ಮೇಕೆದಾಟು ಅಣೆಕಟ್ಟು ಯೋಜನೆ: ಕೇಂದ್ರ ಸಚಿವ ನಿತಿನ್ ಗಡ್ಕರಿ, ದೇವೇಗೌಡ ಸಮಾಲೋಚನೆ

Update: 2018-10-04 13:27 GMT

ಹೊಸದಿಲ್ಲಿ, ಅ. 4: ಪ್ರಸ್ತಾವಿತ ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗಾಗಿ ಕರ್ನಾಟಕ ಸರಕಾರಕ್ಕೆ ಅಗತ್ಯ ಅನುಮತಿ ನೀಡಲಾಗುವುದು ಎಂದು ಕೇಂದ್ರದ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆಂದು ತಿಳಿಸಲಾಗಿದೆ.

ಬುಧವಾರ ತಮ್ಮನ್ನು ಭೇಟಿ ಮಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರಿಂದ ಈ ಕುರಿತ ಮನವಿ ಸ್ವೀಕರಿಸಿದ ಬಳಿಕ, ಯೋಜನೆ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ತಮಿಳುನಾಡು ಸರಕಾರದೊಂದಿಗೆ ಮಾತುಕತೆ ನಡೆಸುವ ಮೂಲಕ ಅನುಮತಿ ನೀಡಲಾಗುವುದು ಅವರು ತಿಳಿಸಿದ್ದಾರೆ.

ಕಾವೇರಿ ನದಿ ನೀರಿನ ಸದ್ಬಳಕೆ ಹಾಗೂ ಕುಡಿಯುವ ನೀರು ಪೂರೈಕೆ ಉದ್ದೇಶದಿಂದ ಕರ್ನಾಟಕ ಸರಕಾರ ಕೈಗೆತ್ತಿಕೊಳ್ಳಲಿರುವ ಈ ಯೋಜನೆಯಿಂದ ತಮಿಳುನಾಡಿನ ಹಿತಾಸಕ್ತಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ. ಕಾವೇರಿ ನದಿ ನೀರು ಹಂಚಿಕೆ ಮಾಡಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಈ ಯೋಜನೆಯಿಂದ ಉಲ್ಲಂಘನೆಯಾಗದು ಎಂದು ದೇವೇಗೌಡ, ನಿತಿನ್ ಗಡ್ಕರಿಯವರಿಗೆ ಮನವರಿಕೆ ಮಾಡಿಕೊಟ್ಟರು.

ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುವ ಕಾವೇರಿಯ ಹೆಚ್ಚುವರಿ ನೀರನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಮೇಕೆದಾಟು ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ಯೋಜನೆ ರೂಪಿಸಿರುವ ಕರ್ನಾಟಕ, ಜಲವಿದ್ಯುತ್ ಉತ್ಪಾದನೆ ಹಾಗೂ ಬೆಂಗಳೂರು, ರಾಮನಗರ ಮತ್ತು ಕನಕಪುರ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ರೂಪುರೇಷೆ ಸಿದ್ಧಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News