×
Ad

ದೇಶದ ಅಭಿವೃದ್ಧಿಗೆ ಮತೀಯ ಸೌಹಾರ್ದತೆ ಅಗತ್ಯ: ಶ್ರೀ ಶಿವರುದ್ರಸ್ವಾಮಿ

Update: 2018-09-30 19:00 IST

ಬೆಂಗಳೂರು, ಸೆ.30: ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತೀಯ ಸೌಹಾರ್ದತೆಯು ತುಂಬಾ ಅಗತ್ಯವಾಗಿದೆ. ದೇಶ ಹಾಗೂ ಸಮಾಜದ ಮುಂದಿರುವ ಸಮಸ್ಯೆಗಳು, ಸವಾಲುಗಳನ್ನು ನಾವೆಲ್ಲರೂ ಒಗ್ಗಟ್ಟಾಗಿ ಎದುರಿಸಬೇಕಿದೆ ಎಂದು ಬೇಲಿಮಠದ ಶ್ರೀ ಶಿವರುದ್ರಸ್ವಾಮಿ ಕರೆ ನೀಡಿದರು.

ರವಿವಾರ ಇಂದಿರಾನಗರದ ಮಸ್ಜಿದ್-ಎ-ಉಮ್ಮುಲ್ ಹಸ್ನೈನ್‌ನಲ್ಲಿ ಆಯೋಜಿಸಲಾಗಿದ್ದ ‘ಮತೀಯ ಸೌಹಾರ್ದತೆ ಸಮಾವೇಶ’ವನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲರ ಹೃದಯವನ್ನು ಒಂದು ಗೂಡಿಸುವ ಮತ್ತು ಉತ್ತಮವಾದ ರೀತಿಯಲ್ಲಿ ಆತ್ಮ ನಿರೀಕ್ಷಣೆ ಮಾಡಿಕೊಂಡು, ಪರಸ್ಪರ ವಿಶ್ವಾಸ ಮೂಡಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದರು.

ಸರ್ವಧರ್ಮಗಳು ಮಾನವನ ಕಲ್ಯಾಣ, ಶಾಂತಿ, ಸೌಹಾರ್ದತೆಯ ಸಂದೇಶವನ್ನೆ ಸಾರುತ್ತವೆ. ನಾವು ಉದಾತ್ತವಾದ ಉನ್ನತ ಮಾನವೀಯ ಮೌಲ್ಯಗಳನ್ನು ಬೆಳೆಸುವುದರ ಕಡೆಗೆ ಗಮನ ಹರಿಸಬೇಕಿದೆ. ಇವತ್ತು ಜಗತ್ತಿನಲ್ಲಿ ಸೃಷ್ಟಿಯಾಗಿರುವ ಎಲ್ಲ ಸಮಸ್ಯೆಗಳು ಮಾನವ ನಿರ್ಮಿತವಾದದ್ದು ಎಂದು ಅವರು ಹೇಳಿದರು.

ಜಗತ್ತಿನಲ್ಲಿ ಇಂದು ಸತ್ಯ ಹಾಗೂ ಮಿಥ್ಯದ ನಡುವೆ ಹೋರಾಟ ನಡೆಯುತ್ತಿದೆ. ನಾವು ಯಾರೊಂದಿಗೆ ಕೈ ಜೋಡಿಸಬೇಕು ಎಂಬುದನ್ನು ನಿರ್ಧರಿಸಬೇಕಿದೆ. ಇಸ್ಲಾಮ್ ಧರ್ಮ ಶಾಂತಿಯನ್ನು ಪ್ರತಿಪಾದಿಸುತ್ತದೆಯೇ ಹೊರತು, ದ್ವೇಷ, ಹಿಂಸೆಗೆ ಇಲ್ಲಿ ಅವಕಾಶವಿಲ್ಲ. ‘ಕ್ಷಣಗಳಲ್ಲಿ ಆದ ತಪ್ಪಿಗೆ, ಶತಮಾನಗಳು ಶಿಕ್ಷೆ ಅನುಭವಿಸಿದವು’ ಎಂಬ ಕವಿವಾಣಿಯಂತೆ, ಯಾರೋ ಮಾಡಿದ ತಪ್ಪಿಗೆ ಇಂದು ನಾವು ಶಿಕ್ಷೆ ಅನುಭವಿಸುವಂತಾಗಿದೆ ಎಂದು ಶಿವರುದ್ರಸ್ವಾಮಿ ತಿಳಿಸಿದರು.

ಮೌಲಾನ ಮುಫ್ತಿ ಶಂಶುದ್ದೀನ್ ಬಜ್ಲಿ ಮಾತನಾಡಿ, ಕೆಲವೇ ಕೆಲವು ವ್ಯಕ್ತಿಗಳು ಸಮಾಜದಲ್ಲಿ ದ್ವೇಷದ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಶೇ.70ಕ್ಕಿಂತ ಹೆಚ್ಚಿನ ಜನ ಇದನ್ನು ನೋಡಿಕೊಂಡು ಸುಮ್ಮನೆ ಕೂತಿದ್ದಾರೆ. ಒಂದು ವೇಳೆ ಇವರು ಧ್ವನಿ ಎತ್ತಿದ್ದರೆ, ದ್ವೇಷ ಹರಡುತ್ತಿರುವವರ ಧ್ವನಿ ಅಡಗಿಸಬಹುದು ಎಂದರು.

ಯಾರು ಮನುಷ್ಯರನ್ನು ಪ್ರೀತಿಸುತ್ತಾರೆಯೋ, ದೇವರು ಅವರನ್ನು ಪ್ರೀತಿಸುತ್ತಾನೆ. ಕೇರಳದಲ್ಲಿ ಇತ್ತೀಚೆಗೆ ಆದ ಜಲಪ್ರಳಯದ ಸಂದರ್ಭದಲ್ಲಿ ದೇವಾಲಯ, ಚರ್ಚ್ ಗಳಲ್ಲಿ ನಮಾಝ್ ಮಾಡಲಾಯಿತು. ಯಾರಿಗೂ ಆಗ ಅಭ್ಯಂತರ ಆಗಲಿಲ್ಲ. ನಾವು ಮನುಷ್ಯರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಮಸೀದಿಯ ಒಕ್ಕೂಟಗಳ ವತಿಯಿಂದ ಚಿಕ್ಕ ಚಿಕ್ಕ ಮೊಹಲ್ಲಾಗಳಲ್ಲಿ ಇಂತಹ ಸಮಾವೇಶಗಳು ನಡೆಯಬೇಕು. ಇದರಿಂದ ಸಮಾಜದಲ್ಲಿ ಸೌಹಾರ್ದತೆಯ ವಾತಾವರಣವನ್ನು ತಳಮಟ್ಟದಿಂದ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಶಂಶುದ್ದೀನ್ ಅಭಿಪ್ರಾಯಪಟ್ಟರು.

ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಬಲ್ಜೀತ್‌ಸಿಂಗ್ ಮಾತನಾಡಿ, ನಮ್ಮ ದೇಶದಲ್ಲಿ ಹಲವಾರು ಧರ್ಮಗಳಿವೆ. ವಿಶ್ವ ಭ್ರಾತೃತ್ವದ ಸಂದೇಶ ಸಾರಲು ಗುರುನಾನಕರು ಸೌದಿ ಅರೇಬಿಯಾ, ಅಫ್ಘಾನಿಸ್ತಾನ, ಇರಾನ್, ಇರಾಕ್ ಸೇರಿದಂತೆ ಅನೇಕ ದೇಶಗಳಿಗೆ ಭೇಟಿ ನೀಡಿದ್ದರು. ಪ್ರವಾದಿ ಮುಹಮ್ಮದ್(ಸ) ಇಡೀ ವಿಶ್ವಕ್ಕೆ ಶಾಂತಿ, ಸೌರ್ಹಾದತೆಯ ಸಂದೇಶವನ್ನು ಸಾರಿದರು ಎಂದರು. ರಾಜಕೀಯ ಪಕ್ಷಗಳು ಘರ್ ಘರ್ ಮೋದಿ, ಮನೆ ಮನೆಗೆ ಕಾಂಗ್ರೆಸ್ ಎಂಬ ಘೋಷಣೆಗಳನ್ನು ಮಾಡುತ್ತಾರೆ. ಆದರೆ, ಇವತ್ತು ನಮಗೆ ಬೇಕಾಗಿರುವುದು ಮನೆ ಮನೆಗೆ ಶಾಂತಿ, ಸೌಹಾರ್ದತೆ. ಈ ನಿಟ್ಟಿನಲ್ಲಿ ನಾವು ಶ್ರಮಿಸಬೇಕಿದೆ ಎಂದು ಅವರು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೌಲಾನ ಸೈಯ್ಯದ್ ಶಬ್ಬೀರ್‌ನದ್ವಿ ಮಾತನಾಡಿ, ಎಲ್ಲ ಮೊಹಲ್ಲಾಗಳು, ಬಡಾವಣೆಗಳಲ್ಲಿ ಇಂತಹ ಕಾರ್ಯಕ್ರಮ ನಡೆಸಿದರೆ ಪರಸ್ಪರ ಪ್ರೀತಿ, ವಿಶ್ವಾಸ ಮೂಡುತ್ತದೆ. ನಮ್ಮಲ್ಲಿರುವ ಅಪನಂಬಿಕೆಗಳು ದೂರವಾಗಿ ಸೌರ್ಹಾದಯುತವಾದ ಸಮಾಜ ನಿರ್ಮಾಣವಾಗುತ್ತದೆ. ದ್ವೇಷ, ಅಸೂಯೆಯಿಂದ ನಾವು ಏನನ್ನೂ ಸಾಧಿಸಲು ಆಗುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳಾದ ಮುಹಮ್ಮದ್ ಸನಾವುಲ್ಲಾ, ಸೈಯ್ಯದ್ ಝಮೀರ್ ಪಾಷ, ಮಸ್ಜಿದ್-ಎ-ಉಮ್ಮುಲ್ ಹಸ್ನೈನ್ ಅಧ್ಯಕ್ಷ ಝಿಯಾವುಲ್ಲಾಖಾನ್, ಕಾರ್ಯದರ್ಶಿ ಮುಹಮ್ಮದ್ ಇಬ್ರಾಹೀಂ ಶಫಿಕ್, ಶಿಫಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಅಬ್ದುಲ್ ರಹ್ಮಾನ್, ಸಿ.ವಿ.ರಾಮನ್‌ನಗರ ವಿಧಾನಸಭಾ ಕ್ಷೇತ್ರದ ಕಸಾಪ ಅಧ್ಯಕ್ಷ ಮುಹಮ್ಮದ್ ಮುನಾಫ್, ಬಿಬಿಎಂಪಿ ಸದಸ್ಯ ಆನಂದ್‌ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News