ಗಾಯದ ಹೊಲಿಗೆಯ ಸೋಂಕನ್ನು ತಿಳಿಯುವುದು ಹೇಗೆ....?

Update: 2018-10-02 09:19 GMT

ಶಸ್ತ್ರಚಿಕಿತ್ಸೆ ಸಂದರ್ಭದ ಗಾಯವು ಗುಣವಾಗಲು ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ಶಸ್ತ್ರಚಿಕಿತ್ಸೆಯ ಬಳಿಕ ವಿಶ್ರಾಂತಿಯಲ್ಲಿರುವಾಗ ಹೊಲಿಗೆ ಹಾಕಲಾಗಿರುವ ಗಾಯವು ಸರಿಯಾಗಿ ಗುಣವಾಗುವ ನಿಟ್ಟಿನಲ್ಲಿದೆಯೇ ಇಲ್ಲವೇ ಎಂಬ ಬಗ್ಗೆ ನೀವು ನಿಗಾ ಇರಿಸಬೇಕಾಗುತ್ತದೆ. ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದರೆ ಸಮಸ್ಯೆಯನ್ನು ನಿವಾರಿಸಲು ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯವಾಗುತ್ತದೆ.

ಸೋಂಕಿನ ಲಕ್ಷಣಗಳೇನು....?

ಹೆಚ್ಚಿನ ಸಂದರ್ಭಗಳಲ್ಲಿ ಹೊಲಿಗೆಯು ಸೋಂಕಿಗೊಳಗಾಗಿದ್ದರೆ ಬಳಲಿಕೆ ಅಥವಾ ಒಟ್ಟಾರೆಯಾಗಿ ಅಸ್ವಸ್ಥತೆಯ ಅನುಭವದಂತಹ ಆರಂಭಿಕ ಲಕ್ಷಣಗಳು ಕಂಡುಬರುತ್ತವೆ. ಅಸ್ವಸ್ಥತೆಯ ಅನುಭವ ಅಥವಾ ಜ್ವರ ಹೊಲಿಗೆಯು ಸೋಂಕಿಗೊಳಗಾಗಿರುವ ಸಾಧ್ಯತೆಯನ್ನು ಸೂಚಿಸುತ್ತದೆ.

ಹೊಲಿಗೆ ಹಾಕಲಾದ ಭಾಗವು ಕೆಂಪಗಾಗುವುದು ಅಥವಾ ಬಾತುಕೊಳ್ಳುವುದು, ಆ ಭಾಗದ ಚರ್ಮವನ್ನು ಮುಟ್ಟಿದರೆ ಬಿಸಿಯ ಅನುಭವ,ಜ್ವರ,ಹೊಲಿಗೆ ಹಾಕಲಾದ ಜಾಗದಲ್ಲಿ ನೋವು ಮತ್ತು ಮೃದುತನ,ದುಗ್ಧಗ್ರಂಥಿಗಳ ಊತ,ಹೊಲಿಗೆಯಿಂದ ರಕ್ತ ಅಥವಾ ಕೀವು ಸೋರಿಕೆ,ಕೆಟ್ಟ ವಾಸನೆ ಇವು ಹೊಲಿಗೆಯು ಸೋಂಕಿಗೊಳಗಾಗಿದೆ ಎನ್ನುವುದನ್ನು ಸೂಚಿಸುವ ಲಕ್ಷಣಗಳಾಗಿವೆ.

ಹೊಲಿಗೆಗಳಲ್ಲಿ ಸೋಂಕುಂಟಾಗಲು ಸಂಭಾವ್ಯ ಕಾರಣಗಳು

ಗಾಯಗಳಿಗೆ ಅಥವಾ ಶಸ್ತ್ರಚಿಕಿತ್ಸೆಯ ನಂತರದ ಗಾಯಗಳಿಗೆ ಹಾಕಲಾದ ಹೊಲಿಗೆಗಳು ಸ್ವತಃ ಗಾಯಗಳಂತೆ ವರ್ತಿಸಿ ಕೀಟಾಣುಗಳು ದೇಹದೊಳಗೆ ಪ್ರವೇಶಿಸಲು ಅವಕಾಶ ನೀಡಬಹುದು. ಇದು ನಿಮ್ಮನ್ನು ಸೋಂಕಿಗೆ ಸುಲಭಭೇದ್ಯರನ್ನಾಗಿಸುತ್ತದೆ. ಬ್ಯಾಕ್ಟೀರಿಯಾಗಳು ಹೊಲಿಗೆಯ ಸೋಂಕಿಗೆ ಕಾರಣವಾಗುತ್ತವೆ. ಸ್ಟ್ರೆಪ್ಟೊಕೋಕಸ್,ಸುಡೊಮೊನಾಸ್ ಮತ್ತು ಸ್ಟಾಫಿಲೊಕೋಕಸ್ ಇವು ಸೋಂಕನ್ನುಂಟು ಮಾಡುವ ಸಾಮಾನ್ಯ ಬ್ಯಾಕ್ಟೀರಿಯಾಗಳಾಗಿವೆ.

ಹೊಲಿಗೆ ಹಾಕುವ ಮುನ್ನ ಗಾಯವನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ,ಗಾಯಕ್ಕೆ ಕಾರಣವಾದ ವಸ್ತುವು ಕೀಟಾಣುಗಳನ್ನು ಹೊಂದಿದ್ದರೆ,ನೀವು ಹಿರಿಯ ವ್ಯಕ್ತಿಗಳಲ್ಲಿ ಸೇರಿದ್ದರೆ ಮತ್ತು ಅತಿಯಾದ ದೇಹತೂಕವನ್ನು ಹೊಂದಿದ್ದರೆ,ಶಸ್ತ್ರಚಿಕಿತ್ಸೆ ಎರಡು ಗಂಟೆಗಳಿಗೂ ಹೆಚ್ಚಿನ ಅವಧಿಯದಾಗಿದ್ದರೆ,ನೀವು ಮಧುಮೇಹಿಗಳಾಗಿದ್ದರೆ, ಧೂಮ್ರಪಾನಿಯಾಗಿದ್ದರೆ,ಶಸ್ತ್ರಚಿಕಿತ್ಸೆಗೆ ಮುನ್ನ ಉಪಕರಣಗಳನ್ನು ಸ್ವಚ್ಛಗೊಳಿಸಿರದಿದ್ದರೆ,ಗಾಯವು ಆಳವಾಗಿದ್ದರೆ ಮತ್ತು ನೀವು ದುರ್ಬಲ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದರೆ ಇವೂ ಹೊಲಿಗೆಯು ಸೊಂಕಿಗೊಳಗಾಗಲು ಕಾರಣಗಳಾಗುತ್ತವೆ.

ಹೊಲಿಗೆಗಳು ಸೋಂಕಿಗೊಳಗಾದರೆ ಏನಾಗುತ್ತದೆ?

ತೀವ್ರ ನೋವು ಮತ್ತು ಊತದ ಜೊತೆಗೆ ಸೋಂಕಿಗೊಳಗಾದ ಹೊಲಿಗೆಗಳಿಗೆ ಚಿಕಿತ್ಸೆಯನ್ನು ಪಡೆಯದಿದ್ದರೆ ಅದು ಸ್ಥಿತಿಯನ್ನು ತೀವ್ರವಾಗಿ ಹದಗೆಡಿಸಬಹುದು. ಸೋಂಕು ಚರ್ಮದ ಇತರೆಡೆ ಮತ್ತು ಶರೀರದ ಇತರ ಭಾಗಗಳಿಗೆ ಹರಡಬಹುದು.

ಚರ್ಮದ ಕೆಳಗಿನ ಅಂಗಾಂಶಗಳ ಉರಿಯೂತ,ಕೀವು ಮತ್ತು ಹುಣ್ಣಿಗೂ ಇದು ಕಾರಣವಾಗಬಹುದು.

ಹೊಲಿಗೆಗಳ ಸೋಂಕನ್ನು ತಡೆಯುವುದು ಹೇಗೆ?

ಹೊಲಿಗೆ ಹಾಕಲಾದ ಜಾಗವು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ಬಳಿಕ ಗಾಯಕ್ಕೆ ಬ್ಯಾಂಡೇಜ್ ಮಾಡಲಾಗುತ್ತದೆ, ಈ ಬ್ಯಾಂಡೇಜ್‌ನ್ನು ಯಾವಾಗ ತೆಗೆಯಬೇಕು ಎನ್ನುವುದನ್ನು ನಿಮ್ಮ ವೈದ್ಯರಿಂದ ಸರಿಯಾಗಿ ತಿಳಿದುಕೊಳ್ಳಿ. ಹೊಲಿಗೆ ಹಾಕಲಾದ ಭಾಗವನ್ನು ಸ್ವಚ್ಛಗೊಳಿಸಲು ಬಿಸಿನೀರು ಮತ್ತು ಸಾಬೂನು ಬಳಸಬೇಕು,ನಂತರ ಅದನ್ನು ಒಣ ಟವೆಲ್‌ನಿಂದ ಒತ್ತಿ ಒಣಗಿಸಿ. ನಿಮ್ಮ ಹೊಲಿಗೆಯ ಜಾಗವು ಸದಾ ಒಣಗಿರುವಂತೆ ನೋಡಿಕೊಳ್ಳಿ. ಹೊಲಿಗೆ ಹಾಕಿದ ಬಳಿಕ ಕನಿಷ್ಠ ಒಂದು ದಿನವಾದರೂ ಆ ಜಾಗ ಹಸಿಯಾಗದಂತೆ ನೋಡಿಕೊಳ್ಳಿ. ಸ್ನಾನದ ಬಳಿಕ ಹೊಲಿಗೆಗಳನು ಟವೆಲ್‌ನಿಂದ ಒತ್ತಿ. ಈಜು ಅಥವಾ ಟಬ್‌ನಲ್ಲಿ ಸ್ನಾನ ಮಾಡಬೇಡಿ.

ಹೊಲಿಗೆಗಳನ್ನು ಸ್ಪರ್ಶಿಸಬೇಡಿ. ಆದರೆ ಮುಟ್ಟುವುದು ಅನಿವಾರ್ಯವಾಗಿದ್ದರೆ ನಿಮ್ಮ ಕೈಗಳು ಸ್ವಚ್ಛವಾಗಿವೆ ಎನ್ನುವುದನ್ನು ಮೊದಲು ಖಚಿತ ಪಡಿಸಿಕೊಳ್ಳಿ. ಉಗುರುಗಳ ಕೆಳಗೆ ಬ್ಯಾಕ್ಟೀರಿಯಾಗಳಿರುವುದು ಸಾಮಾನ್ಯ,ಹೀಗಾಗಿ ಹೊಲಿಗೆಯ ಜಾಗದಲ್ಲಿ ಕೆರೆದುಕೊಂಡರೆ ಅದು ಸೋಂಕಿಗೆ ಕಾರಣವಾಗಬಹುದು.

ಗಾಯಕ್ಕೆ ಹೊಲಿಗೆಗಳೂ ಇದ್ದಾಗ ಶ್ರಮದ ಕೆಲಸಗಳು ಬೇಡ. ವ್ಯಾಯಾಮ ಮಾಡುವುದರಿಂದ ಹೊಲಿಗೆಗಳು ಬಿಚ್ಚಿಕೊಳ್ಳಬಹುದು. ಸಾಮಾನ್ಯ ದೈಹಿಕ ಚಟುವಟಿಕೆಗಳಿಗೆ ಯಾವಾಗ ಮರಳಬಹುದು ಎಂಬ ಬಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News