ಇಲ್ಲಿಯೂ ಆ ಘಟನೆ ನಡೆಯದಿರಲಿ

Update: 2018-10-01 18:31 GMT

ಮಾನ್ಯರೇ,

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಅಂಬೇಡ್ಕರ್ ಸ್ಟೂಡೆಂಟ್‌ಅಸೋಸಿಯೇಶನ್ ಕಟ್ಟಿಕೊಂಡು ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸುತಿದ್ದ ರೋಹಿತ್‌ವೇಮುಲಾ ಎಂಬ ವಿದ್ಯಾರ್ಥಿಯನ್ನು ವಿದ್ಯಾರ್ಥಿ ನಿಲಯದಿಂದ ಹೊರ ಹಾಕಲಾಗಿತ್ತು. ಇದರಿಂದ ನೊಂದ ಅವರು ಕೊಠಡಿಯಲ್ಲಿ ಪತ್ರ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಮೈಸೂರಿನ ವಿಶ್ವವಿದ್ಯಾನಿಲಯದಲ್ಲಿ ಕೂಡಾ ಅಂತಹದ್ದೇ ಪ್ರಕರಣವೊಂದು ನಡೆಯುವ ಭಯವಿದೆ.

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ‘ಅಂಬೇಡ್ಕರ್ ಸ್ಟೂಡೆಂಟ್‌ಅಸೋಸಿಯೇಷನ್’ ಸಂಘಟನೆ ಇರುವಂತೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟ ಇದೆ. ಈ ಸಂಘಟನೆಯು ನಿರಂತರವಾಗಿ 25 ವರ್ಷಗಳಿಂದಲೂ ಇದೆ. ಇದು ವಿಶ್ವವಿದ್ಯಾನಿಲಯದಲ್ಲಿ ಆಡಳಿತಾತ್ಮಕ ಲೋಪದೋಷಗಳನ್ನು ಪ್ರಶ್ನಿಸುವುದರ ಜೊತೆಗೆ ವಿದ್ಯಾರ್ಥಿಗಳಿಗಾಗುವ ಅನ್ಯಾಯದ ವಿರುದ್ಧ ನ್ಯಾಯಯುತವಾಗಿ ಕೆಲಸ ಮಾಡುತ್ತಿದೆ. 2013ನೇ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಎಂ.ಎ. ಇತಿಹಾಸ ವಿಭಾಗಕ್ಕೆ ಪ್ರವೇಶಾತಿ ಪಡೆದ ಮಹೇಶ್ ಸೋಸ್ಲೆ ಎಂಬ ವಿದ್ಯಾರ್ಥಿಯು ದಲಿತ ವಿದ್ಯಾರ್ಥಿ ಒಕ್ಕೂಟದ ಗೌರವಾಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆಗಿರುವ ಅನನುಕೂಲ ಮತ್ತು ಇನ್ನಿತರ ಲೋಪದೋಷಗಳನ್ನು ಎತ್ತಿ ಹಿಡಿದಿದ್ದರು.

ಎಂ.ಎ.ಯಲ್ಲಿ ಚಿನ್ನದ ಪದಕ ಪಡೆದು ಹೊರಬಂದ ಈ ವಿದ್ಯಾರ್ಥಿ ಇಂದು ಅದೇ ಇತಿಹಾಸ ವಿಭಾಗದಲ್ಲಿ ಪಿಎಚ್.ಡಿ (ಸಂಶೋಧನೆ)ಗೆ ಪ್ರವೇಶ ಪಡೆದಿರುತ್ತಾರೆ. ಈ ವಿದ್ಯಾರ್ಥಿಗೆ ನಿಲಯ ಪ್ರವೇಶ ಕೊಟ್ಟರೆ ವಿಶ್ವವಿದ್ಯಾನಿಲಯದ ಲೋಪದೋಷಗಳನ್ನು ಎತ್ತಿ ಹಿಡಿಯುತ್ತಾರೆ ಮತ್ತು ವಿದ್ಯಾರ್ಥಿಗಳನ್ನು ಸಂಘಟಿಸುತ್ತಾರೆ ಎನ್ನುವ ನೆಪವೊಡ್ಡಿ ವಿಶ್ವವಿದ್ಯಾನಿಲಯದ ಸದರಿ ಕುಲಸಚಿವರು ಇವರನ್ನು ಕಪ್ಪುಪಟ್ಟಿಗೆ ಸೇರಿಸಿದ್ದಾರೆ. ಪಿಎಚ್. ಡಿಗೆ ಪ್ರವೇಶವಿದ್ದರೂ ನಿಲಯದ ಪ್ರವೇಶಾತಿ ಸಿಗದ ಈ ದಲಿತ ವಿದ್ಯಾರ್ಥಿಯು ನಿಲಯದ ಕಾರಿಡಾರ್‌ನಲ್ಲಿಯೇ ಮಲಗುತ್ತಿದ್ದಾರೆೆ.

ಒಂದು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನಕ್ಕೆ ಪ್ರವೇಶಾತಿ ಕೊಟ್ಟ ನಂತರ ನಿಲಯದ ಪ್ರವೇಶಾತಿಯನ್ನು ಬಯಸಿದರೆ ಕಡ್ಡಾಯವಾಗಿ ಕೊಡಬೇಕು. ಇಲ್ಲಿ ಪ್ರಶ್ನೆ ಏನೆಂದರೆ ಪಿಎಚ್.ಡಿಗೆ ಪ್ರವೇಶಕೊಟ್ಟು ನಿಲಯಕ್ಕೆ ಪ್ರವೇಶಕೊಡದೆ ಯಾವ ಕಾನೂನಿನಡಿ ಕಪ್ಪು ಪಟ್ಟಿಯಲ್ಲಿ ಸೇರಿಸಿದ್ದೀರಿ? ಸಂಘಟನೆ ಮಾಡುವ ವ್ಯಕ್ತಿಗಳನ್ನು ಕಪ್ಪುಪಟ್ಟಿಯಲ್ಲಿಡಬೇಕು ಎಂದು ರಾಜ್ಯಸರಕಾರದ ಶೈಕ್ಷಣಿಕ ನಿಯಮಾವಳಿಯಾಗಲಿ, ವಿಶ್ವವಿದ್ಯಾನಿಲಯದ ನಿಯಮಾವಳಿಯಾಗಲಿ, ಯುಜಿಸಿ ನಿಯಮಾವಳಿಯಾಗಲಿ ಹೇಳುತ್ತದೆಯೇ? ಕರ್ನಾಟಕ ರಾಜ್ಯ ಸರಕಾರ ಇದನ್ನು ಕೂಡಲೇ ಗಮನಿಸಿ ಕುಲಸಚಿವರ ವಿರುದ್ಧ ಕ್ರಮ ಜರುಗಿಸಿ ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೆ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ನಡೆದ ಆತ್ಮಹತ್ಯೆಯ ಮುಂದುವರಿದ ಭಾಗ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದರೂ ಅಚ್ಚರಿಯಿಲ್ಲ. ಮುಂದೆ ಅದರ ಹೊಣೆಯನ್ನು ಸರಕಾರವೇ ಹೋರಬೇಕಾಗುತ್ತದೆ.

-ಧನಲಕ್ಷ್ಮೀ, ಮಂಡ್ಯ

Writer - -ಧನಲಕ್ಷ್ಮೀ, ಮಂಡ್ಯ

contributor

Editor - -ಧನಲಕ್ಷ್ಮೀ, ಮಂಡ್ಯ

contributor

Similar News