ಬಾಪೂಜಿಯವರನ್ನು ಪೂಜಿಸುವುದು ಅವರವರ ಇಷ್ಟ: ಸುಮಿತ್ರ ಗಾಂಧಿ

Update: 2018-10-02 17:20 GMT

ಕುಲಕರ್ಣಿ ಬೆಂಗಳೂರು, ಅ. 2: ದೇಶದ ಆಸ್ತಿಯಾದ ಬಾಪೂಜಿಯವರನ್ನು ಪೂಜಿಸುವುದು ಅವರವರ ಇಷ್ಟಕ್ಕೆ ಬಿಟ್ಟ ವಿಚಾರವೆಂದು ಗಾಂಧೀಜಿಯವರ ಮೂರನೆ ಪುತ್ರ ರಾಮದಾಸ್ ಗಾಂಧಿಯವರ ಪುತ್ರಿ ಸುಮಿತ್ರ ಗಾಂಧಿ ಕುಲಕರ್ಣಿ ಅಭಿಪ್ರಾಯಪಟ್ಟರು.

ಮಂಗಳವಾರ ನಗರದ ಪ್ರೆಸ್‌ಕ್ಲಬ್ ಆವರಣದಲ್ಲಿ ಗಿಡ ನೆಡುವ ಮೂಲಕ ಗಾಂಧೀಜಿಯವರ 150ನೆ ಜಯಂತಿಗೆ ಚಾಲನೆ ನೀಡಿ, ಹಸಿರು ಉಳಿಸಿ ಬೆಳೆಸಬೇಕೆಂಬ ಸಂದೇಶ ಸಾರುವ ಮೂಲಕ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಗಾಂಧಿಯನ್ನು ಪೂಜಿಸುವುದು ಅವರವರ ಇಷ್ಟಕ್ಕೆ ಸಂಬಂಧಿಸಿದ್ದು, ನಾನು-ನೀವು ಹೇಳಿದರೆ ಪೂಜಿಸಬೇಕೆಂದೇನು ಇಲ್ಲ, ಅವರವರ ಭಾವಕ್ಕೆ ಬಿಟ್ಟ ವಿಚಾರವಾಗಿದೆ ಎಂದು ಹೇಳಿದರು.

ಬಾಪೂಜಿ ತಮ್ಮ ಜೀವಿತ ಅವಧಿಯಲ್ಲಿ ದೇಶದ ಒಳಿತಿಗೆ ಅನೇಕ ಮಾರ್ಗದರ್ಶನ ನೀಡಿದ್ದಾರೆ. ಮಹಾತ್ಮರ ಮರಣ ನಂತರ ಅಧಿಕಾರಕ್ಕೆ ಬಂದಿರುವವರು ಅವರವರದೇ ರೀತಿಯಲ್ಲಿ ಚಿಂತಿಸಿದರೆ ಅದಕ್ಕೆ ಅಚ್ಚರಿ ಪಡುವ ಅವಶ್ಯಕತೆ ಇಲ್ಲ. ಅಲ್ಲದೆ, ಯುವಕರು ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಬಾಪೂಜಿ ಸತ್ಯ ಹಾಗೂ ಆದರ್ಶಗಳ ಪ್ರತಿರೂಪ. ಅವರು ಕುಟುಂಬಕ್ಕೆ ಸೀಮಿತರಲ್ಲ, ರಾಷ್ಟ್ರಕ್ಕೆ ಸಮರ್ಪಿತರು. ನೇರ ನಡೆನುಡಿ, ಸ್ವನಿರ್ಧಾರ, ಮನಸ್ಥಿತಿಯ ಹಿಡಿತದ ಪರಿಸ್ಥಿತಿಯನ್ನು ಸುಧಾರಿಸುವ ಧೈರ್ಯ ಇದ್ದರೆ ಬದುಕು ಸುಲಭ. ಅದೇ ರೀತಿ ಅಹಿಂಸೆ ಕೂಡಾ ಅಷ್ಟೇ ಸಹಜವಾದದ್ದು. ಸತ್ಯದ ಹಾದಿಯಲ್ಲಿ ನಡೆದರೆ ಅಹಿಂಸೆಯ ಪಾಲನೆಯನ್ನು ನಿಭಾಯಿಸಲು ಕಷ್ಟವಿಲ್ಲ. ತಾತ ಇಂದು ನಮ್ಮಿಂದಿಗಿಲ್ಲದಿದ್ದರೂ ಅವರ ಆದರ್ಶಗಳು ನಮ್ಮ ಹೃಯದಲ್ಲಿ ಸದಾ ಹಸಿರಾಗಿದೆ ಎಂದರು. ಸತ್ಯ ಹಾಗೂ ಅಹಿಂಸೆಯನ್ನು ಅಳವಡಿಸಿಕೊಳ್ಳುವುದು ಕಷ್ಟ ಎನ್ನುವವರಿದ್ದಾರೆ. ಆದರೆ ಅದೇ ಜೀವನದ ಅವಿಭಾಜ್ಯ ಅಂಗವಾದಾಗ ಖಂಡಿತಾ ಕಷ್ಟವಾಗಲಾರದು. ಸತ್ಯ ಹೇಳಲು ಯಾವುದೇ ತೊಂದರೆಯಿಲ್ಲ. ಸುಳ್ಳಾದರೆ ಉದ್ವೇಗದಿಂದ ತಡವರಿಸುವ ಮಾತುಗಳೇ ಸಾಕ್ಷಿಯಾಗುತ್ತದೆ ಎಂದರು.

ಕುಟುಂಬಕ್ಕೆ ಸೀಮಿತರಲ್ಲ ಬಾಪೂ: ರಾಹುಲ್ ಗಾಂಧಿಯವರು ಹೋದೆಡೆಯಲ್ಲ ಬಾಪೂಜಿಯವರ ಹೆಸರನ್ನು ಬಳಸುತ್ತಾರಲ್ಲ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಡೀ ದೇಶಕ್ಕೆ ಸಲ್ಲುವ ಮಹಾನ್ ಚೇತನ, ಆದ್ದರಿಂದ ಬಾಪೂಜಿ ಹೆಸರು ಬಳಸಿಕೊಂಡಿರುವುದಕ್ಕೆ ಆಶ್ಚರ್ಯ ಪಡಬೇಕಿಲ್ಲ ಎಂದರು.

ನಿಜಕ್ಕೂ ಬೆಂಗಳೂರಿಗರ ಪ್ರೀತಿಗೆ ಧನ್ಯವಾದ. ಬಾಪೂಜಿಯ ಆಚರಣೆಗೆ ನೀವೆಲ್ಲ ಇಲ್ಲಿ ಸೇರಿರುವುದು ಅತ್ಯಂತ ಖುಷಿ ವಿಷಯ. ನಿಮ್ಮೊಂದಿಗೆ ಬೆರೆಯಲೂ ಅವಕಾಶ ಕಲ್ಪಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿ, ಸ್ವತಃ ಅವರೆ ನೆರೆದಿದ್ದ ಮಾಧ್ಯಮ ಮಿತ್ರರಿಗೆ ಸಿಹಿ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಗಾಂಧೀಜಿ ಕುಟುಂಬದ ರಾಚಪ್ಪ, ಪ್ರೆಸ್‌ಕ್ಲಬ್‌ನ ಅಧ್ತಕ್ಷ ಸದಾಶಿವ ಶೆಣೈ, ಕಾರ್ಯದರ್ಶಿ ಕಿರಣ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News