ಉತ್ತರ ಪ್ರದೇಶ: ಸೇಲ್ಸ್ ಮ್ಯಾನೇಜರ್ ಗೆ ಗುಂಡಿಕ್ಕಿದ ಪೊಲೀಸ್ ಸಿಬ್ಬಂದಿ

Update: 2018-09-29 17:51 GMT

ಲಕ್ನೋ, ಸೆ.29: ಮೊಬೈಲ್ ಕಂಪೆನಿಯೊಂದರ ಸೇಲ್ಸ್ ಮ್ಯಾನೇಜರ್ ಒಬ್ಬರನ್ನು ಪೊಲೀಸ್ ಕಾನ್ ಸ್ಟೇಬಲ್ ಒಬ್ಬ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಮಕ್ದಂಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾರಿನಲ್ಲಿ ತನ್ನ ಸ್ನೇಹಿತೆ ಸನಾ ಖಾನ್ ಜೊತೆ ಸಂತ್ರಸ್ತ ವಿವೇಕ್ ತಿವಾರಿ ಪ್ರಯಾಣಿಸುತ್ತಿದ್ದರು. ಕಾರನ್ನು ಪೊಲೀಸ್ ಸಿಬ್ಬಂದಿಯಾದ ಪ್ರಶಾಂತ್ ಕುಮಾರ್ ಮತ್ತು ಸಂದೀಪ್ ಕುಮಾರ್ ತಡೆದಿದ್ದರು ಎನ್ನಲಾಗಿದೆ. “ಕಾರನ್ನು ನಿಲ್ಲಿಸುವಂತೆ ಪೊಲೀಸರು ಹೇಳಿದರು. ಆದರೆ ಕಾರು ಮುಂದಕ್ಕೆ ಚಲಿಸಿ ಲ್ಯಾಂಪ್ ಪೋಸ್ಟ್ ಗೆ ಢಿಕ್ಕಿ ಹೊಡೆದಿತ್ತು. ಕೂಡಲೇ ಪೊಲೀಸ್ ಸಿಬ್ಬಂದಿ ಪ್ರಶಾಂತ್ ಗುಂಡು ಹೊಡೆದಿದ್ದರು” ಎಂದು ಸನಾ ಖಾನ್ ಆರೋಪಿಸಿದ್ದಾರೆ.

ಕೂಡಲೇ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ತಿವಾರಿಯವರನ್ನು ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಅದಾಗಲೇ ಮೃತಪಟ್ಟಿದ್ದರು. ಸನಾ ಖಾನ್ ದೂರಿನ ಆಧಾರದಲ್ಲಿ ಕಾನ್ ಸ್ಟೇಬಲ್ ಪ್ರಶಾಂತ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉ.ಪ್ರದೇಶ ಸಿಎಂ ಆದಿತ್ಯನಾಥ್, ಈ ಘಟನೆ ಎನ್ ಕೌಂಟರ್ ಅಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು. ಅಗತ್ಯಬಿದ್ದರೆ ಸಿಬಿಐ ತನಿಖೆ ನಡೆಸಲಾಗುವುದು” ಎಂದು ಹೇಳಿದ್ದಾರೆ.

ತಿವಾರಿಯ ಎಡಕಿವಿಯ ಬಳಿಗೆ ಗುಂಡೇಟು ತಗುಲಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ತಿವಾರಿಗೆ ಪತ್ನಿ ಹಾಗೂ 12 ಮತ್ತು 7 ವರ್ಷದ ಇಬ್ಬರು ಪುತ್ರಿಯರಿದ್ದಾರೆ. ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಆನಂದ್ ಕುಮಾರ್, ಇದು ಅವಮಾನಕಾರಿ ಘಟನೆಯಾಗಿದೆ. ಗುಂಡು ಹಾರಿಸಿದ ಮತ್ತು ಆ ಸಂದರ್ಭ ಜೊತೆಗಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದೆ . ಘಟನೆಯ ತನಿಖೆ ನಡೆಸಲು ವಿಶೇಷ ತಂಡವೊಂದನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಎಸ್‌ಎಸ್‌ಐಟಿ ನಡೆಸಲಿದೆ. ಅಗತ್ಯಬಿದ್ದರೆ ಸಿಬಿಐಗೆ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಕಾನ್‌ಸ್ಟೇಬಲ್‌ಗಳಾದ ಪ್ರಶಾಂತ್ ಚೌಧರಿ ಹಾಗೂ ಸಂದೀಪ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ರಸ್ತೆ ಬದಿ ಕಾರು ಅನುಮಾನಾಸ್ಪದ ರೀತಿಯಲ್ಲಿ ಕಂಡುಬಂದಿತ್ತು. ಕಾರಿ ಬಳಿ ಹೋದಾಗ ಚಾಲಕ ಏಕಾಏಕಿ ಕಾರನ್ನು ಸ್ಟಾರ್ಟ್ ಮಾಡಿ ತನ್ನ ಮೇಲೆಯೇ ಚಲಾಯಿಸಲು ಮುಂದಾದ.ಆಗ ತಾನು ಸ್ವರಕ್ಷಣೆಗಾಗಿ ಗುಂಡು ಹಾರಿಸಿದ್ದೇನೆ. ಆದರೂ ಆತ ಕಾರನ್ನು ಚಲಾಯಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಕಾನ್‌ಸ್ಟೇಬಲ್ ಪ್ರಶಾಂತ್ ಚೌಧರಿ ತಿಳಿಸಿದ್ದಾರೆ.

 ಕಾನ್‌ಸ್ಟೇಬಲ್ ತನ್ನ ಮಿತಿ ಮೀರಿ ವರ್ತಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇಬ್ಬರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು ಎಂದು ಉತ್ತರಪ್ರದೇಶ ಪೊಲೀಸ್ ಮುಖ್ಯಸ್ಥ ಒ.ಪಿ.ಸಿಂಗ್ ತಿಳಿಸಿದ್ದಾರೆ.

ನನ್ನ ಪತಿ ಭಯೋತ್ಪಾದಕನೇ : ತಿವಾರಿ ಪತ್ನಿಯ ಪ್ರಶ್ನೆ

ಪೊಲೀಸರು ನನ್ನ ಪತಿಯನ್ನು ಯಾಕೆ ಕೊಂದರು. ಅವರೇನು ಭಯೋತ್ಪಾದಕರೇ ಎಂದು ವಿವೇಕ್ ತಿವಾರಿಯ ಪತ್ನಿ ಕಲ್ಪನಾ ಪ್ರಶ್ನಿಸಿದ್ದಾರೆ. ತನ್ನ ಪತಿಯ ಸಾವಿಗೆ ಕಾರಣವೇನು ಎಂದು ವಿವರಿಸುವಂತೆ ಅವರು ಮುಖ್ಯಮಂತ್ರಿ ಆದಿತ್ಯನಾಥ್‌ರನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News