×
Ad

ಆಸರೆ ಕಳೆದುಕೊಂಡ ಮಹಿಳೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನೆರವು

Update: 2018-10-01 23:04 IST

ಬೆಂಗಳೂರು, ಅ.1: ಪತಿ ಕಳೆದುಕೊಂಡು ನಿರಾಶ್ರಿತಳಾದ ಮಹಿಳೆಗೆ ಮುಖ್ಯಮಂತ್ರಿ ನೆರವು ನೀಡಿ ಸ್ಥೈರ್ಯ ತುಂಬಿದ ಮಾನವೀಯ ಘಟನೆಗೆ ಗೃಹ ಕಚೇರಿ ಕೃಷ್ಣಾ ಸಾಕ್ಷಿಯಾಯಿತು.

ಕೊಲೆಯಾದ ಗಂಡನ ಆಸರೆ ಕಳೆದುಕೊಂಡು ಎರಡು ಮಕ್ಕಳ ಹೊಣೆ ನಿಭಾಯಿಸುವುದು ಹೇಗೆಂದು ದಿಕ್ಕು ತೋಚದಂತಾಗಿದ್ದ ಚನ್ನಪಟ್ಟಣ ತಾಲ್ಲೂಕಿನ ಗೃಹಿಣಿ ಶಿಲ್ಪಶ್ರೀಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನೆರವಿನ ಹಸ್ತ ಚಾಚಿದ್ದಾರೆ.

ಇಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಶಿಲ್ಪಶ್ರೀ, ತಾವು ಗೃಹಿಣಿಯಾಗಿದ್ದು, ಮನೆನಡೆಸಲು, ಮಕ್ಕಳ ವಿದ್ಯಾಭ್ಯಾಸಕ್ಕೆ ಏನು ಮಾಡಬೇಕೆಂದೇ ತೋಚುತ್ತಿಲ್ಲವೆಂದು ಅಳಲು ತೋಡಿಕೊಂಡರು. ಶಿಲ್ಪಶ್ರೀಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿಗಳು ಎರಡು ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಲ್ಲದೆ,  ಕೂಡಲೇ ರಾಮನಗರ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಮಕ್ಕಳಿಗೆ ಸರ್ಕಾರದ ವಸತಿ ಶಾಲೆಯಲ್ಲಿ ಪ್ರವೇಶ ದೊರಕಿಸುವಂತೆ ಸೂಚಿಸಿದರು.

ಕಾರು ಚಾಲಕರಾಗಿದ್ದ ಪತಿ ನಾಗರಾಜು ಅವರು ಆಗಸ್ಟ್ 27 ರಂದು ಶಿವಮೊಗ್ಗಕ್ಕೆ ಬಾಡಿಗೆಗೆಂದು ಹೋದವರು ನಾಪತ್ತೆಯಾಗಿದ್ದರು. ಪತಿ ಕಾಣೆಯಾಗಿರುವ ಬಗ್ಗೆ ಶಿಲ್ಪಶ್ರೀ ದೂರು ನೀಡಿದ್ದರು. ಸೆಪ್ಟೆಂಬರ್ 6 ರಂದು ಅವರು ಕೊಲೆಯಾಗಿರುವುದು ತಿಳಿದುಬಂದಿತ್ತು.

ಇದೇ ಸಂದರ್ಭದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಾಲಕ ರೋಹಿತ್ಗೆ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ. ಚೆಕ್ ಅನ್ನು ಮುಖ್ಯಮಂತ್ರಿಗಳು ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News