×
Ad

ಆಧುನಿಕ ಜೀವನ ಶೈಲಿಯೇ ಹೃದಯ ಖಾಯಿಲೆ ಹೆಚ್ಚಳದ ಮೂಲ: ಶಾಸಕಿ ಸೌಮ್ಯಾರೆಡ್ಡಿ

Update: 2018-09-30 20:06 IST

ಬೆಂಗಳೂರು, ಸೆ. 30: ಆಧುನಿಕ ಜೀವನ ಶೈಲಿಯೇ ಹೃದಯ ಸಂಬಂಧಿ ಹಾಗೂ ಡಯಾಬಿಟಿಸ್ ಖಾಯಿಲೆಗಳ ಹೆಚ್ಚಳದ ಮೂಲವಾಗಿದೆ ಎಂದು ಜಯನಗರ ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿ ಹೇಳಿದ್ದಾರೆ.

ರವಿವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ತಥಾಗತ್ ಹೃದಯ ಆಸ್ಪತ್ರೆ ಆಯೋಜಿಸಿದ್ದ ‘ನನ್ನ ಹೃದಯ ನಿಮ್ಮ ಹೃದಯ’ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವ ಪೀಳಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ನಾವು ತಿನ್ನುವ ಆಹಾರದಲ್ಲಿಯೂ ಸಾಕಷ್ಟು ವ್ಯತ್ಯಾಸವಾಗಿರುವುದರಿಂದ ಹೃದಯ ಸಂಬಂಧಿ ಖಾಯಿಲೆ ಬರುತ್ತಿದೆ. ಪೌಷ್ಠಿಕ ಹಾಗೂ ಸತ್ವಯುತ ಆಹಾರ ಸೇವನೆಯಿಂದ ರೋಗಗಳನ್ನು ತಡೆಯಬಹುದು. ಈ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಸ್ವಾಗತಾರ್ಹ ಎಂದು ಹೇಳಿದರು.

ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚಾಗುತ್ತಿದೆ. ಜನರು ವ್ಯಾಯಾಮ ಹಾಗೂ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವ ಮೂಲಕ ಹೃದಯಾಘಾತ ಆಗುವುದನ್ನು ತಡೆಯಬಹುದು. ರಾಜ್ಯ ಸರಕಾರ ಸಾಂಕ್ರಾಮಿಕವಲ್ಲದ ಹೃದಯ ಸಂಬಂಧಿ ಹಾಗೂ ಡಯಾಬಿಟಿಸ್ ನಂತಹ ರೋಗಗಳ ಪತ್ತೆ ಮಾಡುವ ಕುರಿತು ಬಜೆಟ್‌ನಲ್ಲಿ ಯೋಜನೆ ಘೊಷಣೆ ಮಾಡಿದೆ. ಶೀಘ್ರವೇ ಸಂಪುಟದ ಮುಂದೆ ತಂದು ಯೋಜನೆ ಜಾರಿಗೆ ತರಲಾಗುವುದು ಎಂದು ಮಾಹಿತಿ ನೀಡಿದರು.

ತಥಾಗತ್ ಹೃದಯ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಮಹಾಂತೇಶ್ ಚರಂತಿಮಠ್ ಮಾತನಾಡಿ, ಯುವಕರಲ್ಲಿ ಹೃದಯ ಸಬಂಂಧಿ ಖಾಯಿಲೆಗಳು ಹೆಚ್ಚಾಗುತ್ತಿದೆ. ಶೇ.40ರಷ್ಟು ಜನರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾರೆ. ಜಾಥಾದಲ್ಲಿ ಪರಿಷತ್ ಸದಸ್ಯ ಪಿ.ಆರ್.ರಮೇಶ್, ಎಚ್.ಟಿ. ಸೀತಾರಾಮ್, ಲೈಯನ್ ಚಾಮುಂಡೇಶ್ವರಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News