ಬೆಂಗಳೂರು ಜಿಲ್ಲಾ ಸೈಕ್ಲಿಂಗ್ ಸಂಸ್ಥೆಗೆ ಮರುಜೀವ
ಬೆಂಗಳೂರು, ಸೆ.30: ಕೆಲವು ವರ್ಷಗಳಿಂದ ತಟಸ್ಥವಾಗಿದ್ದ ಬೆಂಗಳೂರು ಜಿಲ್ಲಾ ಸೈಕ್ಲಿಂಗ್ ಸಂಸ್ಥೆಗೆ ಮರುಜೀವ ನೀಡಲಾಗಿದೆ. ಬೆಳಗಾವಿಯಲ್ಲಿ ಈಚೆಗೆ ನಡೆದಿದ್ದ ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಸಭೆಯಲ್ಲಿ ಜಿಲ್ಲಾ ಘಟಕವನ್ನು ಸಕ್ರಿಯಗೊಳಿಸಲು ನಿರ್ಧರಿಸಿದ ಪರಿಣಾಮ, ಪದಾಧಿಕಾರಿಗಳ ಆಯ್ಕೆ ನಡೆದಿದೆ.
ನವೀನ್ ಜಾನ್, ನವೀನ್ ರಾಜ್, ಸಮೀರ ಮುಂತಾದ ರಾಷ್ಟ್ರೀಯ ಸೈಕ್ಲಿಸ್ಟ್‌ಗಳನ್ನು ಕಾಣಿಕೆಯಾಗಿ ನೀಡಿದ ಜಿಲ್ಲೆಯಲ್ಲಿ ಐದು ವರ್ಷಗಳಿಂದ ಸೈಕ್ಲಿಂಗ್‌ಗೆ ಸಾಂಸ್ಥಿಕ ರೂಪ ಇರಲಿಲ್ಲ. ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ಜಿಲ್ಲೆಯ ಸೈಕ್ಲಿಸ್ಟ್‌ಗಳು ವೈಯಕ್ತಿಕವಾಗಿ ಪಾಲ್ಗೊಳ್ಳುತ್ತಿದ್ದರು. ಈ ಬಾರಿ ಆಯ್ಕೆ ಟ್ರಯಲ್ಸ್ ನಂತರವೇ ಸೈಕ್ಲಿಸ್ಟ್‌ಗಳನ್ನು ಕಳುಹಿಸಲು ಸಿದ್ಧತೆ ನಡೆದಿದೆ.
ಅಕ್ಟೋಬರ್ 13 ಮತ್ತು 14ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ರಾಜ್ಯ ರಸ್ತೆ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ಗೆ ಆಯ್ಕೆ ಪ್ರಕ್ರಿಯೆ ಅಕ್ಟೋಬರ್ ಎರಡರಂದು ನೆಲಮಂಗಲ ತಾಲೂಕಿನ ಸೂಲದೇವನಹಳ್ಳಿ ಮುಖ್ಯರಸ್ತೆಯಲ್ಲಿ ನಡೆಯಲಿದೆ. ಜಿಲ್ಲಾ ಸಂಸ್ಥೆಯ ಚಟುವಟಿಕೆ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಶೇಷಾದ್ರಿಪುರ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಚಿಕ್ಕರಂಗಸ್ವಾಮಿ, ಸೈಕ್ಲಿಸ್ಟ್‌ಗಳ ಪ್ರತಿಭೆಗೆ ಸಾಣೆ ಹಿಡಿಯುತ್ತಿದ್ದರು. ಬೆಂಗಳೂರು ವಿವಿಯ ಉತ್ತಮ ಸೈಕ್ಲಿಸ್ಟ್‌ಗಳನ್ನು ರಾಜ್ಯ ಚಾಂಪಿಯನ್‌ಷಿಪ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಮೂರು ವರ್ಷಗಳ ಹಿಂದೆ ವಿಜಯಪುರದಲ್ಲಿ ನಡೆದಿದ್ದ ರಸ್ತೆ ಮತ್ತು ಟ್ರಾಕ್ ಚಾಂಪಿಯನ್‌ಷಿಪ್‌ಗೆ ಒಟ್ಟಾಗಿ 70 ಸ್ಪರ್ಧಿಗಳನ್ನು ಕರೆದುಕೊಂಡು ಹೋಗಿದ್ದೆ. ನೆಲಮಂಗಲ ಸಮೀಪದ ಹಾಸನ ರಸ್ತೆಯಲ್ಲಿ ಜಿಲ್ಲೆಯ ಸೈಕ್ಲಿಸ್ಟ್‌ಗಳ ಅಭ್ಯಾಸ ನಡೆಯುತ್ತದೆ ಎಂದು ಚಿಕ್ಕರಂಗಸ್ವಾಮಿ ತಿಳಿಸಿದರು.
ಕ್ರಮವಾಗಿ ಏಳು ಮತ್ತು ಐದು ಕಿಲೋಮೀಟರ್ಸ್, 16 ವರ್ಷದೊಳಗಿನ ಬಾಲಕ, ಬಾಲಕಿಯರಿಗೆ 10 ಕಿಲೋಮೀಟರ್ಸ್, 18 ವರ್ಷದೊಳಗಿನವರಿಗೆ 20 ಮತ್ತು 15 ಕಿಲೋಮೀಟರ್ಸ್, 23 ವರ್ಷದೊಳಗಿನವರಿಗೆ 30 ಕಿಲೋಮೀಟರ್ಸ್ ರೇಸ್ ನಡೆಯಲಿದೆ. ಮುಕ್ತ ವಿಭಾಗದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಕ್ರಮವಾಗಿ 30 ಮತ್ತು 20 ಕಿಲೋಮೀಟರ್ಸ್, ಇಂಡಿಯನ್ ಮೇಡ್ ಸೈಕಲ್‌ನಲ್ಲಿ ಪುರುಷರಿಗೆ 10 ಕಿಲೋಮೀಟರ್ಸ್ ರೇಸ್ ನಡೆಯಲಿದೆ ಎಂದು ಅವರು ತಿಳಿಸಿದರು. ಉತ್ತಮ ಸೈಕ್ಲಿಸ್ಟ್‌ಗಳಿರುವ ಬೆಂಗಳೂರು ಜಿಲ್ಲೆಯಲ್ಲಿ ರಾಜ್ಯ ಸಂಸ್ಥೆಯ ಘಟಕದ ಕಾರ್ಯ ಸ್ಥಗಿತಗೊಂಡಿರುವುದು ಬೇಸರ ತರಿಸಿತ್ತು. ಘಟಕ ಮತ್ತು ಕ್ರಿಯಾಶೀಲಗೊಂಡದ್ದು ಭರವಸೆ ಮೂಡಿಸಿದೆ ಎಂದು ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಂ.ಕುರಣಿ ತಿಳಿಸಿದರು.