ಕತ್ತೆಗಳಿಗೆ ಪಾದ ಪೂಜೆ ಮಾಡುವ ಮೂಲಕ ವಾಟಾಳ್ ಜನ್ಮದಿನಾಚರಣೆ

Update: 2018-09-29 13:18 GMT

ಬೆಂಗಳೂರು, ಸೆ.28: ಕನ್ನಡ ಚಳವಳಿ ಹೋರಾಟಗಾರ ಹಾಗೂ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ಹುಟ್ಟುಹಬ್ಬವನ್ನು ಕತ್ತೆಗಳಿಗೆ ಪಾದಪೂಜೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಿಕೊಂಡರು.

ಶನಿವಾರ ನಗರದ ಪುರಭವನದ ಎದುರು ಜಮಾಯಿಸಿದ್ದ ವಾಟಾಳ್ ನಾಗರಾಜ್ ಹಾಗೂ ಅವರ ಅಭಿಮಾನಿಗಳು ಕಳೆದ ಐದು ದಶಕಗಳ ಹಿಂದೆ ಪೊಲೀಸರು ಬೂಟುಗಳಿಂದ ಥಳಿಸಿದ್ದನ್ನೇ ನೆನಪಾಗಿಸಿಕೊಂಡು, ಅದೇ ದಿನವನ್ನೇ ಹುಟ್ಟುಹಬ್ಬದ ದಿನವನ್ನಾಗಿ ಆಚರಿಸಿಕೊಳ್ಳುತ್ತಾ ಬಂದಿದಾರೆ.

ವಾಟಾಳ್ ತಮ್ಮ ಹುಟ್ಟುಹಬ್ಬವನ್ನು ಕತ್ತೆಗಳಿಗೆ ಪಾದಪೂಜೆ ಮಾಡುವ ಮೂಲಕ ಇಂದು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು, ಗೆಳೆಯರು, ಕನ್ನಡಪರ ಹೋರಾಟಗಾರರು ಭಾಗವಹಿಸಿದ್ದರು. ಕರ್ನಾಟಕದ ವಿವಿಧ ಜಾನಪದ ಕಲಾತಂಡಗಳು ಪ್ರದರ್ಶನ ನಡೆಸಿದರು.

ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ವಾಟಾಳ್ ನಾಗರಾಜ್ ಕನ್ನಡ ನಾಡಿನ ಹೆಮ್ಮೆಯ ಕನ್ನಡ ಹೋರಾಟಗಾರ. ನಾಡಿನ ಎಲ್ಲ ವಿಚಾರಗಳಲ್ಲಿಯೂ ದಣಿವರಿಯದೇ ಹೋರಾಟ ಮಾಡುತ್ತಿದ್ದಾರೆ. ಇಂತಹ ನಾಯಕರ ಅಗತ್ಯವಿದೆ ಎಂದು ಹೇಳಿದರು.

ಮಾಜಿ ಸಚಿವ ರಾಮಚಂದ್ರಗೌಡ ಮಾತನಾಡಿ, ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಬೇಕು. ನಾಡಿನ ಇತಿಹಾಸದಲ್ಲಿ ವಾಟಾಳ್ ಅವರ ಹೆಸರು ಸುವರ್ಣಾಕ್ಷರದಲ್ಲಿ ಬರೆದಿಡುವಂತಹುದು ಎಂದು ನುಡಿದರು.

ನಾಡಿನಿಂದ ಗಡಿನಾಡಿನವರೆಗೂ ಕನ್ನಡತನವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುತ್ತಿದ್ದಾರೆ. ವಾಟಾಳ್ ನೇತೃತ್ವ ಕನ್ನಡ ಚಳವಳಿಗೆ ಇಲ್ಲದಿದ್ದರೆ ಇಂದಿನ ಕನ್ನಡ ಸಿನಿಮಾಗಳು ಉಳಿಯುತ್ತಿರಲಿಲ್ಲ ಎಂದು ಅವರು ಬಣ್ಣಿಸಿದರು.

ವಾಟಾಳ್ ನಾಗರಾಜ್ ಮಾತನಾಡಿ, ಕೊನೆ ಉಸಿರಿರುವವರೆಗೂ ಕನ್ನಡಕ್ಕಾಗಿ ಹೋರಾಟ ಮಾಡುತ್ತೇನೆ. ಕಾವೇರಿ, ಮಹಾದಾಯಿ ಹೋರಾಟ, ಗಡಿನಾಡು ಕನ್ನಡಿಗರಿಗೆ ನ್ಯಾಯ, ಉತ್ತರ ಕರ್ನಾಟಕಕ್ಕಾದ ಅನ್ಯಾಯದ ವಿರುದ್ಧ ಧ್ವನಿ, ಹೈದರಾಬಾದ್-ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡುವುದು, ಬೆಂಗಳೂರಿನಲ್ಲಿ ಪರಭಾಷಿಗರ ಹಾವಳಿ ತಡೆಯುವುದು ಸೇರಿದಂತೆ ಎಲ್ಲ ಹೋರಾಟಗಳನ್ನು ನಿರಂತರವಾಗಿ ಮಾಡುತ್ತೇನೆ ಎಂದು ಹೇಳಿದರು.

ಆಡಳಿತ ವ್ಯವಸ್ಥೆಯಲ್ಲಿ ಮೇಲ್ಮನೆಗೆ ಸಿನಿಮಾ ಕಲಾವಿದರು, ಸಾಹಿತಿಗಳನ್ನು ಅಷ್ಟೇ ನೇಮಕ ಮಾಡಲಾಗುತ್ತಿದೆ. ಆದರೆ, ಕನ್ನಡ ಚಳವಳಿಗಾರರನ್ನು ಸರಕಾರಗಳು ಪರಿಗಣಿಸುತ್ತಿಲ್ಲ. ಹೀಗಾಗಿ, ನಾಡಿನ ಯಾವುದೇ ಭಾಗದಲ್ಲಾಗಲಿ, ಯಾವುದೇ ಕ್ಷೇತ್ರದಲ್ಲಾಗಲಿ ಸೇವೆ ಸಲ್ಲಿಸಿರುವ ಹೋರಾಟಗಾರರನ್ನು ಸರಕಾರ ಪರಿಷತ್ತಿಗೆ ನೇಮಕ ಮಾಡಲು ಉದಾರತೆಯನ್ನು ತೋರಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಕನ್ನಡಪರ ಹೋರಾಟಗಾರ ಟಿ.ಪಿ.ಪ್ರಸನ್ನಕುಮಾರ್, ಕನ್ನಡ ಸೇನೆಯ ಕೆ.ಆರ್.ಕುಮಾರ್, ಶಿವರಾಮೇಗೌಡ, ಕರವೇಯ ಪ್ರವೀಣ್ ಕುಮಾರ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News