ಮಲೆನಾಡ ಕೋಗಿಲೆ ದೇವಂಗಿ ಚಂದ್ರಶೇಖರ್

Update: 2018-09-30 06:09 GMT

ದೇವಂಗಿ ಚಂದ್ರಶೇಖರ್ ಅವರು ಐವತ್ತು- ಅರವತ್ತರ ದಶಕಗಳಲ್ಲಿ ನಾಡಿನ ಜನಪ್ರಿಯ ಗಾಯಕರಾಗಿ, ಸುಪ್ರಸಿದ್ಧ ಸುಗಮ ಸಂಗೀತಗಾರರಾಗಿ, ಸಾಹಿತ್ಯದ ಆರಾಧಕರಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ. ಹಿರಿಯ ತಲೆಮಾರಿನ ಸುಗಮಸಂಗೀತಗಾರರಲ್ಲಿ ಒಬ್ಬರಾಗಿದ್ದು, ಸಂಗೀತ ಪ್ರಿಯರ ಮನದಲ್ಲಿ ಚಿರಂತನವಾಗುಳಿದಿದ್ದಾರೆ. ಚಂದ್ರಶೇಖರರು ತೀರ್ಥಹಳ್ಳಿ ತಾಲೂಕಿನ ದೇವಂಗಿಯಲ್ಲಿ 7.6.1921ರಲ್ಲಿ ಜನಿಸಿದರು. ದೇವಂಗಿಯಲ್ಲಿ ಇವರದು ಪ್ರತಿಷ್ಠಿತ ರೈತ ಕುಟುಂಬವಾಗಿತ್ತು. ಇವರಿಗೆ ದೇವಂಗಿ ರಾಮಣ್ಣಗೌಡರ ಸಲಹೆ ಮತ್ತು ಮಾರ್ಗದರ್ಶನಗಳು ಚಿಕ್ಕವಯಸ್ಸಿನಿಂದಲೂ ದೊರಕಿದವು. ಶ್ರೀಮಂತ ಮನೆತನದಲ್ಲಿ ಹುಟ್ಟಿದ ಇವರ ಪ್ರಾಥಮಿಕ ವಿದ್ಯಾಭ್ಯಾಸ ದೇವಂಗಿ ಮತ್ತು ತೀರ್ಥಹಳ್ಳಿಗಳಲ್ಲಾಯಿತು. ಪ್ರೌಢಶಾಲಾ ವ್ಯಾಸಂಗವು ಮೈಸೂರಿನ ಮಹಾರಾಜ ಹೈಸ್ಕೂಲ್‌ನಲ್ಲಿ, ಇಂಟರ್‌ಮೀಡಿಯೇಟನ್ನು ಯುವರಾಜ ಕಾಲೇಜಿನಲ್ಲಿ ಮುಗಿಸಿದರು. ಶ್ರೀರಾಮಕೃಷ್ಣ ಆಶ್ರಮದಲ್ಲಿದ್ದ ಚಂದ್ರಶೇಖರರು ಮುಂದೆ ಓದಲು ಮನಸಾಗದೆ, ಪ್ರಕೃತಿಯ ಕಡೆ ಭಾವುಕತೆ ಹರಿದು ಅಲ್ಲಿಂದ ಕಾಲ್ತೆಗೆದರು. ಹಳ್ಳಿಯಲ್ಲಿ ನೆಲೆಸಿ ದೊಡ್ಡ ಜಮೀನ್ದಾರ ರಾಗಿದ್ದರೂ ವ್ಯವಸಾಯ- ವ್ಯವಹಾರಗಳ ಕಡೆ ತಲೆಕೆಡಿಸಿಕೊಳ್ಳದೆ ಸಾಹಿತ್ಯ ಸಂಗೀತಗಳ ಕಲ್ಪನಾ ಲೋಕದಲ್ಲಿ - ಸೌಂದರ್ಯ ಆರಾಧಕರಾಗಿ ಹೊರಹೊಮ್ಮಿದರು. ಪ್ರಕೃತಿಯಲ್ಲಿರುವುದೆಲ್ಲವೂ ಇವರಿಗೆ ಇಷ್ಟವಾಗುತ್ತಿತ್ತು. ಇವರು ಓದಿದ್ದು ತುಂಬಾ ಕಡಿಮೆ ಎನಿಸಿದರೂ ಇಂಗ್ಲಿಷ್ ಭಾಷೆ ಇವರ ಮೇಲೆ ಪ್ರಭಾವ ಬೀರಿತ್ತು. ಇದರಿಂದಾಗಿ ಇಂಗ್ಲಿಷ್ ಸಾಹಿತ್ಯ, ಕವನಗಳು ಇವರನ್ನು ಆಕರ್ಷಿಸಿದವು. ಆದರೆ ಈ ಇಂಗ್ಲಿಷ್ ವ್ಯಾಮೋಹದ ಜೊತೆಗೆ ಕನ್ನಡದ ಬಗ್ಗೆ ಆಸಕ್ತಿ ಮೂಡುವ ಘಟನೆಯೊಂದು ಜರುಗಿತು. ಅದೆಂದರೆ ಚಂದ್ರಶೇಖರರು ಕಾಲೇಜು ವ್ಯಾಸಂಗ ಮಾಡುವಾಗ ಮಹಾರಾಜ ಮತ್ತು ಯುವರಾಜ ಕಾಲೇಜಿನ ಕರ್ನಾಟಕ ಸಂಘಕ್ಕೆ ಸಹ ಕಾರ್ಯದರ್ಶಿಯಾಗಿದ್ದರು. ಈ ಸಂಘದ ರಜತ ಮಹೋತ್ಸವದ ಸಂದರ್ಭದಲ್ಲಿ ಸಮಾರಂಭದಲ್ಲಿದ್ದ ಸಂಸ್ಕೃತದ ಪ್ರೊಫೆಸರ್ ನಂ. ಶಿವರಾಮ ಶಾಸ್ತ್ರಿಗಳು ನಮ್ಮೂರು ಚಂದವೋ ನಿಮ್ಮ್ಮೂರು ಚಂದವೋ ಎಂಬ ಕೆ.ಎಸ್. ನರಸಿಂಹಸ್ವಾಮಿಗಳ ಕವನವನ್ನು ಹಾಡಿದಾಗ ಕನ್ನಡ ಸಾಹಿತ್ಯದ ಗೀಳನ್ನು ಬೆಳೆಸಿಕೊಂಡರು. ಅನಂತರದಲ್ಲಿ ಈ ಸಂಸ್ಕೃತ ವಿದ್ವಾಂಸರಿಂದ ಕೆ.ಎಸ್.ನ. ಅವರ ವಿಳಾಸವನ್ನು ತಿಳಿದುಕೊಂಡು ಅಠಾರಾ ಕಚೇರಿಯಲ್ಲಿ ಭೇಟಿಯಾಗಿ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿದರು. ನರಸಿಂಹಸ್ವಾಮಿಗಳೊಂದಿಗೆ ಕನ್ನಡ ಸಾಹಿತ್ಯದ ಬಗ್ಗೆ ಚರ್ಚೆ ಸಂಭಾಷಣೆಯಲ್ಲಿ ತೊಡಗಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು, ಅಲ್ಲದೆ ಕನ್ನಡ ಸಾಹಿತ್ಯಾಭ್ಯಾಸ ಮಾಡುವುದರೊಂದಿಗೆ ಹಳೆಗನ್ನಡದ ಕವಿಕಾವ್ಯ ವಿಚಾರಗಳನ್ನು ಜೀರ್ಣಿಸಿಕೊಂಡರು. ಕೆ.ಎಸ್.ನ. ಅವರಲ್ಲದೆ ಕನ್ನಡದ ಅನೇಕ ಹಿರಿಯ ಮತ್ತು ಕಿರಿಯ ಕವಿಗಳು ಹಾಗೂ ಸಾಹಿತಿಗಳೊಂದಿಗೆ ಸ್ನೇಹಸಂಬಂಧ ಬೆಳೆಸಿಕೊಂಡರು. ಕಾರಂತ, ಬೇಂದ್ರೆ, ಎ.ಆರ್. ಕೃಷ್ಣಶಾಸ್ತ್ರಿ, ಟಿ.ಎಸ್. ವೆಂಕಣ್ಣಯ್ಯ, ಬಿ.ಎಂ.ಶ್ರೀ, ಪುತಿನ, ಕುವೆಂಪು ಮುಂತಾದವರೊಂದಿಗಿನ ಇವರ ಒಡನಾಟ ಅಪೂರ್ವವಾಗಿತ್ತು. ಅದರಲ್ಲೂ ಕನ್ನಡದ ಮಹಾಕವಿ, ಶ್ರೇಷ್ಠ ಕವಿ ಮತ್ತು ಸಾಹಿತಿಯಾದಂತ ಶ್ರೀ ಕುವೆಂಪು ಅವರು ಇವರ ಬಂಧುಗಳಾಗಿದ್ದರು. ಅಷ್ಟೇ ಅಲ್ಲ, ಚಂದ್ರಶೇಖರರ ಹಿರಿಯ ಆಪ್ತರೂ, ಮಿತ್ರರೂ ಮಾರ್ಗದರ್ಶಕರೂ ಆಗಿದ್ದರು. ಮಲೆನಾಡಿಗೆ ಯಾವ ಕವಿ-ಸಾಹಿತಿಗಳು ಬಂದರೂ ಚಂದ್ರಶೇಖರರ ದೇವಂಗಿ ಮನೆಯೇ ಮುಖ್ಯ ತಾಣವಾಗಿತ್ತು. ಹೀಗಾಗಿ ಚಂದ್ರಶೇಖರರು ಕನ್ನಡದ ಬಗ್ಗೆ ಸದಭಿರುಚಿಯ ಕಾವ್ಯ ರಸಿಕರೂ, ಸಾಹಿತ್ಯ ಪ್ರೇಮಿಗಳೂ, ಸಾಹಿತ್ಯ ಪರಿಚಾರಕರೂ ಆಗಿದ್ದರು.

ಚಂದ್ರಶೇಖರ್‌ಗೆ ಗಾಯನ ಎಂದರೆ ಪಂಚಪ್ರಾಣ. ಹಾಗಾಗಿ ಚಿಕ್ಕವಯಸ್ಸಿನಿಂದಲೇ ಹಾಡಿನ ಗೀಳನ್ನು ಬೆಳೆಸಿಕೊಂಡರು. ಆದರೆ ಇವರು ಯಾವುದೇ ಸಂಗೀತ ಪರಂಪರೆಯಿಂದ ಬಂದವರಲ್ಲ. ಇವರು ತಮ್ಮ ಒಂಬತ್ತನೇ ವಯಸ್ಸಿನಿಂದಲೇ ದೇಶದ ಪ್ರಮುಖ ಆಕರ್ಷಣೆ ಆಗಿದ್ದ ದೇಶಭಕ್ತಿಗೀತೆಗಳನ್ನು ಹಾಡತೊಡಗಿದರು. ಅನಂತರ ಸಭೆ ಸಮಾರಂಭಗಳಲ್ಲಿ ಈ ದೇಶಭಕ್ತಿಗೀತೆಗಳ ಜೊತೆಗೆ ಹಿಂದಿ ಚಿತ್ರ ಗೀತೆಗಳನ್ನು ಹಾಡಿ ಸಂತೋಷಪಡುತ್ತಿದ್ದರಂತೆ. ಇವರ ಕಂಠ ಸಿರಿಯನ್ನೊಮ್ಮೆ ನೋಡಿ ಮನಸೋತ ರಾಳ್ಳಪಳ್ಳಿ ಅನಂತ ಕೃಷ್ಣಶರ್ಮರು ಸಂಗೀತ ಹೇಳಿಕೊಡುತ್ತೇನೆ ಬಾರಪ್ಪ ಎಂದು ಕೈಹಿಡಿದು ಕರೆದರಂತೆ. ತಕ್ಷಣ ಇವರು ಹೋಗಲಿಲ್ಲವಾದರೂ ಆಕಸ್ಮಿಕವಾಗಿ ಶಾಸ್ತ್ರೀಯ ಸಂಗೀತದ ಕಡೆ ಒಲವು ತೋರಿದರು. ಕೆ.ಎಸ್.ನ. ಅವರ ಮೈಸೂರು ಮಲ್ಲಿಗೆ, ಬಳೆಗಾರ ಚನ್ನಯ್ಯ, ಒಂದಿರುಳು ಕನಸಿನಲಿ, ರಾಯರು ಬಂದರು ಮಾವನ ಮನೆಗೆ, ನಿನ್ನ ಪ್ರೇಮದ ಪರಿಯ ಮುಂತಾದ ಹಾಡುಗಳನ್ನು ಸಭೆ ಸಮಾರಂಭಗಳಲ್ಲಿ ಅದ್ಭುತವಾಗಿ ಹಾಡಿ ಸೈ ಎನಿಸಿಕೊಂಡರು. ಇವರ ಕಂಠಸಿರಿಗೆ ನಾಡಿನಾದ್ಯಂತ ಅದ್ಭುತ ಸ್ವಾಗತವೂ ದೊರೆಯಿತು. ಇವರು ಕೇವಲ ಭಾವಗೀತೆ, ದೇಶ ಭಕ್ತಿಗೀತೆಗಳಷ್ಟೆ ಅಲ್ಲದೆ ಜನಪದ ಗೀತೆಗಳನ್ನು ಮೈಮರೆತು ಹಾಡಿ ಜೀವ ತುಂಬಿದರು. ಚಂದ್ರಶೇಖರರು 1944ರಿಂದ ನಾಡಿನಾದ್ಯಂತ ಕನ್ನಡ ಕವಿಗಳ ಸಾವಿರಾರು ಕವಿತೆಗಳನ್ನು ಹಾಡುತ್ತಾ ಕಾವ್ಯರಸಿಕರ ಮನವನ್ನು ತಣಿಸುತ್ತಿದ್ದರು. ಇವರ ಕಂಠಸಿರಿ ಮನೆ ಮನೆ ತಲುಪಲು ಮೈಸೂರು ಮತ್ತು ಬೆಂಗಳೂರು ಆಕಾಶವಾಣಿ ಕೇಂದ್ರಗಳು 1944 ರಿಂದ ಭಾವಗೀತೆಗಳನ್ನು ನಿರಂತರವಾಗಿ ಪ್ರಸಾರ ಮಾಡತೊಡಗಿದವು. ಅದ್ಭುತ ಶಾರೀರ, ಸುಮಧುರ ಶೈಲಿ ಕೇಳುಗರನ್ನು ಮೋಡಿ ಮಾಡಿದ್ದವು. ಆದರೆ ಸ್ವಾತಂತ್ರೋತ್ತರದಲ್ಲಿ ಸಾರ್ವಜನಿಕವಾಗಿ ಹಾಡುವುದನ್ನು ಕಡಿಮೆ ಮಾಡಿದ್ದರಿಂದ ಚಂದ್ರಶೇಖರರ ಕಂಠಸಿರಿ ಹೊಸಪೀಳಿಗೆಗೆ ಪೂರ್ಣ ಪ್ರಮಾಣದಲ್ಲಿ ಅಪರಿಚಿತವಾಯಿತಾದರೂ, ಹಿರಿಯರಲ್ಲಿ ಅದು ಗುನುಗುಡುತ್ತಲೇ ಇತ್ತು. ಅನಂತರ ಅನಾರೋಗ್ಯದ ಕಾರಣ ಹಾಡುವುದನ್ನೇ ನಿಲ್ಲಿಸಿಬಿಟ್ಟರು.

ದೇವಂಗಿ ಚಂದ್ರಶೇಖರರು ಸಾಹಿತಿಯಾಗಿಯೂ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ತೀರ್ಥಹಳ್ಳಿ ತಾಲೂಕು ದರ್ಶನ, ಹೊಸಗನ್ನಡ ಭಾವಗೀತೆಗಳಲ್ಲಿ ಜೀವನ ವಿಕಾಸ, ಜನಪದ ಗೀತೆಗಳಲ್ಲಿ ಸಂಸಾರ ಚಿತ್ರಗಳು ಎಂಬೆರಡು ವಿಮರ್ಶಾ ಕೃತಿಗಳನ್ನು ಬಣ್ಣವಾಡು ಎಂಬ ಜನಪದ ಗೀತೆಗಳ ಸಂಕಲನವನ್ನು ಹೊರತಂದಿದ್ದಾರೆ. ಇವರ ಸಂಗೀತ ಕ್ಷೇತ್ರದಲ್ಲಿನ ಪ್ರತಿಭೆ ಮತ್ತು ಸಾಧನೆಯನ್ನು ಗುರುತಿಸಿ 1982 ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಸನ್ಮಾನ ಮಾಡಿ ಗೌರವಿಸಿದೆ. ಚಂದ್ರಶೇಖರರು ವಿವಿಧ ರೀತಿಯ ಸಂಗ್ರಹಕಾರ್ಯಗಳನ್ನು ಮಾಡಿದ್ದಾರೆ. ಅನೇಕ ಮೌಲಿಕ ಕೃತಿ ಸಂಗ್ರಹಗಳ ಚಿಕ್ಕ ಗ್ರಂಥಾಲಯ; ಬೇಂದ್ರೆ, ಪು.ತಿ.ನ., ಕುವೆಂಪು, ಕಾರಂತ ಮುಂತಾದ ಸಾಹಿತಿಗಳ ಛಾಯಾಚಿತ್ರಗಳು, ವೆಂಕಟಪ್ಪ ಮುಂತಾದ ಚಿತ್ರಕಲಾವಿದರ ವರ್ಣಚಿತ್ರಗಳು; ಅಪೂರ್ವವಾದ ಕೆಲವು ವಸ್ತುಗಳು ಇವರ ಮನೆಯಲ್ಲಿ ಕಾಣಸಿಗುತ್ತವೆ.

1947 ರಲ್ಲಿ ದೇವಂಗಿ ಮಾನಪ್ಪನವರ ನೇತೃತ್ವದಲ್ಲಿ ತೀರ್ಥಹಳ್ಳಿಯಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿ ಸೆರೆಯಾಳಾಗಿ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು. ತದನಂತರ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು; ದೇವಂಗಿ ಜನರ ಪ್ರೀತಿಗೆ ಕಟ್ಟುಬಿದ್ದು ಎರಡು ಬಾರಿ ಪಂಚಾಯತ್ ಅಧ್ಯಕ್ಷರೂ ಆಗಿದ್ದರು. ಇವರು ಕಾಂಗ್ರೆಸ್ಸಿನಲ್ಲಿ ನಿಷ್ಠಾವಂತ ರಾಜಕಾರಣಿಯಾಗಿದ್ದರು. ಮೈಸೂರಿನಲ್ಲಿ ಗಾಂಧೀಜಿಯವರನ್ನು, ದಿಲ್ಲಿಯಲ್ಲಿ ನೆಹರೂ ಅವರನ್ನು ಕಂಡು ಸಂತೋಷಗೊಂಡಿದ್ದರು. ಆದರೆ ಇತ್ತೀಚಿನ ರಾಜಕೀಯ ಅವರಿಗೆ ಅಸಹ್ಯ ಎನಿಸಿ ರಾಜಕೀಯವನ್ನು ತೊರೆದರು.

ಕುವೆಂಪು ಅವರ ಗಾಢ ಪ್ರಭಾವ ದೇವಂಗಿ ಚಂದ್ರಶೇಖರರ ವ್ಯಕ್ತಿತ್ವದಲ್ಲಿ ಅಧ್ಯಾತ್ಮವನ್ನು ಮೈಗೂಡಿಸಿಕೊಳ್ಳುವಂತೆ ಮಾಡಿತ್ತು. ಅಲ್ಲದೆ ವೈಜ್ಞಾನಿಕ ಮನೋದೃಷ್ಟಿ, ವೈಚಾರಿಕತೆ, ವಿಶ್ವಮಾನವ ಪ್ರಜ್ಞೆ ಇವೆಲ್ಲವನ್ನೂ ಅರಿತಿದ್ದರು. ಭಾರತೀಯ ತತ್ವಜ್ಞಾನಿಗಳಾದ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಅರವಿಂದರ ಜೀವನ ತತ್ವಗಳಿಗೂ ಮಾರುಹೋಗಿದ್ದರು. ಹೀಗೆ ದೇವಂಗಿ ಚಂದ್ರಶೇಖರರು ಮಲೆನಾಡಿನ ರೈತ ಕುಟುಂಬದಲ್ಲಿ ಬೆಳೆದು ಕುಸುಮವಾಗಿ ಅರಳಿ 1999 ಜೂನ್ 6 ರಂದು ಹೃದ್ರೋಗಕ್ಕೆ ತುತ್ತಾಗಿ ಕೊನೆಯುಸಿರೆಳೆದರು. ಮಲೆನಾಡಿನ ಮೂಲೆಯಲ್ಲಿದ್ದುಕೊಂದೇ ಜೀವನದಲ್ಲಿ ಅಭೂತಪೂರ್ವ ಸಾಧನೆ ಮಾಡಿ ನಾಡಿನಾದ್ಯಂತ ಪ್ರಸಿದ್ಧಿಯಾಗಿದ್ದರು. ಇವರು ಯಾವುದೇ ರೀತಿಯ ಪ್ರತಿಫಲಾಪೇಕ್ಷೆಯನ್ನು ಬಯಸದೆ; ಕೀರ್ತಿಗಾಗಿ ಹಂಬಲಿಸದೆ; ಸಂಗೀತಗಾರರಾಗಿ, ಗಾಯಕರಾಗಿ, ಸಾಹಿತಿಯಾಗಿ, ರಾಜಕೀಯ ನಿಷ್ಠಾವಂತರಾಗಿ, ಜ್ಞಾನದಾಹಿಯಾಗಿ, ಹೃದಯವಂತರಾಗಿ, ಸಜ್ಜನರಾಗಿ ಯಶಸ್ವಿ ಬಾಳ್ವೆ ನಡೆಸಿ ಎಲೆಮರೆಕಾಯಿಯಾಗಿದ್ದಾರೆ.

Writer - ಕಣಗಾಲ್ ವಿಶ್ವನಾಥ್

contributor

Editor - ಕಣಗಾಲ್ ವಿಶ್ವನಾಥ್

contributor

Similar News