×
Ad

ರಫೇಲ್ ವಿಚಾರದಲ್ಲಿ ಕಾಂಗ್ರೆಸ್‌ನಿಂದ ಮೊಸಳೆ ಕಣ್ಣೀರು: ನಿರ್ಮಲಾ ಸೀತಾರಾಮನ್

Update: 2018-09-30 21:38 IST

ಬೆಂಗಳೂರು, ಸೆ.30: ರಫೇಲ್ ವಿಚಾರದಲ್ಲಿ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ. ಎಚ್‌ಎಎಲ್ ಜತೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿತ್ತಾ? ಇದುವರೆಗೂ ಯಾವುದೇ ಒಡಂಬಡಿಕೆ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೂ ರಫೇಲ್ ಬಗ್ಗೆ ಸುಮ್ಮನೆ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಧಿಕಾರವಿಲ್ಲದೇ ಕಾಂಗ್ರೆಸ್‌ಗೆ ಇರಲಾಗುತ್ತಿಲ್ಲ. ಅವರು ಅಧಿಕಾರದ ದಾಸರಾಗಿದ್ದಾರೆ. ಹೀಗಾಗಿ, ಬಿಜೆಪಿ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಮೇಯರ್ ಚುನಾವಣೆಗೆ ಗೈರಾಗಿದ್ದಕ್ಕೆ ಸ್ಪಷ್ಟನೆ ನೀಡಿದ ಸಚಿವರು, ಅಂದು ಟ್ರೈ ಸರ್ವೀಸ್ ಕಮಾಂಡರ್‌ ಸಮಾವೇಶದಲ್ಲಿ ಭಾಗಿಯಾಗಬೇಕಿತ್ತು. ವರ್ಷಕ್ಕೆ ಒಂದು ಬಾರಿ ಆರ್ಮಿ, ನೇವಿ, ಏರ್‌ಪೋರ್ಸ್ ಮುಖ್ಯಸ್ಥರು ಈ ಸಮಾವೇಶದಲ್ಲಿ ಭಾಗಿಯಾಗುತ್ತಾರೆ. ಅಂದು ಇಡೀ ದಿನ ಪ್ರಧಾನಿಯವರು ಎಲ್ಲ ಮುಖ್ಯಸ್ಥರ ಜೊತೆ ದೇಶದ ರಕ್ಷಣೆ ಕುರಿತು ಮಾತುಕತೆ ನಡೆಸುತ್ತಾರೆ. ರಕ್ಷಣಾ ಸಚಿವೆಯಾಗಿ ನಾನು ಅದರಲ್ಲಿ ಭಾಗವಹಿಸಲೇಬೇಕಿತ್ತು. ಹೀಗಾಗಿ, ಚುನಾವಣೆಗೆ ಗೈರಾದೆ. ಈ ಬಗ್ಗೆ ರಾಜ್ಯದ ನಾಯಕರಿಗೆ ಮೊದಲೆ ತಿಳಿಸಿದ್ದೆ ಎಂದು ಹೇಳಿದರು.

ನೀರವ್ ಮೋದಿ, ಸಂಜಯ ಭಂಡಾರಿ, ವಿಜಯ್ ಮಲ್ಯ ಚಲನವಲನಗಳ ಬಗ್ಗೆ ಸರಕಾರ ಕಣ್ಣಿಟ್ಟಿದೆ. ಯಾರಿಗೆ ಹೇಗೆ ಉತ್ತರ ಕೊಡಬೇಕು ಎಂದು ಸರಕಾರಕ್ಕೆ ಗೊತ್ತಿದೆ ಎಂದು ನುಡಿದರು.

ಏರೋ ಇಂಡಿಯಾ ಬೆಂಗಳೂರಿನಲ್ಲಿ: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ-2019 ಬೆಂಗಳೂರಿನಲ್ಲೇ ನಡೆಯುತ್ತಿರುವುದು ಹೆಮ್ಮೆಯ ವಿಷಯ. ನಮ್ಮಲ್ಲಿ ಎಚ್‌ಎಎಲ್ ಇದೆ. ಇಲ್ಲೇ ಏರೋ ಇಂಡಿಯಾ ನಡೆಸಿ ಎಂದು ಉತ್ತರ ಪ್ರದೇಶ ಸರಕಾರ ಕೇಳಿದ್ದು ಸತ್ಯ. ಯಾರೂ ಕೇಳಬಾರದು ಎಂದಿಲ್ಲ. ಆದರೆ, ಈಗ ಬೆಂಗಳೂರಿನಲ್ಲೇ ನಡೆಸಬೇಕೆಂದು ತೀರ್ಮಾನಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News