ವೀರ ಮಹಾದೇವಿ ಚಿತ್ರದಲ್ಲಿ ಸನ್ನಿಲಿಯೋನ್ ನಟನೆಗೆ ವಿರೋಧ
ಬೆಂಗಳೂರು, ಸೆ.29: ದಕ್ಷಿಣ ಭಾರತವನ್ನು ಆಳಿದ್ದ ಹಾಗೂ ಅಪಾರವಾದ ಕೊಡುಗೆ ನೀಡಿದ್ದ ಮಹಾಸತಿಸಾತ್ವಿ ಪತ್ನಿ ವೀರ ಮಹಾದೇವಿ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಚಲನಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿ ಸನ್ನಿಲಿಯೋನ್ ನಟಿಸುತ್ತಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ವಿರೋಧ ವ್ಯಕ್ತಪಡಿಸಿದೆ.
ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಹರೀಶ್, ನಮ್ಮ ನಾಡಿನವರೇ ಆದ ರಾಷ್ಟ್ರಕೂಟ ಅಮೋಘವರ್ಷ ನೃಪತುಂಗನ ತಂದೆ ಅಶೋಕ ಸಾಮ್ರಾಟ 3 ನೆ ಗೋವಿಂದಂ ಮತ್ತು ರಾಜೇಂದ್ರ ಚೋಳನ್‌ರ ಸತಿಸಾತ್ವಿಯಾದ ಮಹಾರಾಣಿ ವೀರ ಮಹಾದೇವಿ ಹೆಸರಿನ ಐತಿಹಾಸಿಕ ಚಿತ್ರದಲ್ಲಿ ಸನ್ನಿಲಿಯೋನ್ ನಟಿಸುತ್ತಿರುವುದು ಸರಿಯಲ್ಲ ಎಂದರು.
ನೀಲಿ ಚಿತ್ರಗಳ ತಾರೆ ಎಂದು ಪ್ರಖ್ಯಾತಿ ಪಡೆದುಕೊಂಡಿರುವ ಸನ್ನಿಲಿಯೋನ್ ಮಹಾನಾರಿಯ ಹೆಸರಿನಲ್ಲಿ ಹಾಗೂ ಅವರ ಇತಿಹಾಸವನ್ನು ಪರಿಚಯಿಸುವ ಚಿತ್ರದಲ್ಲಿ ನಟನೆ ಮಾಡುವ ಮೂಲಕ ಅವರಿಗೆ ಕಳಂಕ ಉಂಟು ಮಾಡುತ್ತಿದ್ದಾರೆ. ಅವರ ಮೂಲಕ ಚಿತ್ರ ನಿರ್ಮಾಣಗೊಂಡರೆ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಇಡೀ ದಕ್ಷಿಣ ಭಾರತಕ್ಕೆ ಅಪಮಾನ ಮಾಡಿದಂತಾಗುತ್ತದೆ ಎಂದು ಹೇಳಿದರು.
ರಾಷ್ಟ್ರಕೂಟ ಅಮೋಘವರ್ಷ ನೃಪತುಂಗನ ತಂದೆ ಅಶೋಕ ಸಾಮ್ರಾಟ ಮೂರನೇ ಗೋವಿಂದಂ ಸಾಮ್ರಾಟನಾಗಿ 21 ವರ್ಷಗಳ ಕಾಲ ಆಡಳಿತ ನಡೆಸಿ ಕನ್ನಡ ನಾಡಿನ ಕೀರ್ತಿಯನ್ನು ಅರಬ್ಬಿ ಸಮುದ್ರದಿಂದ ಬಂಗಾಳದವರೆಗೆ, ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ಹರಡಿದ್ದು, ತನ್ನ ಅಧಿಪತ್ಯವನ್ನು ಸ್ಥಾಪಿಸಿದ್ದರು. ಅಂತಹ ಇತಿಹಾಸವುಳ್ಳವರ ಬಗ್ಗೆ ತಯಾರಾಗುತ್ತಿರುವ ಚಿತ್ರದಲ್ಲಿ ಸನ್ನಿಲಿಯೋನ್ ನಟನೆ ಸರಿಯಾದುದಲ್ಲ ಎಂದು ತಿಳಿಸಿದರು.
ಕೂಡಲೇ ನಿರ್ದೇಶಕರು ಚಿತ್ರದ ನಾಯಕಿಯನ್ನು ಬದಲಾವಣೆ ಮಾಡಬೇಕು. ವೀರ ಮಹಾದೇವಿಯಂತಹ ನಾಯಕಿಯರ ಕೈಯಲ್ಲಿ ಅವರ ಪಾತ್ರವನ್ನು ಮಾಡಿಸಬೇಕು. ಒಂದು ವೇಳೆ ಇವರನ್ನೇ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ. ಅಲ್ಲದೆ, ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.