×
Ad

ಮಂಟೆಸ್ವಾಮಿ-ಸಿದ್ಧಪ್ಪಾಜಿ ಪರಂಪರೆಯ ಉಳಿವಿಗೆ ನೀಲಗಾರರ ಶ್ರಮ ಶ್ಲಾಘನೀಯ: ಎ.ಸಿ.ಮಹಲಿಂಗಾಚಾರ್

Update: 2018-09-30 22:51 IST

ಬೆಂಗಳೂರು, ಸೆ.30: ದಕ್ಷಿಣ ಕರ್ನಾಟಕದ ಮೌಲಿಕ ಪರಂಪರೆಯ ಮುಖ್ಯ ಧಾರೆಗಳಾದ ಮಂಟೆಸ್ವಾಮಿ ಹಾಗೂ ಸಿದ್ಧಪ್ಪಾಜಿ ಮಹಾಕಾವ್ಯವನ್ನು ಜನ ಸಾಮಾನ್ಯರ ಮನಸಿನಲ್ಲಿ ಜೀವಂತವಾಗಿಡುವಲ್ಲಿ ನೀಲಗಾರರು ಪಟ್ಟಿರುವ ಶ್ರಮವನ್ನು ನಾವೆಲ್ಲರೂ ನೆನೆಯಲೇಬೇಕು ಎಂದು ಕರ್ನಾಟಕ ವಿಶ್ವಕರ್ಮ ಸಾಹಿತ್ಯ ಕಲಾ ಅಕಾಡೆಮಿಯ ಗೌರವ ಅಧ್ಯಕ್ಷ ಎ.ಸಿ.ಮಹಲಿಂಗಾಚಾರ್ ಅಭಿಮಾನಪಟ್ಟರು.

ರವಿವಾರ ಕರ್ನಾಟಕ ವಿಶ್ವಕರ್ಮ ಸಾಹಿತ್ಯ ಕಲಾ ಅಕಾಡೆಮಿ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ವೌಖಿಕ ಪರಂಪರೆ ಮಂಟೆಸ್ವಾಮಿ-ಸಿದ್ಧಪ್ಪಾಜಿ ಮಹಾಕಾವ್ಯ ಕುರಿತು ಆಯೋಜಿಸಿದ್ದ ಉಪನ್ಯಾಸ ಗೋಷ್ಟಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಂಟೆಸ್ವಾಮಿ-ಸಿದ್ಧಪ್ಪಾಜಿ ಪರಂಪರೆಯು ಜನಸಮಾನ್ಯರ ಬದುಕಿನ ರೀತಿಯಾಗಿದೆ. ಪರಂಪರೆಯ ಪಟ್ಟಿಗೆ ಕೇವಲ ರಾಜ-ಮಹಾರಾಜರ ಹಾಗೂ ಉನ್ನತ ವರ್ಗದ ಬದುಕು ಮಾತ್ರ ಆಗುವುದಿಲ್ಲ. ಪರಿಸರಕ್ಕೆ ಪೂರಕವಾಗಿ ಬದುಕುವ ಜನಸಾಮಾನ್ಯರ ಜೀವನ ವಿಧಾನವು ಮುಖ್ಯವೆ ಎಂಬುದನ್ನು ದಾಖಲಿಸಿದ್ದು ಮಂಟೆಸ್ವಾಮಿ-ಸಿದ್ಧಪ್ಪಾಜಿ ಪರಂಪರೆಯಾಗಿದೆ ಎಂದು ಅವರು ಹೇಳಿದರು.

ಚಾಮರಾಜನಗರ, ಕೊಳ್ಳೆಗಾಲ, ಮಳವಳ್ಳಿ ಸುತ್ತಮುತ್ತ ಭಾಗಗಳಲ್ಲಿ ಮಂಟೆಸ್ವಾಮಿ ಹಾಗೂ ಸಿದ್ಧಪ್ಪಾಜಿ ಪರಂಪರೆ ಜೀವಂತವಾಗಿದೆ. ಆದರೆ, ಈ ಪರಂಪರೆ ಈ ನೆಲದ ನೈಜ ಇತಿಹಾಸವಾಗಿದೆ. ಹೀಗಾಗಿ ಇದನ್ನು ಯುವ ತಲೆಮಾರಿಗೆ ತಲುಪಿಸುವಂತಹ ಜವಾಬ್ದಾರಿ ನಮ್ಮೆಲ್ಲರದು ಎಂದು ಅವರು ಹೇಳಿದರು.

ಈ ವೇಳೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಪ್ರೇಮ್ ಕುಮಾರ್, ಹಿರಿಗ ರಂಗಕರ್ಮಿ ಪ್ರೊ.ಎಲ್.ಎನ್.ಮುಕುಂದರಾಜು, ಹಿರಿಯ ಲೇಖಕಿ ಪ್ರೊ.ಎನ್.ವಿ.ಅಂಬಾಮಣಿ ಉಪಸ್ಥಿತರಿದ್ದರು. ಎಚ್.ಎಂ.ಮಯಬ್ರಹ್ಮಾಚಾರ್ ಸ್ವಾಗತ ಕೋರಿದರು. ಡಾ.ಬಿ.ಎಲ್.ನಂದಾ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News