ಅನೈತಿಕ ಸಂಬಂಧ ಕುರಿತ ಸುಪ್ರೀಂ ಹೇಳಿಕೆಯಿಂದ ಕೌಟುಂಬಿಕ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ: ಮೌಲಾನ ಜಲಾಲುದ್ದೀನ್ ಉಮ್ರಿ
ಬೆಂಗಳೂರು, ಸೆ.30: ಅನೈತಿಕ ಸಂಬಂಧವನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ನೀಡಿರುವ ಹೇಳಿಕೆ ನಮ್ಮ ದೇಶದ ಕೌಟುಂಬಿಕ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಜಲಾಲುದ್ದೀನ್ ಉಮ್ರಿ ಅಭಿಪ್ರಾಯಪಟ್ಟರು.
ಇಲ್ಲಿನ ಆರ್.ಟಿ.ನಗರದಲ್ಲಿರುವ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಘಟಕದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೈತಿಕ ಸಂಬಂಧವನ್ನು ಅಪರಾಧವೆಂದು ಪರಿಗಣಿಸುವ ಐಪಿಸಿ ಸೆಕ್ಷನ್ 497 ಅನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಇದರಿಂದ, ಕೌಟುಂಬಿಕ ವ್ಯವಸ್ಥೆಯೆ ನಾಶವಾಗಬಹುದು ಎಂದರು.
ವಿವಾಹದ ಉದ್ದೇಶವೂ ಈಡೇರುವುದಿಲ್ಲ. ಸಮಾಜವು ವಿನಾಶದ ಅಂಚಿಗೆ ಹೋಗಲಿದೆ. ಅಲ್ಲದೆ, ಕೆಟ್ಟ ವ್ಯವಸ್ಥೆಯೊಂದು ಅಸ್ತಿತ್ವಕ್ಕೆ ಬರಬಹುದು. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ನ್ಯಾಯಾಲಯಗಳಲ್ಲಿ ಬರುತ್ತಿರುವ ಆದೇಶಗಳು, ಸಂವಿಧಾನದ ಮೌಲ್ಯಗಳನ್ನು ಕುಸಿಯುವಂತೆ ಮಾಡುತ್ತಿದೆಯೆ ಎಂಬ ಅನುಮಾನ ಮೂಡುತ್ತಿದೆ ಎಂದು ಅವರು ಹೇಳಿದರು.
ದೇಶದ ಸ್ವಾತಂತ್ರ ನಂತರ ಇದೇ ಮೊದಲ ಬಾರಿಗೆ ಸಮಾಜದಲ್ಲಿ ಮುಕ್ತವಾಗಿ ನ್ಯಾಯಾಲಯಗಳ ಆದೇಶದ ಬಗ್ಗೆ ಅಸಮಾಧಾನಗಳು ಹೊರ ಬರುತ್ತಿವೆ. ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳೇ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಮೇಲೆ ‘ಬಾಹ್ಯ ಒತ್ತಡ’ವಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಜಲಾಲುದ್ದೀನ್ ಉಮ್ರಿ ಹೇಳಿದರು.
ಸಲಿಂಗ ಕಾಮವನ್ನು ಕಾನೂನು ಬದ್ಧಗೊಳಿಸಲಾಗಿದೆ. ಇದು ಮಾನವೀಯ ಸಮಾಜಕ್ಕೆ ವಿರುದ್ಧವಾದದ್ದು. ಈ ಆದೇಶ ಹೊರ ಬಂದ ಬಳಿಕ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಹೊಸದಿಲ್ಲಿಯಲ್ಲಿ ಅನ್ಯ ಧರ್ಮದ ಮುಖಂಡರ ಸಭೆ ನಡೆಸಲಾಗಿತ್ತು. ಯಾವ ಧರ್ಮದ ಮುಖಂಡರು ಸಲಿಂಗ ಕಾಮವನ್ನು ಒಪ್ಪಲಿಲ್ಲ. ಇದೊಂದು ಅನೈಸರ್ಗಿಕವಾದ ಕ್ರಿಯೆಯಾಗಿದೆ ಎಂದು ಅವರು ತಿಳಿಸಿದರು.
ತ್ರಿವಳಿ ತಲಾಕ್ ಕುರಿತು ಕೇಂದ್ರ ಸರಕಾರ ಸುಗ್ರೀವಾಜ್ಞೆ ತಂದು ತಲಾಕ್(ವಿಚ್ಚೇದನ) ನೀಡುವುದನ್ನು ಅಪರಾಧ ಎಂದು ಮಾಡಿದೆ. ಇದು ಮುಸ್ಲಿಮರ ಶರೀಅತ್‌ನಲ್ಲಿ ಹಸ್ತಕ್ಷೇಪ ಮಾತ್ರವಲ್ಲ, ಸಂವಿಧಾನ ಬದ್ಧವಾಗಿ ಅಲ್ಪಸಂಖ್ಯಾತರಿಗೆ ನೀಡಿರುವ ಹಕ್ಕುಗಳನ್ನು ಕಸಿಯುವ ಪ್ರಯತ್ನವೂ ಆಗಿದೆ ಎಂದು ಜಲಾಲುದ್ದೀನ್ ಉಮ್ರಿ ಹೇಳಿದರು.
ಜಮಾಅತೆ ಇಸ್ಲಾಮಿ ಹಿಂದ್‌ನ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಲೀಂ ಮಾತನಾಡಿ, ಅನೈತಿಕ ಸಂಬಂಧ, ಸಲಿಂಗ ಕಾಮಕ್ಕೆ ಸಂಬಂಧಿಸಿದಂತೆ ಬಂದಿರುವ ತೀರ್ಪುಗಳನ್ನು ನೋಡಿದರೆ ಹೊರಗಿನ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿರುವುದು ಕಂಡು ಬರುತ್ತದೆ ಎಂದರು.
ಪಾಶ್ಚಿಮಾತ್ಯ ಸಮಾಜದ ವ್ಯವಸ್ಥೆಯನ್ನು ನಮ್ಮ ದೇಶದ ಸಂಸ್ಕೃತಿ, ಸಮಾಜದ ಮೇಲೆ ಹೇರುವ ಪ್ರಯತ್ನ ಇದಾಗಿದೆ. ನಮ್ಮಲ್ಲಿರುವ ಕೌಟುಂಬಿಕ ವ್ಯವಸ್ಥೆ ಅತ್ಯುತ್ತಮವಾಗಿದ್ದು, ಅದರ ಮೇಲೆ ಪ್ರಹಾರ ಮಾಡುವ ಷಡ್ಯಂತ್ರ ಇದಾಗಿದೆ ಎಂದು ಅವರು ದೂರಿದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಮುಹಮ್ಮದ್ ಅತ್ತರುಲ್ಲಾ ಶರೀಫ್, ಎಚ್‌ಆರ್‌ಎಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮರಕಡ ಉಪಸ್ಥಿತರಿದ್ದರು.