ಆಡಂಬರದ ರಾಜ್ಯೋತ್ಸವದಿಂದ ಕನ್ನಡ ಅಭಿವೃದ್ಧಿಯಾಗದು: ಪ್ರೊ.ನಿಸಾರ್ ಅಹ್ಮದ್
ಬೆಂಗಳೂರು, ಸೆ. 30: ಆಡಂಬರದ ರಾಜ್ಯೋತ್ಸವ ಆಚರಣೆಯಿಂದ ಕನ್ನಡದ ಅಭಿವೃದ್ಧಿಯಾಗದು ಎಂಬುದನ್ನು ಕನ್ನಡಪರ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು. ಕನ್ನಡ ಜನತೆಯ ಬದುಕು ಹಸನುಗೊಂಡಾಗ, ತಾನಾಗಿಯೆ ಕನ್ನಡವು ಬೆಳಗುತ್ತದೆ ಎಂದು ಹಿರಿಯ ಸಾಹಿತಿ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ಅಭಿಪ್ರಾಯಿಸಿದರು.
ರವಿವಾರ ಸಾವಣ್ಣ ಪ್ರಕಾಶನ ನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಲೇಖಕಿ ಬಿ.ವಿ.ಭಾರತಿರವರ ‘ಜಸ್ಟ್ ಮಾತ್ ಮಾತಲ್ಲಿ’, ಲೇಖಕ ರಂಗರಾಜ್ ಚಕ್ರವರ್ತಿರವರ ‘ಜಿಲೇಬಿ’ ಹಾಗೂ ಯುವ ಲೇಖಕಿ ಮೇಘನ ಸುಧೀಂದ್ರರವರ ‘ಜಯನಗರದ ಹುಡುಗಿ’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕನ್ನಡ ರಾಜ್ಯೋತ್ಸವ ದಿನದಂದು ನಗರದ ಗಲ್ಲಿ, ಗಲ್ಲಿಗಳಲ್ಲಿ ಕರ್ಕಶ ಸಂಗೀತಗಳ ನಡುವೆ ಕಿರುಚಾಡುವ ರೀತಿಯಲ್ಲಿ ರಾಜ್ಯೋತ್ಸವನ್ನು ಆಚರಿಸಲಾಗುತ್ತದೆ. ಇದರಿಂದ ಕನ್ನಡ ಭಾಷೆಗಾಗಲಿ, ಇಲ್ಲಿನ ಜನತೆಗಾಗಲಿ ಯಾವುದೆ ಪ್ರಯೋಜನವಿಲ್ಲ. ಅದರ ಬದಲಾಗಿ, ಕನ್ನಡ ನಾಡಿನಲ್ಲಿರುವ ಸಾಮಾನ್ಯ ಜನರ ಬದುಕನ್ನು ಹಸನುಗೊಳಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಅವರು ಹೇಳಿದರು. ನಮ್ಮ ಕಾಲದಲ್ಲಿ ಸಾಹಿತಿಗಳು ತಮ್ಮ ಬರವಣಿಗೆಯನ್ನು ಪುಸ್ತಕ ರೂಪದಲ್ಲಿ ಹೊರತರಬೇಕಾದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಇದರಿಂದಾಗಿ ಹಲವು ಸೃಜನಾತ್ಮಕ ಲೇಖಕರು ಬೆಳಕಿಗೆ ಬಾರದೆ ಕಣ್ಮರೆಯಾಗಿದ್ದಾರೆ ಎಂದರೆ ಅಶ್ಚರ್ಯ ಪಡಬೇಕಿಲ್ಲ ಎಂದು ಅವರು ವಿಷಾದಿಸಿದರು.
ಯಾವುದೆ ಪ್ರಕಾರದ ಬರಹಗಾರನಿಗೆ ಓದು ಮುಖ್ಯವಾಗುತ್ತದೆ. ಮನಸ್ಸಿನಲ್ಲಿ ಹೊಳೆದ ವಿಚಾರಗಳನ್ನು ಏಕಾಏಕಿ ದಾಖಲಿಸದೇ ಚಿಂತನೆ ಮಾಡಿ ತಿಳಿಗೊಳಿಸಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ತಮ್ಮ ಚಿಂತನೆಗಳನ್ನು ಸೃಜನಾತ್ಮಕವಾಗಿ ಕಟ್ಟಿಕೊಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಹಿರಿಯ ನಟ ಶ್ರೀನಾಥ್ ಮಾತನಾಡಿ, ಬರಹಗಾರರು ತಮಗೆ ಏನೇ ಕಷ್ಟ ಇದ್ದರೂ ಅದನ್ನು ಸವಾಲಾಗಿ ಸ್ವೀಕರಿಸುತ್ತಾರೆ. ಸಮಾಜದ ಬದಲಾವಣಿಯಲ್ಲಿ ಬರಹಗಾರರ ಪಾತ್ರ ಮುಖ್ಯವಾಗಿದ್ದು, ಮತ್ತಷ್ಟು ಬರಹಗಾರರ ಸಂಖ್ಯೆ ಹೆಚ್ಚಾಗಲಿ ಎಂದು ಅವರು ಹೇಳಿದರು.
ಈ ವೇಳೆ ಹಿರಿಯ ಪತ್ರಕರ್ತ ಎಸ್.ಕೆ.ಶಾಮಸುಂದರ್, ಡಾ. ನಾ. ಸೋಮೇಶ್ವರ, ಕೃತಿಕಾರರಾದ ಭಾರತಿ ಬಿ.ವಿ, ಮೇಘನಾ ಸುಧೀಂದ್ರ, ರಂಗರಾಜ್ ಚಕ್ರವರ್ತಿ ಮತ್ತಿತರರು ಉಪಸ್ಥಿತರಿದ್ದರು.