ಬಿಜೆಪಿಯ ಮುಖವಾಣಿಯಲ್ಲಿ ಶಬರಿಮಲೆ ತೀರ್ಪು ಬೆಂಬಲಿಸಿ ಲೇಖನ ಪ್ರಕಟ

Update: 2018-10-04 10:31 GMT

ತಿರುವನಂತಪುರಂ, ಅ.4: ಕೇರಳ ಬಿಜೆಪಿಯ ಮುಖವಾಣಿ, ಮಲಯಾಳಂ ದೈನಿಕ `ಜನ್ಮಭೂಮಿ'ಯಲ್ಲಿ ಪ್ರಕಟವಾದ ಲೇಖನವೊಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡಬೇಕೆಂಬ  ಸುಪ್ರೀಂ ಕೋರ್ಟ್ ತೀರ್ಪಿಗೆ ಬೆಂಬಲ ವ್ಯಕ್ತಪಡಿಸಿದೆ. ಬಿಜೆಪಿಯ ಹಲವು ನಾಯಕರು ತೀರ್ಪಿಗೆ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಲೇಖನ ಮಹತ್ವ ಪಡೆಯುತ್ತದೆ.

ಭಾರತೀಯ ವಿಚಾರ ಕೇಂದ್ರಂ ಇದರ ಉಪ ನಿರ್ದೇಶಕ ಆರ್. ಸಂಜಯನ್ ಅವರು ಬರೆದಿರುವ ಈ ಲೇಖನದ ಶೀರ್ಷಿಕೆ “ಶಬರಿಮಲೆ: ಅನಗತ್ಯ ವಿವಾದಕ್ಕೆ ಮಹತ್ವವಿಲ್ಲ” ಎಂಬುದಾಗಿದೆ.

“ಸುಪ್ರೀಂ ಕೋರ್ಟಿನ ತೀರ್ಪು ದೇವಸ್ಥಾನದ ಈಗಿನ ಪದ್ಧತಿಗಳು ಹಾಗೂ ನಂಬಿಕೆಗಳನ್ನು ಬಾಧಿಸುವುದಿಲ್ಲ. ಅಷ್ಟೇ ಅಲ್ಲದೆ ಮಹಿಳಾ ಭಕ್ತೆಯರ ದೇವಳ ಪ್ರವೇಶಾತಿಯು ದೇವಸ್ಥಾನದ ವೈಭವ ಮತ್ತು ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸುವುದು, ಹಿಂದು ಸಮಾಜದ ಅಥವಾ ಹಿಂದು ನಂಬಿಕೆಗಳ ವಿರುದ್ಧವಾಗಿ ಈ ತೀರ್ಪಿನಲ್ಲಿ ಏನೂ ಇಲ್ಲ'' ಎಂದು ಲೇಖನದಲ್ಲಿ ಸಂಜಯನ್ ಬರೆದಿದ್ದಾರೆ.

“ಈ ಸುಪ್ರೀಂ ಕೋರ್ಟಿನ ತೀರ್ಪಿನ ನೆಪದಲ್ಲಿ ಕೆಲ ಶಕ್ತಿಗಳು ಹಿಂದು ಸಮಾಜದಲ್ಲಿ ಸೈದ್ಧಾಂತಕ ಸಮಸ್ಯೆಗಳನ್ನು ಸೃಷ್ಟಿಸಲು ಯತ್ನಿಸುತ್ತಿವೆ. ಶಬರಿಮಲೆಗೆ ತೆರಳಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ಕೈಗೊಳ್ಳುವ ಹಕ್ಕನ್ನು  ಮಹಿಳೆಯರಿಗೇ ಬಿಟ್ಟು ಬಿಡಬೇಕು,'' ಎಂದೂ ಅವರು ತಿಳಿಸಿದ್ದಾರೆ.

``ದೇವಸ್ಥಾನಗಳು ಮತ್ತು ಅವುಗಳ ಪದ್ಧತಿಗಳನ್ನು ಸಂರಕ್ಷಿಸುವುದು ಅಗತ್ಯವಾದರೂ ಅದೇ ಸಮಯ ಕಾಲದ ಜತೆಗೆ ನಾವೂ ಬದಲಾಗಬೇಕಿದೆ. ವಿಚಾರವಂತಿಕೆಯಿಲ್ಲದ ನಂಬಿಕೆಗಳಿಗೇ ಅಂಟಿಕೊಂಡರೆ ಅದು ಸಮಾಜಕ್ಕೆ ಕಂಟಕವಾಗಬಹದು,'' ಎಂದೂ ಸಂಜಯನ್ ಲೇಖನದಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News