ಅಯೋಧ್ಯೆ ವಿವಾದವನ್ನು ಬಿಜೆಪಿ ರಾಜಕೀಯ ದಾಳವನ್ನಾಗಿಸಿಕೊಂಡಿದೆ: ಎಚ್.ಎಸ್.ದೊರೆಸ್ವಾಮಿ
ಬೆಂಗಳೂರು, ಸೆ.30: ಅಯೋಧ್ಯೆ ವಿವಾದವನ್ನು ಬಿಜೆಪಿಯವರು ರಾಜಕೀಯ ದಾಳವನ್ನಾಗಿಸಿಕೊಂಡಿದ್ದಾರೆ. ಅವರಿಗೆ ಜನರ ಭಾವನೆಗಳ ಮೇಲೆ ಕಾಳಜಿ ಇದ್ದಿದ್ದರೆ ಅಯೋಧ್ಯೆ ಅಭಿವೃದ್ಧಿ ಮಾಡುತ್ತಿದ್ದರು. ರಾಮಮಂದಿರ ವಿವಾದದಿಂದ ಹೆಸರು ಗಳಿಸಿತೇ ಹೊರತು ಆ ನಗರ ಅಭಿವೃದ್ಧಿಯಾಗಲಿಲ್ಲ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಎಂ.ಜಿ.ರಸ್ತೆಯ ಮೆಟ್ರೋ ಕೇಂದ್ರ ಬಳಿ ಅಯೋಧ್ಯೆಯ ಈಗಿನ ಪರಿಸ್ಥಿತಿ ಕುರಿತು ಛಾಯಾಗ್ರಾಹಕ ಸುಧೀರ್ ಶೆಟ್ಟಿ ಅವರು ಆಯೋಜಿಸಿದ್ದ ಚಿತ್ರಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಅವರಿಗೆ ರಾಮ ಬೇಕಾಗಿಲ್ಲ. ಗಲಾಟೆಯಾಗೋದು ಅಷ್ಟೆ ಬೇಕಾಗಿದೆ. ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿ ದೊಡ್ಡ ತಪ್ಪು ಮಾಡಿದರು ಎಂದು ವಿಷಾದಿಸಿದರು.
ಅಯೋಧ್ಯೆ ವಿವಾದಕ್ಕೊಳಗಾಗಿದ್ದರಿಂದ ಅಭಿವೃದ್ಧಿಯಿಂದ ದೂರ ಉಳಿದಿದೆ. ಅಂದಿನ ಜನರು ಸೌಹಾರ್ದತೆಯಿಂದ ಒಟ್ಟಿಗೆ ಇದ್ದರೂ ಹೊರಗಿನವರು ಅಲ್ಲಿನ ಪರಿಸ್ಥಿತಿಯನ್ನು ಹದಗೆಡಿಸಿದ್ದಾರೆ. ಹೀಗಾಗಿ ಅಯೋಧ್ಯೆ ನಗರ ವಿವಾದ ಸ್ಥಳವಾಗಿ ಕಾಣಿಸುತ್ತದೆ. ಬಿಜೆಪಿ ಮತ್ತು ಆರೆಸ್ಸೆಸ್ ರಾಮಮಂದಿರ ಹೆಸರಿನಲ್ಲಿ ವಿವಾದ ಉಂಟು ಮಾಡಿದೆ ಹೊರತು ಅಭಿವೃದ್ದಿಪಡಿಸಲು ಮುಂದಾಗಲಿಲ್ಲ. ಈಗಲೂ ರಾಜಕೀಯ ಲಾಭ ಪಡೆಯಲು ಯತ್ನಿಸಲಾಗುತ್ತಿದೆಯೇ ಹೊರತು ಅಭಿವೃದ್ದಿಗೆ ಗಮನಹರಿಸುತ್ತಿಲ್ಲ ಎಂದು ದೂರಿದರು.
ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆ ಮಾತನಾಡಿ, ಅಯೋಧ್ಯೆಯ ಜನರಲ್ಲಿ ವೈಷಮ್ಯವಿಲ್ಲ. ಜನರು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸ್ಥಳೀಯರಿಗೆ ಬಿಟ್ಟುಕೊಡುವುದು ಒಳ್ಳೆಯದು ಎಂದ ಅವರು, ಇತ್ತೀಚೆಗೆ ಅಯೋಧ್ಯೆ ವಿವಾದ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಆದರೆ, ಅದರಿಂದ ಸಮಸ್ಯೆ ಪೂರ್ಣವಾಗಿ ಬಗೆಹರಿಯುವುದಿಲ್ಲ ಎಂದು ಹೇಳಿದರು.
ಸುಪ್ರಿಂಕೋರ್ಟ್ ತೀರ್ಪಿನ ನಂತರ ಜನರಲ್ಲಿ ಸೌರ್ಹಾದತೆ ಉಳಿಯುತ್ತದೆ ಎನ್ನುವುದು ಅನುಮಾನ. ಹೀಗಾಗಿ, ಸ್ಥಳೀಯರು ಸಮಸ್ಯೆಯನ್ನು ಒಟ್ಟಿಗೆ ಕುಳಿತು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕಿದೆ. ಅಯೋಧ್ಯೆ ವಿಚಾರದಲ್ಲಿ ಹೊರಗಿನವರ ಹಸ್ತಕ್ಷೇಪ ಹೆಚ್ಚಾಗಿದೆ. ರಾಜಕೀಯ ಹಿತಾಸಕ್ತಿಯಿಂದಲೇ ಅದು ದೊಡ್ಡ ಮಟ್ಟದ ವಿವಾದವಾಗಿ ಬೆಳೆದಿದೆ. ಕೇವಲ ಸುಪ್ರೀಂ ತೀರ್ಪಿನ ಮೂಲಕವೇ ಎಲ್ಲವನ್ನು ಬಗೆಹರಿಸಲು ಸಾಧ್ಯವೇ ಇಲ್ಲವೆಂದು ಮತ್ತೊಮ್ಮೆ ಒತ್ತಿ ಹೇಳಿದರು.
ಛಾಯಗ್ರಾಹಕ ಸುಧೀರ್ ಶೆಟ್ಟಿ ಕ್ಯಾಮೆರಾ ಕಣ್ಣಲ್ಲಿ ರಾಮಜನ್ಮ ಭೂಮಿಯ ಸತ್ಯ ಪ್ರದರ್ಶನವಾಗಿದ್ದು, ಅಯೋಧ್ಯ ಕುರಿತಾದ ಸ್ಫೋಟಕ ಮಾಹಿತಿಗಳು ಛಾಯಚಿತ್ರಗಳ ಮೂಲಕ ಹೊರ ಬಂದಿವೆ. ಛಾಯಚಿತ್ರ ಪ್ರದರ್ಶನದಲ್ಲಿ ರಾಮಜನ್ಮ ಭೂಮಿಯ ಸ್ಥಿತಿ-ಗತಿಗಳ ಛಾಯಚಿತ್ರ ಹಾಗೂ ವಿಡಿಯೋವನ್ನು ಅನಾವರಣಗೊಳಿಸಿದ್ದಾರೆ. ಅಯೋಧ್ಯಾ ನಗರಿಯಲ್ಲಿರುವ ಸ್ಥಳೀಯರಿಗೆ ಈ ವಿವಾದ ಬೇಕಾಗಿಲ್ಲ. ವಿವಾದದ ದಳ್ಳುರಿಯಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿದೆ. ಅಲ್ಲಿನ ಮುಸ್ಲಿಮರು ಹಾಗೂ ಹಿಂದೂಗಳಿಗೆ ವಿವಾದವನ್ನು ಬಗೆಹರಿಸುವ ಆಸೆಯಿದೆ. ಆದರೆ ರಾಜಕೀಯ ನಾಯಕರಿಗೆ ವಿವಾದ ಜೀವಂತವಾಗಿದ್ದರೆ ಒಳ್ಳೆಯದು' ಎನ್ನುವ ಭಾವನೆಯನ್ನು ಛಾಯಚಿತ್ರದ ಮೂಲಕ ಬಿಚ್ಚಿಟ್ಟಿದ್ದಾರೆ.