×
Ad

ಭಿನ್ನ ದನಿ ಅಡಗಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ: ಡಾ.ಎಲ್.ಹನುಮಂತಯ್ಯ

Update: 2018-09-30 19:20 IST

ಬೆಂಗಳೂರು, ಸೆ.30: ಹಿಂಸಾಚಾರದಲ್ಲಿ ನಿರತರಾಗಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಿ. ಅದನ್ನು ಬಿಟ್ಟು, ಭಿನ್ನ ದನಿ ಅಡಗಿಸುವ ಪ್ರಯತ್ನ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾರಕವಾದುದು ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.

ರವಿವಾರ ನಗರದ ಕುಮಾರಕೃಪಾದ ಗಾಂಧಿಭವನದಲ್ಲಿ ಸಮಾಜಮುಖಿ ಪ್ರಕಾಶನದ ಚೊಚ್ಚಲ ಪುಸ್ತಕ ಲೇಖಕ ರವಿ ಹಂಜ್‌ರವರ ‘ಮಹಾಪಯಣ’ ಹಾಗೂ ಗಾಂಧಿ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆಯುಂಟು ಮಾಡುವ ಹೇರಿಕೆ ಸಂಸ್ಕೃತಿ ಬೇರು ಬಿಟ್ಟಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ವಿರೋಧಿಗಳನ್ನೂ ಪ್ರೀತಿಸಿ ಗೌರವಿಸುತ್ತಿದ್ದ ಗಾಂಧೀಜಿ ಅವರಂತಹ ಮಹಾತ್ಮರ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.

ದೇಶದಲ್ಲಿ ವೈಚಾರಿಕ ಹಾಗೂ ಪರ್ಯಾಯ ಚಿಂತನೆಗಳ ಕುರಿತು ಭಿನ್ನ ಅಭಿಪ್ರಾಯ ವ್ಯಕ್ತಪಡಿಸುವವರನ್ನು ಗೃಹ ಬಂಧನದಲ್ಲಿ ಇರಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದ ಅವರು, ನ್ಯಾಯಾಲಯವೂ ಅದೇ ಧಾಟಿಯಲ್ಲಿ ಮಾತನಾಡಲು ಪ್ರಾರಂಭಿಸಿವೆ. ನ್ಯಾಯಾಲಯಗಳು ವಿವೇಚನೆಯಿಂದ ಚಿಂತಿಸುತ್ತಿಲ್ಲ ಎಂದು ನುಡಿದರು.

ಇಂದಿನ ದಿನಮಾನಗಳಲ್ಲಿ ಗಾಂಧಿ ಹೆಸರಿನಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಸಾವಿರಾರು ಕೋಟಿ ಖರ್ಚು ಮಾಡಲು ಸಿದ್ಧರಿದ್ದೇವೆ. ಆದರೆ, ಗಾಂಧಿಯ ತತ್ವಾದರ್ಶಗಳು, ಚಿಂತನೆಗಳನ್ನು ಮೈಗೂಡಿಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಚಿಂತಕ, ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಎಲ್ಲ ಕ್ಷೇತ್ರಗಳು ಕಂಪ್ಯೂಟರೀಕರಣಗೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಮಾನವ ನಿರುದ್ಯೋಗಿಯಾಗುವ ಸಂಭವ ಹೆಚ್ಚಿದ್ದು, ಇಂಥ ಸಂದರ್ಭದಲ್ಲಿ ಗಾಂಧಿ ಮಾರ್ಗದಲ್ಲಿ ಅನುಸರಿಸಬೇಕೇ ಅಥವಾ ಆಧುನಿಕತೆಯ ಹಾದಿಯಲ್ಲಿ ಸಾಗಬೇಕೇ ಎಂಬ ಬಗ್ಗೆ ತರ್ಕ, ಚಿಂಚನೆಗಳಾಗಬೇಕಿದೆ ಎಂದು ಹೇಳಿದರು.

ಗಾಂಧಿಯವರದ್ದು ಒಗಟಾದ, ರಹಸ್ಯವಾದ ವ್ಯಕ್ತಿತ್ವ. ಸ್ವಾತಂತ್ರ ಸಂಗ್ರಾಮದಲ್ಲಿ ಗಾಂಧೀಜಿ ಅವರು ವಹಿಸಿದ ಪಾತ್ರದ ಕುರಿತು ಪುನರಾವಲೋಕ ಅತ್ಯಗತ್ಯ. ಅವರು ಅತ್ಯಂತ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು. ಆದರೆ, ಅಂಬೇಡ್ಕರ್‌ರವರ ಹೆಸರಿಲ್ಲ. ಗಾಂಧಿ ಭಾರತಕ್ಕೆ ಸ್ವಾತಂತ್ರ ದೊರಕಿಸಿಕೊಟ್ಟಿದ್ದಾರೆ ಎಂಬ ಮಾತಿನಲ್ಲಿ ಎಷ್ಟು ಸತ್ಯಾಂಶವಿದೆ ಎಂಬ ಪ್ರಶ್ನೆ ನನ್ನಲ್ಲಿದೆ ಎಂದು ಚಿರಂಜೀವಿ ಸಿಂಗ್ ನುಡಿದರು.

ಸಮಾರಂಭದಲ್ಲಿ ಸಾಹಿತಿ ಕೆ.ಪುಟ್ಟಸ್ವಾಮಿ, ಲೇಖಕ ರವಿಹಂಜ್, ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ, ಸಮಾಜಮುಖಿ ಸಂಪಾದಕ ಚಂದ್ರಕಾಂತ ವಡ್ಡು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News