ಕುಸಿದಿದೆ. ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 198ಕ್ಕೆ ಕುಸಿದಿದೆ. ಮುಂಗಾರು ಮಳೆ ಸಂದರ್ಭದಲ್ಲಿ ದಿಲ್ಲಿಯ ವಾಯುಗುಣಮಟ್ಟ ಸೂಚ್ಯಂಕ 52 ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News