ಗಾಂಧಿ ಮಾರ್ಗದಿಂದಲೇ ಭಾರತದ ಅಭಿವೃದ್ಧಿ ಸಾಧ್ಯ: ರಂಗಕರ್ಮಿ ಪ್ರಸನ್ನ

Update: 2018-10-02 16:11 GMT

ಬೆಂಗಳೂರು, ಅ.2: ಅಭಿವೃದ್ಧಿಯ ಹರಿಕಾರ ಎಂದು ಮಹಾತ್ಮಗಾಂಧಿಯನ್ನು ಸ್ವೀಕರಿಸಬೇಕಾದ ಕಾಲ ಬಂದಿದ್ದು, ಈಗ ಭಾರತ ಅಭಿವೃದ್ಧಿಯಾಗಬೇಕಾದರೆ ಗಾಂಧಿ ಮಾರ್ಗದಿಂದ ಮಾತ್ರ ಸಾಧ್ಯ ಎಂದು ರಂಗಕರ್ಮಿ ಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ-2018 ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ದೇಶದ ಎಲ್ಲ ಕಡೆಗಳಲ್ಲಿ ಬೃಹತ್ ಯಂತ್ರೋದ್ಯಮ ಹಾಗೂ ಬೃಹತ್ ಯೋಜನೆಗಳ ಸುತ್ತಲೇ ಗಿರಕಿ ಹೊಡೆಯುತ್ತಿದೆ. ನಗರ ಕೇಂದ್ರಿತವಾಗಿರುವ ಹಾಗೂ ಮಾನವರನ್ನು ಮಾರುಕಟ್ಟೆಯ ಗುಲಾಮರನ್ನಾಗಿಸಿದ್ದ ಅಭಿವೃದ್ಧಿಯ ಮಾದರಿಗಳನ್ನು ತಿರಸ್ಕರಿಸಬೇಕಾದ ಕಾಲ ಸನ್ನಿಹಿತವಾಗಿದೆ. ಆದರೆ, ಎಲ್ಲವನ್ನೂ ಏಕಕಾಲದಲ್ಲಿ ತಿರಸ್ಕರಿಸಲು ಸಾಧ್ಯವಿಲ್ಲ. ಯಂತ್ರಸ್ಥಾವರಗಳು ಹಾಗೂ ಬೃಹತ್ ಯೋಜನೆಗಳು, ಮಹಾನಗರಗಳನ್ನು ದೀಪ ಆರಿಸಿದಷ್ಟು ಸುಲಭವಾಗಿ ಆರಿಸಿ ಬಿಡಲು ಸಾಧ್ಯವಿಲ್ಲ. ನಿಧಾನವಾಗಿ ಎಲ್ಲವನ್ನೂ ಕಾರ್ಯರೂಪಗೊಳಿಸಬೇಕು ಎಂದರು.

ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದು ಗಾಂಧಿಮಾರ್ಗ. ಅದು ಸರಳ ಬದುಕಿನ ಮಾರ್ಗವಾಗಿದೆ. ಆದರೆ, ಇಂದಿನ ದಿನಗಳಲ್ಲಿ ಬಲಪಂಥೀಯ ರಾಜಕಾರಣವು ವಿಶ್ವದಾದ್ಯಂತ ಧಾರ್ಮಿಕ ಅಸಹಿಷ್ಣುತೆ ಹಾಗೂ ಆರ್ಥಿಕ ಅಸಹಿಷ್ಣುತೆಗಳನ್ನು ಬೆಸೆಯುತ್ತಿದೆ. ಪಾರಮಾರ್ಥಿಕ ಕ್ಷೇತ್ರ ಮತ್ತು ಆರ್ಥಿಕ ಕ್ಷೇತ್ರಗಳನ್ನು ಬೆಸೆಯುವ ರೀತಿ ಇದಲ್ಲ. ಗಾಂಧಿ ಮಾರ್ಗದಿಂದ ಅಷ್ಟೇ ಅದನ್ನು ಬೆಸೆಯಲು ಸಾಧ್ಯ ಎಂದು ಅವರು ಹೇಳಿದರು.

ದೇಶದಲ್ಲಿ ಬಹುದೊಡ್ಡ ಕಾಲಘಟ್ಟ ಅಂತ್ಯವಾಗುತ್ತಾ ಬಂದಿದೆ. 2008 ರಲ್ಲಿ ದೇಶಕ್ಕೆ ಕಾಲಿಟ್ಟ ಆರ್ಥಿಕ ಸಂಕಷ್ಟವು ಇಂದಿಗೂ ಮುಂದುವರಿದಿದ್ದು, ಮಾರಣಾಂತಿಕ ಕಾಯಿಲೆ ರೀತಿಯಲ್ಲಿ ಹರಡಿಕೊಂಡಿದೆ. ಅದು ಮನುಷ್ಯರಲ್ಲಿ ಭ್ರಮೆಯನ್ನು ಹುಟ್ಟಿಸುತ್ತಿದ್ದು, ಮರಣದತ್ತ ಕರೆದೊಯ್ಯುತ್ತಿದೆ ಎಂದು ಅವರು ತಿಳಿಸಿದರು.

ಪರಿಸರವು ನಾಶವಾಗುತ್ತಿದ್ದು, ಪಶ್ಚಿಮಘಟ್ಟಗಳು ಜರುಗಿ, ಕೊಚ್ಚಿಕೊಂಡು ಹೋಗುತ್ತಿವೆ. ಹೆಚ್ಚು ಮಳೆ ಬಿದ್ದ ವರ್ಷವೇ ಹೆಚ್ಚು ಬರಗಾಲಕ್ಕೆ ತುತ್ತಾಗಿವೆ. ವರ್ಷವಿಡೀ ಹರಿಯುತ್ತಿದ್ದ ನದಿಗಳಿಂದು ಬರಿದಾಗಿವೆ. ಒಂದು ಕಾಲದಲ್ಲಿ ಆಧುನಿಕತೆಯ ಮೇರುಕೃತಿಗಳಂತೆ ಕಾಣುತ್ತಿದ್ದ ನಗರಗಳು, ವಿಪರೀತ ಚಲನಶೀಲತೆಯಿಂದಾಗಿ ಚಲಿಸಲಾರದೆ ನಿಂತು ದೂಳು ತಿನ್ನುತ್ತಿವೆ. ವಿಷದ ವಾತಾವರಣ ಹೆಚ್ಚುತ್ತಿದ್ದು, ಸಂಪತ್ತು ಎಲ್ಲವೂ ಕೆಲವರ ಜೇಬಿಗೆ ಇಳಿಯುತ್ತಿದೆ. ಬಡವ, ಬಲ್ಲಿದರ ಅಂತರ ಹಿಗ್ಗಿಸುತ್ತಿದೆ. ಉದ್ಯೋಗ ಕೊಲ್ಲುತ್ತಿದೆ. ರಾಜಕಾರಣ ಹಾಗೂ ಧರ್ಮಕಾರಣ ಎರಡನ್ನೂ ಭ್ರಷ್ಟಗೊಳಿಸುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಎಲ್ಲ ಸಮುದಾಯದಲ್ಲಿಯೂ ಮೊದಲಿನಿಂದಲೂ ಕೆನೆ ಪದರವಿತ್ತು, ಮುಂದೆಯೂ ಇರುತ್ತದೆ. ಆದರೆ, ಈಗ ಅದು ಒಡೆದ ಹಾಲಿನಂತಾಗಿದ್ದು, ಪೋಷಕಾಂಶ ಮೇಲೆದ್ದು ನಿಂತಿದೆ. ಗಲೀಜು ನೀರು ಕೆಳಗುಳಿದಿದೆ. ಗ್ರಾಮಗಳು ಹಾಗೂ ನಗರ ಕೊಳಗೇರಿಗಳು ಗಲೀಜು ನೀರಿಗಾಗಿ ಬಡಿದಾಡುವಂತ ಸ್ಥಿತಿ ನಿರ್ಮಾಣವಾಗಿದೆ. 20 ನೆ ಶತಮಾನವು ವಿಜ್ಞಾನವನ್ನು ಮುನ್ನಡೆಸಿತು. ವಿವೇಕಾನಂದ, ಗಾಂಧಿ, ಅಂಬೇಡ್ಕರ್, ಬುದ್ಧ, ಬಸವ ಎಲ್ಲರನ್ನೂ ಎತ್ತಿ ಹಿಡಿಯಿತು. ಸಮಾನತೆ ಹಾಗೂ ಸಹಕಾರ ತತ್ವಗಳನ್ನು ಪ್ರಚುರಪಡಿಸಿತು. ವಿಶ್ವ ಮಾನವನಾಗುವ ಕನಸನ್ನು ಠಾಗೂರ್ ಹಾಗೂ ಕುವೆಂಪು ಎತ್ತಿ ಹಿಡಿಯುವಂತೆ ಮಾಡಿತು ಎಂದರು.

ಆದರೆ, 21 ನೆ ಶತಮಾನದಲ್ಲಿ ನಾವು ಯಾರು ವಿಶ್ವಮಾನವರಾಗಲಿಲ್ಲ. ಕೆಲವರ ಹಿತಕ್ಕಾಗಿ ಸ್ವಾರ್ಥಕ್ಕಾಗಿ ಮನುಕುಲ ಮತ್ತು ಜೀವಕುಲ ಎರಡನ್ನೂ ಒತ್ತೆಯಾಗಿಸಿದೆವು ಎಂದ ಅವರು, ಬುದ್ಧ, ಬಸವ, ಅಂಬೇಡ್ಕರ್‌ರನ್ನು ಅಭಿವೃದ್ಧಿಯ ಹರಿಕಾರರು ಎಂದು ಸ್ವೀಕರಿಸಬೇಕಿದೆ. ಪಾರಮಾರ್ಥಿಕ ಮಂದಿರಗಳಿಂದ ಎಲ್ಲರನ್ನೂ ಬಿಡುಗಡೆ ಮಾಡಬೇಕಿದೆ ಎಂದು ಕರೆ ನೀಡಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ರಾಜ್ಯಾದ್ಯಂತ ಗುಡಿ ಕೈಗಾರಿಕೆಗಳನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಎಲ್ಲರೂ ಗೌರವಯುತವಾಗಿ ಜೀವನ ನಡೆಸುವ ಸಲುವಾಗಿ ಕೆಲವು ಬದಲಾವಣೆಗಳನ್ನು ಮಾಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಸನ್ನರಂತಹ ಅನುಭವವುಳ್ಳವರ ಸಲಹೆ ಸ್ವೀಕಾರ ಮಾಡುತ್ತೇನೆ. ಅದಕ್ಕಾಗಿ ವಿಶೇಷ ಕಾಳಜಿ ವಹಿಸುತ್ತೇನೆ ಎಂದು ಭರವಸೆ ನೀಡಿದರು.

ರಾಜ್ಯ ಅಭಿವೃದ್ಧಿಯಾಗಬೇಕಾದರೆ ಹಿರಿಯರ ಚಿಂತನೆ, ಮಾರ್ಗದರ್ಶನ ಅತ್ಯಗತ್ಯವಾಗಿದೆ ಎಂದ ಅವರು, ರಾಜ್ಯದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುವ ಮೂಲಕ ದೊಡ್ಡ ತಪ್ಪು ಮಾಡುತ್ತಿದ್ದಾರೆ. ಅದನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸರ್ವಜನರನ್ನು ಕಾಪಾಡುವ, ಸರ್ವಜನರ ನಾಡು ನಿರ್ಮಾಣ ಮಾಡಬೇಕಾದರೆ ಗಾಂಧಿ ತತ್ವಗಳು, ಚಿಂತನೆ ಮಾರ್ಗವಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ, ವಾರ್ತಾ ಇಲಾಖೆಯ ನಿರ್ದೇಶಕ ವಿಶುಕುಮಾರ್ ಹಾಗೂ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಉಪಸ್ಥಿತರಿದ್ದರು. ಇದೇ ವೇಳೆ ಮಕ್ಕಳಿಗಾಗಿ ‘ಬಾಲರ ಬಾಪು’, ‘ಬಾಪು ಗಾಂಧಿ 150’ ಹಾಗೂ ಬೋಳುವಾರು ಮಹಮ್ಮದ್ ಕುಂಙ ಅವರ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ’ ಕೃತಿಗಳು ಬಿಡುಗಡೆ ಮಾಡಲಾಯಿತು.

ರಾಜ್ಯ ಸರಕಾರದಿಂದ ನನಗೆ ನೀಡಿರುವ ಪ್ರಶಸ್ತಿಯನ್ನು ಕೈಮಗ್ಗದಿಂದಲೇ ಸ್ವಾಭಿಮಾನದಿಂದ ಜೀವನ ನಡೆಸುತ್ತಿರುವ ಚರಕ ಸಂಸ್ಥೆಯ ಶ್ರಮಜೀವಿ ಆಶ್ರಮಕ್ಕೆ ನೀಡುತ್ತಿದ್ದೇನೆ. ಸರಕಾರ ಕೈಮಗ್ಗ ಕ್ಷೇತ್ರದ ಬಗ್ಗೆ ಹೆಚ್ಚು ಗಮನ ನೀಡಬೇಕು. ಅದನ್ನು ಉಳಿಸಲು ಸಹಕಾರ ನೀಡಬೇಕು.

-ಪ್ರಸನ್ನ, ರಂಗಕರ್ಮಿ ಹಾಗೂ ಪ್ರಶಸ್ತಿ ಪುರಸ್ಕೃತರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News