ಮೆಡಿಕಲ್ ಸೀಟು ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ಐವರ ಸೆರೆ

Update: 2018-09-29 15:02 GMT

ಬೆಂಗಳೂರು, ಸೆ.29: ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ವೈದ್ಯಕೀಯ ಶಿಕ್ಷಣ ಸೀಟು ಕೊಡಿಸುವುದಾಗಿ ಸುಮಾರು 200 ವಿದ್ಯಾರ್ಥಿಗಳಿಂದ 25 ಕೋಟಿಗಿಂತಲೂ ಅಧಿಕ ಮೊತ್ತದ ಹಣ ಪಡೆದು ವಂಚಿಸಿದ್ದ ಆರೋಪದಡಿ ಆರು ಜನರನ್ನು ಇಲ್ಲಿನ ಮಡಿವಾಳ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಬಾಪೂಜಿನಗರ 10ನೆ ಕ್ರಾಸ್, 1ನೇ ಮೈನ್ ನಿವಾಸಿ ಸುಮನ್ (25), ಆಂಧ್ರಪ್ರದೇಶದ ಕರ್ನೂಲ್ ರಸ್ತೆಯ ವೆಂಕಟೇಶ್ವರ್ ನಗರ ನಿವಾಸಿಗಳಾದ ದಿಲೀಪ್ (28), ಏಡುಕೊಂಡಲು (51), ಹಳೆಗುಡ್ಡದ ಹಳ್ಳಿ ಆಯಿಷಾ ಬಾನು (25), ಸುದ್ದಗುಂಟೆ ಪಾಳ್ಯ ತಾವರೆಕೆರೆ ಮುಖ್ಯ ರಸ್ತೆ 4ನೆ ಕ್ರಾಸ್ ಕೃಷ್ಣಮೂರ್ತಿ ಲೇಔಟ್ ನಿವಾಸಿ ರಂಗ (30) ಹಾಗೂ ಸುದ್ದಗುಂಟೆ ಪಾಳ್ಯದ 1ನೆ ಕ್ರಾಸ್ 1ನೆ ಮುಖ್ಯ ರಸ್ತೆ ನಿವಾಸಿ ಬಾಷಾ (28) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ: 2011ರಲ್ಲಿ ಅಮೆರಿಕನ್ ಸರ್ವೀಸ್ ಸೆಂಟರ್ ಎಂಬ ಕನ್ಸಲ್‌ಟೆನ್ಸಿ ಕಂಪೆನಿಯೊಂದನ್ನು ಆಂಧ್ರಪ್ರದೇಶ ಮೂಲದ ಗೋಪಾಲ್ ವೆಂಕಟರಾವ್ ಎಂಬಾತ ಬೆಂಗಳೂರು, ಚೆನ್ನೈ, ಹೈದರಾಬಾದ್, ತಿರುಪತಿ ಹಾಗೂ ಕೊಯಮತ್ತೂರುಗಳಲ್ಲಿ ಪ್ರಾರಂಭಿಸಿದ್ದ.

ಈ ಕಂಪೆನಿಗಳ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪದವಿ ಪ್ರವೇಶಕ್ಕೆ ಸೀಟು ಕೊಡಿ ಕೊಡಿಸುವುದಾಗಿ ವಿದೇಶಕ್ಕೆ ಕರೆದುಕೊಂಡು ಹೋಗಿ ಲಕ್ಷಾಂತರ ರೂ. ಹಣ ಪಡೆದು ಸಂಬಂಧಿಸಿದ ವಿಶ್ವವಿದ್ಯಾಲಯಗಳಿಗೆ ಹಣ ಕಟ್ಟದೆ, ವಂಚನೆ ನಡೆಸಿದ್ದ ಎನ್ನಲಾಗಿದೆ.
ಈ ಸಂಬಂಧ ಚೆನ್ನೈನಲ್ಲಿ ಪ್ರಕರಣ ದಾಖಲಾದ ನಂತರ, ಮೆಡಿಕಲ್ ಟೀಚರ್ಸ್ ರೂಟ್ಸ್ ಎಜುಕೇಷನ್ ಎಂಬ ಹೆಸರಿನ ಕನ್ಸಲ್‌ಟೆನ್ಸಿ ಕಂಪೆನಿಗಳನ್ನು ಚೆನ್ನೈ, ಹೈದರಾಬಾದ್ ಹಾಗೂ ನಗರದ ಆಡುಗೋಡಿಯಲ್ಲಿ ಪ್ರಾರಂಭಿಸಿ ಹಲವು ವಿದ್ಯಾರ್ಥಿಗಳಿಗೆ ವಂಚಿಸಿದ ಬಗ್ಗೆ ಆಡುಗೋಡಿ, ಮಡಿವಾಳ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ನಂತರ ಆರೋಪಿಗಳು, ಕನ್ಸಲ್‌ಟೆನ್ಸಿ ಕಚೇರಿಗಳನ್ನು ಮುಚ್ಚಿ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದರು.

ಬಳಿಕ ಆರೋಪಿಗಳು ಕನ್ಸಲ್‌ಟೆನ್ಸಿ ಹೆಸರುಗಳನ್ನು ಹಾಗೂ ಸ್ಥಳಗಳನ್ನು ಬದಲಿಸಿ ಡಾಕ್ಟರ್ಸ್‌ ವರ್ಲ್ಡ್ ಹಾಗೂ ಯೂ-ಕಾನ್ ಎಜುಕೇಷನ್ ಎಂಬ ಕನ್ಸಲ್ಟೆನ್ಸಿ ಕಂಪೆನಿಗಳನ್ನು ಎಚ್‌ಎಸ್‌ಆರ್ ಲೇಔಟ್ ಹಾಗೂ ಜಯನಗರಗಳಲ್ಲಿ ನಡೆಸುತ್ತಿದ್ದರು.
ಈ ಕನ್ಸಲ್ಟೆನ್ಸಿ ಕಂಪೆನಿಗಳ ಮುಖಾಂತರ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸುಮಾರು 25 ಕೋಟಿ ರೂ. ಗೂ ಹೆಚ್ಚು ಹಣ ಪಡೆದು ವಿದ್ಯಾರ್ಥಿಗಳನ್ನು ಪ್ರವಾಸಿ ರೂಪದಲ್ಲಿ ವಿದೇಶಗಳಿಗೆ ಕರೆದೊಯ್ದು ಮಾನ್ಯತೆ ಇಲ್ಲದ ಮತ್ತು ಸರಿಯಾದ ಶಿಕ್ಷಣ ವ್ಯವಸ್ಥೆ ಇಲ್ಲದ ಗಯಾನ, ಅಲೆಕ್ಸಾಂಡರ್ ಯೂನಿವರ್ಸಿಟಿ ಆಫ್ ಅಮೆರಿಕ, ತಿಯಾನ್ ಜಿನ್ ಮೆಡಿಕಲ್ ಯೂನಿವರ್ಸಿಟಿ, ಚೀನಾ ಮುಂತಾದ ದೇಶಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರತಿಯೊಬ್ಬರಿಂದ 20 ರಿಂದ 30 ಲಕ್ಷ ರೂ. ಹಣವನ್ನು ಪಡೆದು ಸಂಬಂಧಿಸಿದ ಯೂನಿವರ್ಸಿಟಿಗಳಿಗೆ ಪಾವತಿಸದೆ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಕೊಡಿಸದೆ ಮೋಸ ಮಾಡಿದ್ದರು ಎಂದು ದೂರು ದಾಖಲಾಗಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಎಸಿಪಿ ಸೋಮೇಗೌಡ, ಮಡಿವಾಳ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಎಸ್. ಬೋಳೆತ್ತಿನ ನೇತೃತ್ವದ ವಿಶೇಷ ಪೊಲೀಸ್ ತಂಡ ಖಚಿತ ಮಾಹಿತಿ ಆಧರಿಸಿ ಕನ್ಸಲ್ಟೆನ್ಸಿ ಮೇಲೆ ದಾಳಿ ನಡೆಸಿ, ಬೃಹತ್ ಜಾಲವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದೆ. ಅವರಿಂದ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಪ್ರಕರಣ ಸಂಬಂಧ ಪ್ರಮುಖ ಆರೋಪಿಗಳಾದ ಗೋಪಿ ವೆಂಕಟರಾವ್, ಆತನ ಪತ್ನಿ ನಿಖಿಲಾ ಹಾಗೂ ಝಮೀರ್ ಎಂಬುವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗೇಗೌಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News