4 ವರ್ಷಗಳಲ್ಲಿ 3 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ ಕೇಂದ್ರ

Update: 2018-10-01 06:37 GMT

ಆರ್ ಬಿಐ ಅಂಕಿಅಂಶಗಳಿಂದ ಬಹಿರಂಗ

ಹೊಸದಿಲ್ಲಿ, ಅ.1: ದೇಶದ 21 ಸಾರ್ವಜನಿಕ ರಂಗದ ಬ್ಯಾಂಕುಗಳು ಎಪ್ರಿಲ್ 2014 ಹಾಗೂ ಎಪ್ರಿಲ್ 2018ರ ನಡುವೆ 3,16,500 ಕೋಟಿ ರೂ.ಗಳಷ್ಟು ಸಾಲದ ಹಣವನ್ನು  ಮನ್ನಾ ಮಾಡಿದ್ದು,  ಇದೇ ಅವಧಿಯಲ್ಲಿ ಈ ಬ್ಯಾಂಕುಗಳು ಸಂಚಿತ ಆಧಾರದಲ್ಲಿ (ಕ್ಯುಮುಲೇಟಿವ್ ಬೇಸಿಸ್) ಮನ್ನಾ ಮಾಡಲಾಗಿದ್ದ 44,900 ಕೋಟಿ ರೂ.ಗಳಷ್ಟು ಸಾಲ ವಸೂಲಾತಿ ಮಾಡಿವೆ. ವಸೂಲಾತಿ ಮಾಡಲಾದ ಸಾಲದ ಮೊತ್ತ ಮನ್ನಾ ಮಾಡಲಾದ ಮೊತ್ತದ ಏಳನೇ ಒಂದಂಶಕ್ಕಿಂತಲೂ ಕಡಿಮೆಯಾಗಿದೆ ಎಂಬುದು ಆರ್ ಬಿಐ ಅಂಕಿಅಂಶಗಳಿಂದ ತಿಳಿದು ಬರುತ್ತದೆ.

 ಕಳೆದ ನಾಲ್ಕು ವರ್ಷಗಳಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳು ಮನ್ನಾ ಮಾಡಿದ ಅನುತ್ಪಾದಕ ಸಾಲಗಳ ಮೊತ್ತವು ಸರಕಾರವು ಆರೋಗ್ಯ, ಶಿಕ್ಷಣ, ಸಾಮಾಜಿಕ ಸುರಕ್ಷಾ ಕ್ಷೇತ್ರಗಳಿಗೆ 2018-19ರಲ್ಲಿ ಬಜೆಟಿನಲ್ಲಿ ಮೀಸಲಿರಿಸಿದ ಮೊತ್ತವಾದ 1.38 ಲಕ್ಷ ಕೋಟಿ ರೂ.ಗಿಂತ ನಾಲ್ಕು ಪಟ್ಟು ಅಧಿಕವಾಗಿದೆ. ಇದರ ಹೊರತಾಗಿ ಎಪ್ರಿಲ್ 2014 ಹಾಗೂ ಎಪ್ರಿಲ್ 2018ರ ನಡುವೆ 21 ಸಾರ್ವಜನಿಕ ರಂಗದ ಬ್ಯಾಂಕುಗಳು ಮನ್ನಾ ಮಾಡಿದ ಸಾಲದ ಪ್ರಮಾಣವು  ಅದಕ್ಕಿಂತ ಹಿಂದಿನ ಹತ್ತು ವರ್ಷಗಳಲ್ಲಿ ಮನ್ನಾ ಮಾಡಲಾದ ಸಾಲಗಳ ಪ್ರಮಾಣಕ್ಕಿಂತ ಶೇ.166ರಷ್ಟು ಅಧಿಕವಾಗಿದೆ.

ಸಂಸದೀಯ ಹಣಕಾಸು ಸ್ಥಾಯಿ ಸಮಿತಿಗೆ ರಿಸರ್ವ್ ಬ್ಯಾಂಕ್ ಸಲ್ಲಿಸಿದ ಅಂಕಿ ಅಂಶಗಳ ಪ್ರಕಾರ  ಮಾರ್ಚ್ 2018ಕ್ಕೆ ಅಂತ್ಯಗೊಂಡ ನಾಲ್ಕು ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳ ವಸೂಲಾತಿ ಪ್ರಮಾಣ ಶೇ. 14.2ರಷ್ಟಿದ್ದು  ಇದು ಖಾಸಗಿ ಬ್ಯಾಂಕುಗಳ ವಸೂಲಾತಿ ಪ್ರಮಾಣವಾದ ಶೇ.5ಕ್ಕಿಂತ ಮೂರು ಪಟ್ಟು ಅಧಿಕವಾಗಿದೆ.

ಒಟ್ಟು ಬ್ಯಾಂಕಿಂಗ್ ಆಸ್ತಿಗಳ ಶೇ.70ರಷ್ಟು ಮೊತ್ತ  21 ಸಾರ್ವಜನಿಕ ರಂಗದ ಬ್ಯಾಂಕುಗಳ ಬಳಿಯಿರುವಾಗ ಈ ಬ್ಯಾಂಕುಗಳು ಭಾರತೀಯ ಬ್ಯಾಂಕಿಂಗ್ ವಲಯದ ಒಟ್ಟು ಅನುತ್ಪಾದಕ ಸಾಲ ಅಥವಾ ಎನ್‍ಪಿಎಗಳ ಪೈಕಿ ಸುಮಾರು ಶೇ.86ರಷ್ಟು ಎನ್‍ಪಿಎಗಳಿಗೆ ಕಾರಣವಾಗಿವೆ.

ಸರಕಾರವು ತೀವ್ರ ಒತ್ತಡದಲ್ಲಿರುವ ಸಾರ್ವಜನಿಕ ರಂಗದ ಬ್ಯಾಂಕುಗಳಿಗೆ  ಸಹಾಯ ಮಾಡಲು ಈಕ್ವಿಟಿ ಬಂಡವಾಳ ಸಹಿತ ಇತರ ಕ್ರಮಗಳ ಮೂಲಕ ಪ್ರಯತ್ನಿಸುತ್ತಿರುವ ಹೊರತಾಗಿ ಬ್ಯಾಂಕುಗಳ ಅನುತ್ಪಾದಕ ಸಾಲದ ಪ್ರಮಾಣ 2011ರಿಂದ ಏರಿಕೆಯಾಗುತ್ತಲೇ ಇದೆ. 2014ರ ತನಕ ಎನ್‍ಪಿಎ ಪ್ರಮಾಣ ಸರಿಸುಮಾರು ಒಂದೇ ರೀತಿಯಾಗಿದ್ದರೂ ನಂತರ, ಮುಖ್ಯವಾಗಿ 2015-16ರಲ್ಲಿ ಹಠಾತ್ ಏರಿಕೆ ಕಂಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2014ರಲ್ಲಿ ಬ್ಯಾಂಕುಗಳ ಅಸೆಟ್ ಕ್ವಾಲಿಟಿ ರಿವೀವ್ (ಸ್ವತ್ತು ಗುಣಮಟ್ಟ ಪರಿಶೀಲನೆ) ನಡೆಸಿದ್ದರಿಂದ ಅಲ್ಲಿಯ ತನಕ ಬ್ಯಾಂಕಿನ ಸ್ವತ್ತು ಎಂದು ತಿಳಿಯಲ್ಪಟ್ಟಿದ ಸಾಲಗಳನ್ನು ಎನ್‍ಪಿಎ  ಎಂದು ಗುರುತಿಸಲಾಯಿತು. 2004 ಹಾಗೂ 2014ರ ನಡುವೆ ಸಾರ್ವಜನಿಕ ರಂಗದ ಬ್ಯಾಂಕುಗಳ ಅನುತ್ಪಾದಕ ಸಾಲಗಳು ರೂ 1.9 ಲಕ್ಷ ಕೋಟಿಗಿಂತ ಸ್ವಲ್ಪ ಕಡಿಮೆಯಿದ್ದರೆ, ಈ ಮೊತ್ತದ ಅರ್ಧಕ್ಕಿಂತ ಹೆಚ್ಚನ್ನು 2013 ಹಾಗೂ 2015ರ ನಡುವೆ ಮನ್ನಾ ಮಾಡಲಾಗಿತ್ತು.

ತದ ನಂತರ ಎನ್‍ಪಿಎಗಳು 2014-15ರಲ್ಲಿ ಶೇ 4.62ರಷ್ಟು ಏರಿಕೆ ಕಂಡು 2015-16ರಲ್ಲಿ ಶೇ 7.79ರಷ್ಟಾಗಿ  ಹೆಚ್ಚಾಗಿ  ಡಿಸೆಂಬರ್  2017ರೊಳಗಾಗಿ  ಶೇ 10.41ರಷ್ಟು ಏರಿಕೆ ಕಂಡಿವೆ. ಅಸೆಟ್ ಕ್ವಾಲಿಟಿ ರಿವೀವ್ ನಿಂದಾಗಿ  2017ರ ಅಂತ್ಯದೊಳಗಾಗಿ  ಸಾರ್ವಜನಿಕ ರಂಗದ ಬ್ಯಾಂಕುಗಳ ಒಟ್ಟು ಎನ್‍ಪಿಎಗಳು ಸುಮಾರು ರೂ 7.70 ಲಕ್ಷ ಕೋಟಿಯಷ್ಟಿತ್ತು.

2017ರಲ್ಲಿ ಆರ್ ಬಿಐ ಆಂತರಿಕ ಸಲಹಾ ಸಮಿತಿಯನ್ನೂ ರಚಿಸಿ ಇನ್ಸಾಲ್ವೆನ್ಸಿ ಎಂಡ್ ಬ್ಯಾಂಕ್ರಪ್ಟ್ಸಿ (ಐಬಿಸಿ) ದಿವಾಳಿತನ  ನಿಯಮಗಳಂತೆ ಪ್ರಕರಣಗಳನ್ನು ಗುರುತಿಸಲು ಕ್ರಮ ಕೈಗೊಂಡಿತ್ತು,. ಇದರ ಶಿಫಾರಸಿನಂತೆ  41 ಖಾತೆಗಳನ್ನು ಗುರುತಿಸಲಾಗಿತ್ತು. ಒಟ್ಟು ಎನ್‍ಪಿಎಗಳ ಪೈಕಿ ರೂ 1.75 ಲಕ್ಷ ಕೋಟಿಯನ್ನೊಳಗೊಂಡ 12 ಖಾತೆಗಳು  ಜೂನ್ 2017ರಿಂದ ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯುನಲ್ ಮುಂದಿವೆ. ಎರಡನೇ ಸುತ್ತಿನಲ್ಲಿ ಇದು ಇನ್ನೊಂದು 28-29 ಖಾತೆಗಳಿಗೆ ವಿಸ್ತರಿಸಲ್ಪಟ್ಟು ಒಟ್ಟು ಮೊತ್ತ ರೂ 90,000 ಕೋಟಿಯಷ್ಟಾಗಿತ್ತು.

ಸಾಲಗಳನ್ನು  ಭಾಗಶಃ ಅಥವಾ  ಪೂರ್ಣವಾಗಿ ಮನ್ನಾ ಮಾಡುವ ನಿರ್ಧಾರವನ್ನು ಬ್ಯಾಂಕುಗಳೇ ವಿವಿಧ ಮಾನದಂಡಗಳ ಆಧಾರದಲ್ಲಿ  ತಮ್ಮ ಬ್ಯಾಲೆನ್ಸ್ ಶೀಟ್ ಗಳನ್ನು ಆರೋಗ್ಯವಾಗಿರಿಸಲು ಕೈಗೊಂಡ ನಿರ್ಧಾರವಾಗಿತ್ತು ಎಂದು ಹಿರಿಯ ಬ್ಯಾಂಕ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೆಲವೊಮ್ಮೆ  ಲಭ್ಯ ತೆರಿಗೆ ಪ್ರಯೋಜನಗಳು ಹಾಗೂ  ಬ್ಯಾಂಕುಗಳ ಎನ್‍ಪಿಎ ಅನುಪಾತವನ್ನು ಕಾಪಾಡಿಕೊಂಡು ಬರಲು ಕೂಡ ಇಂತಹ ಕ್ರಮ ಕೈಗೊಳ್ಳಲಾಗುತ್ತದೆ.

ತಾಂತ್ರಿಕವಾಗಿ ಮನ್ನಾ ಮಾಡಲಾದ ಸಾಲ ಖಾತೆಗಳೆಂದರೆ  ಕೇವಲ ಬ್ಯಾಂಕ್ ದಾಖಲೆಗಳಲ್ಲಿ ಮಾತ್ರ ಸಾಲ ಮನ್ನಾ ಮಾಡಲಾಗಿದ್ದು ವಸೂಲಾತಿ ಹಕ್ಕನ್ನು ಬಿಟ್ಟು ಕೊಡಲಾಗಿರುವುದಿಲ್ಲ. ಇಂತಹ ಪ್ರಕರಣಗಳಲ್ಲಿ ವಸೂಲಾತಿಗೆ ಪ್ರಯತ್ನಗಳು ಎಂದಿನಂತೆ ಮುಂದುವರಿಯುತ್ತವೆ ಎಂಬ ಮಾಹಿತಿಯೂ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News