×
Ad

ಮಸೀದಿಗಳ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ದುರದೃಷ್ಟಕರ: ಎಸ್‌ಡಿಪಿಐ ರಾಷ್ಟ್ರಾಧ್ಯಕ್ಷ ಎಂ.ಕೆ.ಫೈಝಿ

Update: 2018-10-01 22:40 IST

ಬೆಂಗಳೂರು, ಅ.1: ನಮಾಝ್ ಮಾಡಲು ಮಸೀದಿಗಳು ಇಸ್ಲಾಮಿನಲ್ಲಿ ಅನಿವಾರ್ಯವೇ ಎಂಬ ಕುರಿತು ಇತ್ತೀಚೆಗೆ ಸುಪ್ರೀಂ ಕೋರ್ಟಿನಲ್ಲಿ ತ್ರಿಸದಸ್ಯ ಪೀಠದಲ್ಲಿ 2-1 ಬಹುಮತದ ತೀರ್ಪು ಪ್ರಕಟವಾಗಿದ್ದು, ಅದರಲ್ಲಿ ವಿಸ್ತೃತ ನ್ಯಾಯಾಲಯದಲ್ಲಿ ತೀರ್ಮಾನಿಸುವ ಅಗತ್ಯವಿಲ್ಲ ಎಂದಿರುವುದು ಅತ್ಯಂತ ದುರದೃಷ್ಟಕರ ಹಾಗೂ ದುರುದ್ದೇಶಪೂರಿತ ಎಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಪ್ರತಿಕ್ರಿಯಿಸಿದ್ದಾರೆ.

ಈ ಸಂಬಂಧ ಪ್ರತಿಕಾ ಹೇಳಿಕೆ ನೀಡಿರುವ ಅವರು, ಎಲ್ಲ ಧರ್ಮಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರಾರ್ಥನಾ ಮಂದಿರಗಳು ಅಗತ್ಯ ಅನಿವಾರ್ಯವಾಗಿದೆ. ಪ್ರಾರ್ಥನಾ ಮಂದಿರವನ್ನು ಹೊಂದುವುದು ಎಲ್ಲ ಧರ್ಮದ ಜನರ ಹಕ್ಕಾಗಿದ್ದು ಇದರಲ್ಲಿ ಧರ್ಮ ನಿಷ್ಠೆಯ ಜನರು ಒಂದು ಸೇರಿ ಸಂತೃಪ್ತಿ, ಭಯ ಭಕ್ತಿಯಿಂದ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ಹೇಳಿದ್ದಾರೆ. ಮಸೀದಿಗಳು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಇಸ್ಲಾಮಿನ ಪ್ರಮುಖ ಅಂಗವಾಗಿದೆ. ಮುಸ್ಲಿಮರು ದಿನಕ್ಕೆ ಐದು ಸಲ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಇಸ್ಲಾಮಿನ ಪ್ರಾರಂಭ ಕಾಲದಿಂದಲೂ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಇಸ್ಲಾಮಿನ ಎಲ್ಲ ಮೂಲ ತತ್ವ ಸಿದ್ಧಾಂತಗಳು ನಿರ್ವಿವಾದವಾಗಿ ಮಸೀದಿಗಳು ಇಸ್ಲಾಮಿನ ಹಾಗೂ ಮುಸ್ಲಿಂ ಸಮುದಾಯದ ಅವಿಭಾಜ್ಯ ಅಂಗವಾಗಿದೆ ಎಂದು ಅವರು ತಿಳಿಸಿದ್ದಾರೆ.

ಒಂದು ವೇಳೆ ಮಸೀದಿಗಳು ನಮಾಝ್ ಮಾಡಲು ಅನಿವಾರ್ಯವಿಲ್ಲದಿದ್ದರೆ ಮಂದಿರಗಳೂ ಸಹ ಪೂಜೆ ಮಾಡಲು ಅನಿವಾರ್ಯವಾಗುವುದಿಲ್ಲ. ಹೆಚ್ಚಿನ ಹಿಂದೂ ಸಹೋದರರು ತನ್ನ ಮನೆಗಳಲ್ಲೆ ಪೂಜೆ ಸಲ್ಲಿಸುತ್ತಾರೆ. ಈ ಬಗ್ಗೆ ವಿಸ್ತೃತ ಕೋರ್ಟಿನ ರಚನೆಯ ನಿರಾಕರಣೆ ಮತ್ತು 1994ರ ತೀರ್ಪನ್ನು ಮರು ಪರಿಶೀಲಿಸಬೇಕೆಂಬ ವಾದಕ್ಕೆ ಉತ್ತರವಾಗಿ ನಮಾಝ್ ಮಾಡಲು ಮಸೀದಿಗಳು ಇಸ್ಲಾಂ ಧರ್ಮದಲ್ಲಿ ಅನಿವಾರ್ಯವಲ್ಲ ಎಂದು ತೀರ್ಪಿತ್ತಿರುವುದು ತಿರಸ್ಕಾರವನ್ನು ಧ್ವನಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಧರ್ಮ, ವ್ಯಾಪಾರ, ತಂತ್ರಜ್ಞಾನ, ಔಷಧ ಅಥವಾ ವೈದ್ಯಕೀಯ ಇತ್ಯಾದಿ ಏನೇ ಕ್ಷೇತ್ರಗಳಿರಲಿ ನ್ಯಾಯಾಧೀಶರಿಗೆ ಆಯಾ ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಇಲ್ಲದಿದ್ದಾಗ ಈ ತರಹದ ತೀರ್ಪುಗಳು ಬರುವುದು ಸಹಜವಾಗಿರುತ್ತದೆ. ಇತರ ಯಾವುದೇ ಸಮುದಾಯಗಳಂತಲ್ಲದೆ, ಮುಸ್ಲಿಮರು ಒಂದಲ್ಲ ಎರಡಲ್ಲ, ಮೂರಲ್ಲ, ಐದು ಬಾರಿ ಪ್ರತಿನಿತ್ಯ ಪ್ರಾರ್ಥನೆಯನ್ನು ಸಲ್ಲಿಸಲು ಮಸೀದಿಗೆ ತೆರಳುತ್ತಾರೆ ಎಂದು ಇಡೀ ಜಗತ್ತಿಗೆ ತಿಳಿದಿದೆ ಎಂದು ಫೈಝಿ ತಿಳಿಸಿದ್ದಾರೆ.

ತಮ್ಮ ಮನೆಗಳಲ್ಲಿ ನಮಾಝ್ ಮಾಡುವುದಕ್ಕಿಂತ ಮಸೀದಿಗಳಲ್ಲಿ ನಮಾಝ್ ಸಲ್ಲಿಸಿರಿ ಎಂದು ಇಸ್ಲಾಂ ಆದೇಶಿಸಿದೆ. ಈ ಹಿಂದಿನ ನಿರ್ಣಯವು ಸತ್ಯಕ್ಕೆ ವಿರುದ್ಧವಾಗಿದೆಯೆಂದು ತಿಳಿದ ಬಳಿಕವೂ ನ್ಯಾಯಾಧೀಶರು ನ್ಯಾಯದ ತಪ್ಪುತೀರ್ಮಾನ ಮಾಡುವಲ್ಲಿ ಹಿಂಜರಿಯಲಿಲ್ಲ ಎಂದು ಇಲ್ಲಿ ಸ್ಪಷ್ಟವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಧ್ವಂಸಗೈಯ್ಯಲ್ಪಟ್ಟ ಬಾಬರಿ ಮಸೀದಿಯನ್ನು ಇಸ್ಲಾಂ ಧರ್ಮದ ನಂಬಿಕೆಗೆ ಅನುಸಾರ ಅದೇ ಸ್ಥಳದಲ್ಲಿ ಪುನನಿರ್ಮಿಸುವುದು ಅತ್ಯಗತ್ಯ ಎನ್ನುವುದಕ್ಕೆ ವಿರುದ್ಧವಾಗಿ ನೀಡಿದ ಮುನ್ನುಡಿಯೇ ಈ ತೀರ್ಮಾನವಾಗಿದೆ ಎಂದು ಫೈಝಿ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News