ಬೆಂಗಳೂರು: ಗ್ರಾಮ ಸ್ವರಾಜ್ ಕನಸು ನನಸಾಗಿಸಲು ರೈತರ ಆಗ್ರಹ

Update: 2018-10-02 17:08 GMT

ಬೆಂಗಳೂರು, ಅ.2: ಗಾಂಧೀಜಿ ಅವರ ಗ್ರಾಮ ಸ್ವರಾಜ್ ಕನಸನ್ನು ನನಸು ಮಾಡಲು ಸರಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.

ಮಂಗಳವಾರ ನಗರದ ಮೌರ್ಯ ವೃತ್ತದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, ಗಾಂಧೀಜಿಯವರು ಸ್ವಾತಂತ್ರ ನಂತರದಲ್ಲಿನ ಗ್ರಾಮೀಣ ಭಾಗವನ್ನು ಗುಡಿ ಕೈಗಾರಿಕೆಗಳ ಮೂಲಕ ಉದ್ಯೋಗ ಸೃಷ್ಟಿ ಮಾಡಬೇಕು, ಸ್ವದೇಶಿ ಚಳವಳಿ ಮುಂದುವರೆಸಬೇಕು ಎಂಬ ಕನಸು ಕಂಡಿದ್ದರು. ಆದರೆ, ಪ್ರಸ್ತುತ ಅಧಿಕಾರದಲ್ಲಿರುವ ರಾಜಕಾರಣಿಗಳು ಇದಕ್ಕೆ ತದ್ವಿರುದ್ಧ ನಡೆದುಕೊಳ್ಳುತ್ತಿದ್ದಾರೆ ಎಂದು ಸತ್ಯಾಗ್ರಹದಲ್ಲಿ ನಿರತರಾಗಿದ್ದ ರೈತರು ಆರೋಪಿಸಿದರು.

ಉಪವಾಸ ಸತ್ಯಾಗ್ರಹವನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಇಡೀ ವಿಶ್ವಕ್ಕೆ ಗಾಂಧೀಜಿಯವರು ಅಹಿಂಸಾ ತತ್ವ ತಿಳಿಸಿಕೊಟ್ಟಿದ್ದರು. ಭಾರತೀಯರಾದ ನಾವು ವಿಶ್ವದ ಯಾವುದೇ ದೇಶಕ್ಕೆ ಭೇಟಿ ನೀಡಿದರೂ ಮಹಾತ್ಮಾ ಗಾಂಧಿಯನ್ನು ನೋಡಿದಷ್ಟು ಖುಷಿ ಪಡುತ್ತಿದ್ದಾರೆ. ಆದರೆ, ನಮ್ಮ ದೇಶದಲ್ಲಿಯೇ ಗಾಂಧಿ ಸಿದ್ಧಾಂತಗಳನ್ನು ಅಳವಡಿಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕೀಯ ಪಕ್ಷಗಳು ಗಾಂಧೀಜಿಯವರನ್ನು ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ವಿದೇಶಿ ಕಂಪೆನಿಗಳಿಗೆ ರತ್ನಗಂಬಳಿ ಹಾಸುವ ಮೂಲಕ ಸ್ವದೇಶಿ ಸಂಸ್ಕೃತಿಯನ್ನು ನಾಶ ಪಡಿಸುತ್ತಿದ್ದಾರೆ. ವಿದೇಶಿ ಕಂಪೆನಿಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದು, ಗಾಂಧಿಜೀಯವರ ಸಿದ್ಧಾಂತಗಳನ್ನು ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News