ಇಂಜಿನಿಯರ್‌ಗಳಿಗಿಂತ ಗಾರೆ ಕೆಲಸದವರು ಚೆನ್ನಾಗಿ ಕೆಲಸ ಮಾಡುತ್ತಾರೆ: ನೂತನ ಬಿಬಿಎಂಪಿ ಮೇಯರ್ ಗಂಗಾಂಬಿಕೆ

Update: 2018-10-01 16:58 GMT

ಬೆಂಗಳೂರು, ಅ.1: ನಗರದಲ್ಲಿ ಮಳೆಗಾಲದ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಿರುವ ಪಾಲಿಕೆ ಇಂಜಿನಿಯರ್‌ಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನೂತನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಇಂಜಿನಿಯರ್‌ಗಳಿಗಿಂತ ಗಾರೆ ಕೆಲಸದವರೇ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಸೋಮವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪದಗ್ರಹಣ ಸ್ವೀಕರಿಸಿದ ಬಳಿಕ ಸಸಿಗಳನ್ನು ನೆಟ್ಟು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ರಸ್ತೆ ಗುಂಡಿ ಮುಚ್ಚಿರುವ ಕೆಲಸ ನೋಡಿದರೆ ನನಗೆ ಬೇಜಾರಾಗುತ್ತೆ. ಕೂಡಲೇ ವೈಜ್ಞಾನಿಕ ವಿಧಾನದಲ್ಲಿ ಸಮರ್ಪಕವಾಗಿ ಗುಣಮಟ್ಟದಿಂದ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ನನ್ನ ಅವಧಿಯಲ್ಲಿ ಕಳಪೆ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದು ಖಡಕ್ ಸೂಚನೆ ನೀಡಿದರು.

ಅಧಿಕಾರಿಗಳು ವೈಜ್ಞಾನಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ. ನಾನು ಮೊದಲು ಪರಿಶೀಲನೆ ಮಾಡುತ್ತೇನೆ. ಅದರಲ್ಲಿ ಕಳಪೆ ಕಾಮಗಾರಿಯಾಗಿದ್ದರೆ ತೆರವುಗೊಳಿಸಿ ಪುನಃ ಮುಚ್ಚಿಸಲಾಗುವುದು. ನಮ್ಮ ಇಂಜಿನಿಯರ್‌ಗಳು ಕೇವಲ ಸರ್ಟಿಫಿಕೇಟ್ ತೆಗೆದುಕೊಂಡಿದ್ದಾರೆ. ಆದರೆ, ನಮ್ಮ ಗಾರೆ ಕೆಲಸದವರು ಇವರಿಗಿಂತ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದರು.

ನಗರವನ್ನು ಹಸಿರುಮಯವನ್ನಾಗಿಸುವ ನಿಟ್ಟಿನಲ್ಲಿ ಪ್ರತಿ ವಾರ್ಡ್‌ನಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಆರಂಭ ಮಾಡಲಾಗುತ್ತದೆ. ಮುಂದಿನ ನ.1 ರಿಂದ ನಗರದಾದ್ಯಂತ ಮರಗಳ ಗಣತಿ ಆರಂಭ ಮಾಡಲಾಗುವುದು. ಮುಂದಿನ ಒಂದು ತಿಂಗಳಲ್ಲಿ ಎಲ್ಲಿ ಎಷ್ಟು ಮರಗಳಿವೆ, ಎಷ್ಟು ರೋಗಗ್ರಸ್ಥ ಮರಗಳಿವೆ, ವಯಸ್ಸಾದ ಮರಗಳು ಹಾಗೂ ಶಕ್ತಿ ಕಳೆದುಕೊಂಡಿರುವ ಮರಗಳಿವೆ ಎಂಬ ವರದಿ ನೀಡಬೇಕು ಎಂದು ಪಾಲಿಕೆ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿನ ಸ್ವಚ್ಛತೆ ತೃಪ್ತಿ ತಂದಿಲ್ಲ. ಹೀಗಾಗಿ, ಹೈಕೋರ್ಟ್ ಮಧ್ಯಪ್ರವೇಶ ಮಾಡುವಂತಾಗಿದೆ. ಆದುದರಿಂದಾಗಿ ನಗರದಲ್ಲಿ ಸ್ವಚ್ಛತೆ ಕಾಪಾಡಲು ನಾನು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತೇನೆ. ತ್ಯಾಜ್ಯ ವಿಚಾರವಾಗಿ ಹೊಸ ಟೆಂಡರ್ ಕರೆಯಬೇಕು. ಆ ಸಂಬಂಧಪಟ್ಟಂತೆ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಬ್ಲಾಕ್ ಸ್ಪಾಟ್ ಆಗಿರುವ ಕಡೆ ಗಮನ ಹರಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ , ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್ ಸೇರಿದಂತೆ ಪಕ್ಷಾತೀತವಾಗಿ ಸದಸ್ಯರು, ಮುಖಂಡರು ಶುಭ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News