ಪ್ರೀತಿಸುವುದಾಗಿ ಬೆದರಿಸಿ, ಕಿರುಕುಳ ಆರೋಪ: ಫೇಸ್‌ಬುಕ್ ಪ್ರಿಯಕರನ ಸೆರೆ
ಬೆಂಗಳೂರು, ಅ.1: ಫೇಸ್‌ಬುಕ್ ಮೂಲಕ ಯುವತಿಯನ್ನು ಪರಿಚಯಿಸಿಕೊಂಡು ಪ್ರೀತಿಸುವುದಾಗಿ ಬೆದರಿಸಿ, ಕಿರುಕುಳ ನೀಡುತ್ತಿದ್ದ ಆರೋಪದಡಿ ಮುಂಬೈ ಮೂಲದ ಯುವಕನೊಬ್ಬನನ್ನು ಸೈಬರ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಮೂಲಕ ಖಾರ್ ಪಶ್ಚಿಮ ನಿವಾಸಿ ನಯನ್ ಜೈ ಕಿಷನ್(30) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಫೆ.12ರಂದು ಕೊಲ್ಕತ್ತ ಮೂಲದ ಮಹಿಳೆಯೊಬ್ಬಾಕೆ, ಈ ಹಿಂದೆ ಹಳೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆರೋಪಿ ನಯನ್‌ನನ್ನು ಪರಿಚಯ ಮಾಡಿಕೊಂಡಿದ್ದಳು. ತದನಂತರ, ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿಕೊಂಡು, ವಾಸವಾಗಿದ್ದಳು. ಆದರೆ, ಆರೋಪಿ ಫೇಸ್‌ಬುಕ್ ಮೂಲಕ ಪರಿಚಯ ಮಾಡಿಕೊಂಡು ದಿನನಿತ್ಯ ಸಾಮಾಜಿಕ ಜಾಲತಾಣಗಳ ಮೂಲಕ ಪ್ರೀತಿ ಮಾಡುವಂತೆ ಬೆದರಿಸಿ, ಕಿರುಕುಳ ನೀಡುತ್ತಿದ್ದ. ಈ ಸಂಬಂಧ ದೂರು ದಾಖಲಿಸಿಕೊಂಡ ಸಿಸಿಬಿ ಘಟಕದ ಸೈಬರ್ ಠಾಣಾ ಪೊಲೀಸರು, ಆರೋಪಿ ನಯನ್‌ನನ್ನು ಮುಂಬೈನಲ್ಲಿ ರವಿವಾರ ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆ ನಂತರ ಆರೋಪಿಯನ್ನು 1ನೆ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ, ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.